'ಎಲ್ಲ ಕಳ್ಳರಿಗೂ ಮೋದಿ ಉಪನಾಮವಿದೆ' ಎಂದು ಚುನಾವಣಾ ಪ್ರಚಾರದ ವೇಳೆ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಹೂಡಲಾಗಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ನೀಡಲಾಗಿದ್ದ ತಡೆಯಾಜ್ಞೆಯನ್ನು ಗುಜರಾತ್ ಹೈಕೋರ್ಟ್ ಇತ್ತೀಚೆಗೆ ತೆರವುಗೊಳಿಸಿದೆ.
ತನ್ನ ಅರ್ಜಿಯನ್ನು ಸೂರತ್ ಪಶ್ಚಿಮ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಹಿಂಪಡೆದ ಬಳಿಕ, ತಡೆಯಾಜ್ಞೆಯನ್ನು ನ್ಯಾ. ವಿಫುಲ್ ಪಾಂಚೋಲಿ ಅವರಿದ್ದ ಏಕಸದಸ್ಯ ಪೀಠ ತೆರವುಗೊಳಿಸಿತು. ಪೂರ್ಣೇಶ್ ಸಲ್ಲಿಸಿದ್ದ ಅರ್ಜಿ ಆಧಾರದ ಮೇಲೆ ಕಳೆದ ವರ್ಷ ಮಾರ್ಚ್‌ನಲ್ಲಿ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು.
ಕರೋಲ್‌ನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ರಾಹುಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ನೀರವ್ ಮೋದಿ, ಲಲಿತ್ ಮೋದಿ ಅವರಂತಹ ದೇಶಬಿಟ್ಟು ಪರಾರಿಯಾದ ವ್ಯಕ್ತಿಗಳೊಂದಿಗೆ ಹೋಲಿಸಿದ್ದರು. "ನೀರವ್ ಮೋದಿ, ಲಲಿತ್ ಮೋದಿ ಅಥವಾ ನರೇಂದ್ರ ಮೋದಿಯೇ ಇರಲಿ, ಎಲ್ಲಾ ಕಳ್ಳರ ಹೆಸರಿನಲ್ಲಿ ಮೋದಿ ಏಕೆ ಇದೆ?" ಎಂದು ಅವರು ಪ್ರಶ್ನಿಸಿದ್ದರು.
ಈ ಹೇಳಿಕೆಯ ಮೂಲಕ 'ಮೋದಿ' ಉಪನಾಮ ಹೊಂದಿರುವ ಎಲ್ಲ ವ್ಯಕ್ತಿಗಳನ್ನು ರಾಹುಲ್ ದೂಷಿಸಿದ್ದಾರೆ ಎಂದು ಹೇಳಿದ ಪೂರ್ಣೇಶ್ ಅವರು ರಾಹುಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ರಾಹುಲ್ ಅವರನ್ನು ನ್ಯಾಯಾಲಯಕ್ಕೆ ಕರೆಸಿ ಅವರು ಮಾಡಿದ್ದ ಭಾಷಣದ ವೀಡಿಯೊ ಪ್ರದರ್ಶಿಸಿ ಅವರಿಂದ ವಿವರಣೆ ಪಡೆಯುವಂತೆ ಪೂರ್ಣೇಶ್ ಮೋದಿ ಅವರು ನ್ಯಾಯಾಲಯವನ್ನು ಒತ್ತಾಯಿಸಿದ್ದರು. ಆದರೆ ನ್ಯಾಯಾಲಯ ಈ ಮನವಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ಮೆಟ್ಟಿಲೇರಿ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡಬೇಕೆಂದು ಕೋರಿದ್ದರು. ಹೀಗಾಗಿ ಮಾರ್ಚ್‌ನಲ್ಲಿ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.
ಈ ವರ್ಷದ ಫೆಬ್ರುವರಿ 16ರಂದು ಪ್ರಕರಣದ ವಿಚಾರಣೆ ನಡೆದಾಗ ಪೂರ್ಣೇಶ್ ಅವರು ನ್ಯಾಯಾಲಯಕ್ಕೆ ಸಾಕಷ್ಟು ಸಾಕ್ಷ್ಯಗಳು ಸಲ್ಲಿಕೆಯಾಗಿದ್ದು ಹೈಕೋರ್ಟ್‌ನಲ್ಲಿ ಅರ್ಜಿ ಬಾಕಿ ಉಳಿದಿರುವುದರಿಂದ ವಿಚಾರಣೆ ವಿಳಂಬವಾಗುತ್ತಿದೆ. ಹೀಗಾಗಿ ತಾನು ಈ ಹಿಂದೆ ತಡೆಯಾಜ್ಞೆ ನೀಡುವಂತೆ ಕೋರಿದ್ದ ಅರ್ಜಿ ಹಿಂಪಡೆಯಲು ಅನುಮತಿ ನೀಡಬೇಕು ಎಂದು ವಿನಂತಿಸಿದರು. ಈ ಕೋರಿಕೆಯನ್ನು ಹೈಕೋರ್ಟ್ ಮನ್ನಿಸಿ ಅರ್ಜಿ ಹಿಂಪಡೆಯಲು ಅವಕಾಶ ಮಾಡಿಕೊಟ್ಟಿತು.