ಶಾಂತಿ ಕಾಪಾಡುವುದಕ್ಕಾಗಿ ಮುಸ್ಲಿಮರಿಗೆ ಸಾರ್ವಜನಿಕವಾಗಿ ಥಳಿತ: ಗುಜರಾತ್ ಹೈಕೋರ್ಟ್‌ನಲ್ಲಿ ಪೊಲೀಸರ ಸಮರ್ಥನೆ

ಹಿಂದೂಗಳಲ್ಲಿ ಭಯ ಸೃಷ್ಟಿಸುವುದಕ್ಕಾಗಿ ತಮ್ಮ ಸಮುದಾಯದ 159 ಮಂದಿಯೊಂದಿಗೆ ಸೇರಿ ಇವರು ಗಾರ್ಬಾ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಸಂಚು ರೂಪಿಸಿದ್ದರು ಎಂದು ಎಸ್‌ಪಿ ರಾಜೇಶ್ ಕುಮಾರ್ ಗಾಧಿಯಾ ಅವರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
Gujarat High Court
Gujarat High Court

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಐವರು ಮುಸ್ಲಿಂ ಪುರುಷರಿಗೆ ತಾವು ಸಾರ್ವಜನಿಕವಾಗಿ ಥಳಿಸಿರುವುದನ್ನು ಗುಜರಾತ್ ಪೊಲೀಸರು ಸಮರ್ಥಿಸಿಕೊಂಡಿದ್ದಾರೆ. ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಹೀಗೆ ಮಾಡಲಾಯಿತು ಎಂದು ಗುಜರಾತ್ ಹೈಕೋರ್ಟ್‌ಗೆ ಅವರು ತಿಳಿಸಿದ್ದಾರೆ [ಜಾಹಿರ್ಮಿಯಾ ರೆಹಮುಮಿಯಾ ಮಾಲೆಕ್ ಮತ್ತು ಗುಜರಾತ್ ಸರ್ಕಾರದ ನಡುವಣ ಪ್ರಕರಣ].

ಹಿಂದೂ ಸಮುದಾಯದಲ್ಲಿ ಭಯ ಸೃಷ್ಟಿಸುವುದಕ್ಕಾಗಿ  ತಮ್ಮ ಸಮುದಾಯದ 159 ಮಂದಿಯೊಂದಿಗೆ ಸೇರಿ ಇವರು ಖೇಡಾ ಜಿಲ್ಲೆಯ ಉಂಧೇಲಾ ಗ್ರಾಮದಲ್ಲಿ ನಡೆಯುತ್ತಿದ್ದ ಗಾರ್ಬಾ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಕಲ್ಲುತೂರಾಟ ನಡೆಸಿದ್ದಾರೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಖೇಡಾ- ನಡಿಯಾದ್‌ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರಾಜೇಶ್ ಕುಮಾರ್ ಗಧಿಯಾ ಅವರು ವಿವರಿಸಿದ್ದಾರೆ.

"ಈ ನ್ಯಾಯಾಲಯದ ಮುಂದಿರುವ ಅರ್ಜಿದಾರರು, ಅಕ್ಟೋಬರ್ 3, 2022 ರಂದು ನಡೆದ ಗಲಭೆ ಪ್ರಕರಣದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಆರೋಪಿಗಳು. ಗಾರ್ಬಾ ನೃತ್ಯ ಮಾಡುತ್ತಿದ್ದ ಹಿಂದೂ ಸಮುದಾಯದ ಮೇಲೆ ಕಲ್ಲು ತೂರಾಟ ನಡೆಸಿದ ಗುಂಪಿನ ಭಾಗವಾಗಿದ್ದಾರೆ. ಪೂರ್ವಯೋಜಿತವಾದ ಮತ್ತು ಪೂರ್ವಯೋಚಿತವಾದ ಗಲಭೆಯು ಹಿಂದೂ ಸಮುದಾಯದ ಸದಸ್ಯರಲ್ಲಿ ಭಯವನ್ನು ಸೃಷ್ಟಿಸಲು ಮತ್ತು ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರಲೆಂದೇ ನಡೆದಿದೆ, ”ಎಂದು ಅಫಿಡವಿಟ್ ಹೇಳಿದೆ.

ಘಟನೆಯಲ್ಲಿ ಗ್ರಾಮದ ಎಂಟು ಮಂದಿ ಹಿಂದೂ ನಿವಾಸಿಗಳು ಮತ್ತು ಮೂವರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಎಸ್‌ಪಿ ಗಮನಸೆಳೆದರು.

"ಪರಿಣಾಮ, ಅಲ್ಲಿ ದೊಡ್ಡಮಟ್ಟದ ಆಕ್ರಂದನ ಕೇಳಿಬರುತ್ತಿತ್ತು. ಆದ್ದರಿಂದ ಪ್ರದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳಲು ಶಂಕಿತರನ್ನು ಹಿಡಿಯಲಾಯಿತು. ಇದರಿಂದ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ" ಎಂದು ಅಧಿಕಾರಿ ಹೇಳಿದರು.

ಕಲ್ಲು ತೂರಾಟದ ಘಟನೆಯ ನಂತರ ಬಂಧಿಸಲಾದ ಆರೋಪಿ ಮುಸ್ಲಿಂ ಪುರುಷರು ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಎಸ್ಪಿ ಹೇಳಿದರು. "ಅಕ್ಟೋಬರ್ 4, 2022ರಂದು ನಡೆದ ಆಪಾದಿತ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಉಂಡೇಲಾ ಗ್ರಾಮಕ್ಕೆ ಕರೆದೊಯ್ಯುವಾಗ ಪೊಲೀಸ್ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿ ನಿಂದಿಸಲು ಯತ್ನಿಸಿದರು. ಸ್ಥಳದಲ್ಲಿ ಜಮಾಯಿಸಿದ ಜನಸಮೂಹವನ್ನು ಪೊಲೀಸರನ್ನು ಹಲ್ಲೆಗೈಯಲು ಪ್ರೇರೇಪಿಸಿದರು" ಎಂದು ಅಫಿಡವಿಟ್‌ ತಿಳಿಸಿದೆ.

Related Stories

No stories found.
Kannada Bar & Bench
kannada.barandbench.com