ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಗುಜರಾತ್ ಹೈಕೋರ್ಟ್ 2022ರ ಜನವರಿ 1ರಿಂದ ಅನ್ವಯವಾಗುವಂತೆ ಯತಿನ್ ಓಝಾ ಅವರ ಹಿರಿಯ ವಕೀಲ ಪದನಾಮವನ್ನು ಪುನರ್ ಸ್ಥಾಪಿಸಿದೆ.
ಡಿಸೆಂಬರ್ 24ರಂದು ನಡೆದ ಪೂರ್ಣ ನ್ಯಾಯಾಲಯದ ಸಭೆಯಲ್ಲಿ ಓಝಾ ಅವರ ಹಿರಿಯ ವಕೀಲ ಹುದ್ದೆಯನ್ನು ಪುನರ್ ಸ್ಥಾಪಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಹೈಕೋರ್ಟ್ ರಿಜಿಸ್ಟ್ರಿಯ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ಹಿನ್ನೆಲೆಯಲ್ಲಿ ಜುಲೈನಲ್ಲಿ ಗುಜರಾತ್ ಹೈಕೋರ್ಟ್ ಓಝಾ ಅವರ ಹಿರಿಯ ವಕೀಲ ಪದನಾಮ ಹಿಂಪಡೆಯುವ ನಿರ್ಧಾರ ಕೈಗೊಂಡಿತ್ತು. ಅಲ್ಲದೇ, ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡು ಅವರನ್ನು ಅಪರಾಧಿ ಎಂದು ಘೋಷಿಸಿತ್ತು.
ನ್ಯಾಯಾಂಗ ನಿಂದನೆ ತೀರ್ಪನ್ನು ಪ್ರಶ್ನಿಸಿ ಓಝಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅಲ್ಲದೇ ತಮ್ಮ ಹಿರಿಯ ವಕೀಲ ಪದನಾಮ ಹಿಂಪಡೆದ ಗುಜರಾತ್ ಹೈಕೋರ್ಟ್‌ನ ಪೂರ್ಣ ನ್ಯಾಯಾಲಯದ ನಿರ್ಧಾರವನ್ನು ಪ್ರಶ್ನಿಸಿ ಪ್ರತ್ಯೇಕವಾಗಿ ರಿಟ್ ಮನವಿ ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಪೀಠವು ಅಕ್ಟೋಬರ್ 28ರಂದು ಹೊರಡಿಸಿದ್ದ ತೀರ್ಪಿನಲ್ಲಿ 2022ರ ಜನವರಿ 1ರಿಂದ ಅನ್ವಯವಾಗುವಂತೆ ಓಝಾ ಅವರ ಹಿರಿಯ ವಕೀಲ ಪದನಾಮವನ್ನು ಎರಡು ವರ್ಷಗಳವರೆಗೆ ಪುನರ್ ಸ್ಥಾಪಿಸಿತ್ತು. ಅಲ್ಲದೇ, ಹಿರಿಯ ವಕೀಲರ ನಡತೆಯನ್ನು ಪರಿಗಣಿಸಿ ಅವರ ಹಿರಿಯ ವಕೀಲ ಪದನಾಮವನ್ನು ಎರಡು ವರ್ಷಗಳ ನಂತರ ವಿಸ್ತರಿಸುವುದು ಗುಜರಾತ್ ಹೈಕೋರ್ಟ್ ವ್ಯಾಪ್ತಿಗೆ ಸೇರುತ್ತದೆ ಎಂದು ಹೇಳಿತ್ತು.
39ನೇ ವಯಸ್ಸಿಗೆ ಹಿರಿಯ ವಕೀಲ ಹುದ್ದೆಗೆ ಪದೋನ್ನತಿ ಪಡೆದಿರುವ ಓಝಾ ಅವರು 17 ಬಾರಿ ಗುಜರಾತ್ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಹೆಸರುವಾಸಿಯಾಗಿರುವ ಓಝಾ ಅವರು ಇದಕ್ಕಾಗಿ ನ್ಯಾಯಾಲಯದ ಕೆಂಗಣ್ಣಿಗೂ ತುತ್ತಾಗಿದ್ದಾರೆ.
ಗುಜರಾತ್ ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ನಿಷ್ಠರಾಗಿದ್ದಾರೆ ಎಂದು 2016ರಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ಓಝಾ ಪತ್ರ ಬರೆದಿದ್ದು ವಿವಾದ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಆರಂಭಿಸಲಾಗಿತ್ತಾದರೂ ಅಂತಿಮವಾಗಿ ಅದನ್ನು ಕೈಬಿಡಲಾಗಿತ್ತು. ಓಝಾ ಅವರು ಗುಜರಾತ್ ವಿಧಾನಸಭೆಯ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.