ಗುಜರಾತ್ ಹತ್ಯಾಂಕಾಡವು ಪೂರ್ವಯೋಜಿತ ಎಂಬುದಕ್ಕೆ ಒಂದೇ ಒಂದು ಸಣ್ಣ ದಾಖಲೆಯೂ ಇಲ್ಲ ಎಂದು ಶುಕ್ರವಾರ ಸುಪ್ರೀಂ ಕೋರ್ಟ್ ಹೇಳಿದ್ದು, ವಿಶೇಷ ತನಿಖಾ ದಳವು (ಎಸ್‌ಐಟಿ) ಗುಜರಾತ್ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಕ್ಲೀನ್‌ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ವಜಾ ಮಾಡಿತು.
ಲಭ್ಯವಿರುವ ದಾಖಲೆಗಳ ಪ್ರಕಾರ ಉನ್ನತ ಮಟ್ಟದಲ್ಲಿ ದೊಡ್ಡ ಸಂಚು ರೂಪಿಸಲಾಗಿದೆ ಎಂಬುದು ಅರ್ಥಕ್ಕೆ ನಿಲುಕದ್ದು ಎಂದು ದಾಖಲೆಗಳಿಂದ ತಿಳಿದುಬಂದಿದೆ ಎಂದು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಸಿ ಟಿ ರವಿಕುಮಾರ್ ನೇತೃತ್ವದ ತ್ರಿಸದಸ್ಯ ಪೀಠವು ಹೇಳಿದೆ.
“2002ರ ಫೆಬ್ರವರಿ 27ರಂದು ನಡೆದ ಗೋಧ್ರಾ ಹತ್ಯಾಕಾಂಡ ಮತ್ತು ನಂತರದ ಘಟನೆಗಳು ಕ್ರಿಮಿನಲ್ ಕಾರಣದಿಂದ ಪೂರ್ವ ಯೋಜಿತ ಘಟನೆಯಾಗಿವೆ ಎಂಬ ಮೇಲ್ಮನವಿದಾರರ ಮನವಿ ಸಮರ್ಥಿಸಲು ಯಾವುದೇ ದಾಖಲೆ ಇಲ್ಲ” ಎಂದು ನ್ಯಾಯಾಲಯ ಹೇಳಿದೆ.
ಗೋಧ್ರಾ ಹಿಂಸಾಚಾರದ ನಂತರ ಹಿಂದೂಗಳು ತಮ್ಮ ಪ್ರತೀಕಾರ ತೀರಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ನರೇಂದ್ರ ಮೋದಿ (ಅಂದಿನ ಗುಜರಾತ್ ಮುಖ್ಯಮಂತ್ರಿ) ತಮ್ಮ ನೇತೃತ್ವದ ಸಭೆಯಲ್ಲಿ ಕೆಲವು ಅಧಿಕಾರಿಗಳ ಮುಂದೆ ಹೇಳಿದ್ದರು ಎಂಬುದು ಪಿತೂರಿಗೆ ಸಂಬಂಧಿಸಿದ ಆರೋಪಕ್ಕೆ ಆಧಾರವಾಗಿದೆ. ಆದರೆ, ಇದು ತಪ್ಪಾಗಿದ್ದು ಆಧಾರವಿಲ್ಲದೇ ಬಿದ್ದು ಹೋಗುತ್ತದೆ ಎಂದು ಪೀಠ ಹೇಳಿದೆ.
“ಸಂಜೀವ್ ಭಟ್, ಹರೇನ್ ಪಾಂಡ್ಯ ಮತ್ತು ಆರ್ ಬಿ ಶ್ರೀಕುಮಾರ್ ಅವರ ಸಾಕ್ಷ್ಯವು ಕೇವಲ ಸುಳ್ಳಿನಿಂದ ತುಂಬಿದ್ದು, ವಿವಾದವನ್ನು ರಾಜಕೀಯಗೊಳಿಸುವ ಮತ್ತು ರೋಚಕಗೊಳಿಸುವುದಾಗಿದೆ ಎಂಬ ರಾಜ್ಯ ಸರ್ಕಾರದ ವಾದದಲ್ಲಿ ಅರ್ಥವಿದೆ. ಏಕೆಂದರೆ, ಅಂದಿನ ಮುಖ್ಯಮಂತ್ರಿಗಳು ಹೇಳಿಕೆಗಳನ್ನು ನೀಡಿದ್ದರು ಎಂದು ಹೇಳಲಾದ ಸಭೆಯಲ್ಲಿ ಭಾಗಿಯಾಗದ ವ್ಯಕ್ತಿಗಳು ತಮ್ಮನ್ನು ತಾವು ಪ್ರತ್ಯಕ್ಷದರ್ಶಿಗಳು ಎಂದು ಸುಳ್ಳು ಹೇಳಿಕೊಂಡಿದ್ದಾರೆ ಮತ್ತು ಎಸ್‌ಐಟಿಯ ಸಮಗ್ರ ತನಿಖೆಯ ನಂತರ, ಅವರು ಸಭೆಯಲ್ಲಿ ಹಾಜರಿದ್ದರು ಎಂಬುದು ಸುಳ್ಳು ಎಂದು ಸಾಬೀತಾಗಿದೆ. ಉನ್ನತ ಮಟ್ಟದಲ್ಲಿ ಕ್ರಿಮಿನಲ್ ಪಿತೂರಿ ರೂಪಿಸಲಾಗಿದೆ ಎಂಬ ತಪ್ಪು ಆಪಾದನೆಯು ಎಸ್‌ಐಟಿಯ ಸ್ಪಷ್ಟ ತನಿಖೆಯಿಂದ ಕುಸಿದು ಹೋದಂತಾಗಿದೆ” ಎಂದು ಪೀಠ ಹೇಳಿದೆ.
“ಗುಜರಾತ್‌ನ ಅತೃಪ್ತ ಅಧಿಕಾರಿಗಳು ಇತರರೊಂದಿಗೆ ಸೇರಿಕೊಂಡು ಅವರ ಸ್ವಂತ ಅರಿವಿಗೆ ವಿರುದ್ಧವಾಗಿ ಸುಳ್ಳು ಹೇಳುವ ಮೂಲಕ ಸಂಚಲನ ಉಂಟು ಮಾಡಲು ಪ್ರಯತ್ನಿಸಿರುವುದು ನಮಗೆ ತೋರುತ್ತದೆ. ತನಿಖೆಯಿಂದ ಎಸ್‌ಐಟಿಯು ಅವರ ಹೇಳಿಕೆಗಳ ಸುಳ್ಳನ್ನು ಸಂಪೂರ್ಣವಾಗಿ ಬಹಿರಂಗಪಡಿಸಿದೆ” ಎಂದು ತೀರ್ಪಿನಲ್ಲಿ ಹೇಳಲಾಗಿದೆ.
“ಸಂಚಿನ ಸಂಗತಿಯೆಂದರೆ, ಪ್ರಸ್ತುತ ಪ್ರಕ್ರಿಯೆಗಳನ್ನು ಕಳೆದ 16 ವರ್ಷಗಳಿಂದ ಅನುಸರಿಸಲಾಗಿದೆ. ವಂಚಕ ತಂತ್ರವನ್ನು ಹೊರಗೆಡವಲು ಮುಂದಾದ ಪ್ರತಿಯೊಬ್ಬ ಕರ್ತವ್ಯನಿರತರ ದಿಟ್ಟತನವನ್ನು ಪ್ರಶ್ನಿಸುವ ಮೂಲಕ ದುರುದ್ದೇಶ ಕಾರಣಕ್ಕಾಗಿ ವಿಚಾರವನ್ನು ಪ್ರಸ್ತುತಗೊಳಿಸಲಾಗಿದೆ. ವಾಸ್ತವದಲ್ಲಿ ಈ ಪ್ರಕ್ರಿಯೆಯ ದುರ್ಬಳಕೆಯಲ್ಲಿ ತೊಡಗಿರುವವರು ವಿಚಾರಣೆ ಎದುರಿಸಬೇಕು ಮತ್ತು ಕಾನೂನಿನ ರೀತ್ಯಾ ಅವರ ವಿಚಾರದಲ್ಲಿ ಮುಂದುವರಿಯಬೇಕು” ಎಂದು ನ್ಯಾಯಾಲಯ ಹೇಳಿದೆ.
ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ನಡೆದಿದ್ದ ಗುಲ್ಬರ್ಗ್ ಸೊಸೈಟಿ ಗಲಭೆಯ ವೇಳೆ ಎಹ್ಸಾನ್ ಜಾಫ್ರಿ ಅವರನ್ನು ಕೊಲ್ಲಲಾಗಿತ್ತು. 2017ರಲ್ಲಿ ಗುಜರಾತ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿತ್ತು. ಎಸ್‌ಐಟಿ ಸಲ್ಲಿಸಿದ್ದ ಅಂತಿಮ ವರದಿಯನ್ನು ಒಪ್ಪಿಕೊಂಡಿದ್ದ ಮ್ಯಾಜಿಸ್ಟ್ರೇಟ್ ನಿರ್ಧಾರವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಆ ಮೂಲಕ ಎಸ್‌ಐಟಿ ವರದಿ ಪ್ರಶ್ನಿಸಿ ಜಾಫ್ರಿ ಸಲ್ಲಿಸಿದ್ದ ಮನವಿಯನ್ನು ವಜಾ ಮಾಡಿತ್ತು.
ಕೊಲೆ ಆರೋಪದ ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ಎಫ್‌ಐಆರ್ ದಾಖಲಿಸುವಂತೆ 2006ರಲ್ಲಿ ಅಂದಿನ ಗುಜರಾತ್ ಪೊಲೀಸ್ ಮಹಾನಿರ್ದೇಶಕರಿಗೆ ಜಾಫ್ರಿ ದೂರು ನೀಡಿದ್ದರು. ಗುಜರಾತ್ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ, ಇತರೆ ರಾಜಕಾರಣಿಗಳು ಹಾಗೂ ಅಧಿಕಾರಿಗಳ ವಿರುದ್ಧ ದೂರು ನೀಡಲಾಗಿತ್ತು.
ಗಲಭೆಗೆ ಸಂಬಂಧಿಸಿದಂತೆ ವಿವಿಧ ವಿಚಾರಣೆಗಳ ಕುರಿತು ವರದಿ ಸಲ್ಲಿಸಲು 2008ರಲ್ಲಿ ಸುಪ್ರೀಂ ಕೋರ್ಟ್ ಎಸ್‌ಐಟಿ ರಚಿಸಿತ್ತು. ಬಳಿಕ ಜಾಫ್ರಿ ಅವರು ದೂರಿನ ಕುರಿತು ತನಿಖೆ ನಡೆಸಲು ಎಸ್‌ಐಟಿಗೆ ನ್ಯಾಯಾಲಯ ಆದೇಶ ಮಾಡಿತ್ತು.
2011ರಲ್ಲಿ ಎಸ್‌ಐಟಿಯು ಮೋದಿಗೆ ಕ್ಲೀನ್‌ಚಿಟ್ ನೀಡಿತ್ತು. ಸಂಬಂಧಿತ ಅಂತಿಮ ವರದಿಯನ್ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಆದೇಶಿಸಿದ್ದ ಸುಪ್ರೀಂ ಕೋರ್ಟ್, ವರದಿ ಆಕ್ಷೇಪಣೆ ಸಲ್ಲಿಸಲು ಜಾಫ್ರಿ ಅವರಿಗೆ ಸ್ವಾತಂತ್ರ್ಯ ಕಲ್ಪಿಸಿತ್ತು.
ಜಾಫ್ರಿ ಅವರಿಗೆ ಎಸ್‌ಐಟಿ ವರದಿಯ ಪ್ರತಿ ನೀಡಿದ ಬಳಿಕ 2013ರಲ್ಲಿ ಅವರು ಎಸ್‌ಐಟಿ ಅಂತಿಮ ವರದಿ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಎಸ್‌ಐಟಿಯ ಅಂತಿಮ ವರದಿಯನ್ನು ಎತ್ತಿ ಹಿಡಿದಿದ್ದ ಮ್ಯಾಜಿಸ್ಟ್ರೇಟ್, ಜಾಫ್ರಿ ಅವರ ಅವರ ಮನವಿ ವಜಾ ಮಾಡಿದ್ದರು. ಬಳಿಕ ಜಾಫ್ರಿ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದು, 2017ರಲ್ಲಿ ಹೈಕೋರ್ಟ್ ಸಹ ಅವರ ಮನವಿ ವಜಾ ಮಾಡಿತ್ತು. ಬಳಿಕ ಜಾಫ್ರಿ ಹಾಗೂ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರು ಎಸ್‌ಐಟಿ ಕ್ಲೀನ್‌ಚಿಟ್ ವರದಿ ಒಪ್ಪಿರುವುದನ್ನು ಪ್ರಶ್ನಿಸಿ ಹಾಲಿ ಮನವಿ ಸಲ್ಲಿಸಿದ್ದರು.
ಗುಪ್ತಚರ ಸಂಸ್ಥೆಗಳಿಂದ ಸಂದೇಶ ರವಾನಿಸುವುದು ಸೇರಿದಂತೆ ನಿಷ್ಕ್ರಿಯತೆ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಉಂಟಾಗಿರುವ ವೈಫಲ್ಯವು ರಾಜ್ಯ ಅಧಿಕಾರಿಗಳ ಕಡೆಯಿಂದ ಕ್ರಿಮಿನಲ್ ಪಿತೂರಿಯನ್ನು ಸೂಚಿಸುವುದಿಲ್ಲ.. ಗುಪ್ತಚರ ಮಾಹಿತಿ ಸಂಗ್ರಹ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳ ಕಡೆಯಿಂದ ಉದ್ದೇಶಪೂರ್ವಕ ಕೃತ್ಯ ಎಂದು ಸೂಚಿಸಲು ಯಾವುದೇ ದಾಖಲೆ ಲಭ್ಯವಿಲ್ಲ... ಕೇವಲ ರಾಜ್ಯ ಆಡಳಿತದ ನಿಷ್ಕ್ರಿಯತೆ ಅಥವಾ ವೈಫಲ್ಯದ ಆಧಾರದ ಮೇಲೆ ಪಿತೂರಿಯನ್ನು ಸುಲಭವಾಗಿ ಊಹಿಸಲಾಗುವುದಿಲ್ಲ.
ಹಿಂಸಾಚಾರದ ಸಮಯದಲ್ಲಿ ಅಹ್ಮದಾಬಾದ್‌ನ ಅಗ್ನಿಶಾಮಕ ದಳದ ನಿಷ್ಕ್ರಿಯತೆ ಅಥವಾ ವೈಫಲ್ಯವು ಕ್ರಿಮಿನಲ್ ಪಿತೂರಿ ಊಹಿಸಲು ಆಧಾರವಾಗಿರುವುದಿಲ್ಲ. ರಾಜ್ಯದಾದ್ಯಂತ ಸಾಮೂಹಿಕ ಹಿಂಸಾಚಾರ ಉಂಟುಮಾಡಲು ಉನ್ನತ ಮಟ್ಟದಲ್ಲಿ ಯಾವುದೇ ಕಾರ್ಯ ಮಾಡಲಾಗಿಲ್ಲ.
ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ರಾಜ್ಯಾದ್ಯಂತ ಸಾಮೂಹಿಕ ಹಿಂಸಾಚಾರಕ್ಕೆ ಪ್ರಚೋದಿಸಲಾಯಿತು ಎಂದು ಹೇಳಲಾಗದು ಎಂದಿರುವ ನ್ಯಾಯಾಲಯವು ಮೇಲ್ಮನವಿದಾರರು ಅವಲಂಬಿಸಿರುವ ವಿಶ್ವ ಹಿಂದೂ ಪರಿಷತ್ತಿನ ಮಾಜಿ ಮುಖ್ಯಸ್ಥ ಪ್ರವೀಣ್ ತೊಗಾಡಿಯಾ ಅವರ ಭಾಷಣಗಳನ್ನು ನ್ಯಾಯಾಲಯ ವಜಾಗೊಳಿಸಿತು.
ರಾಜ್ಯ ಸರ್ಕಾರದ ಸಮಯೋಚಿತ ಕ್ರಮಗಳನ್ನು ತೆಗೆದುಕೊಂಡಿತು. ತಪ್ಪಿತಸ್ಥರಿಗೆ ಅವರ ಅಪರಾಧಗಳಿಗೆ ಶಿಕ್ಷೆಯಾಗುತ್ತದೆ ಎಂದು ಮುಖ್ಯಮಂತ್ರಿಗಳು ಪದೇ ಪದೇ ಸಾರ್ವಜನಿಕ ಭರವಸೆ ನೀಡಿದ್ದರು ಹಾಗೂ ಶಾಂತಿ ಕಾಪಾಡಲು ಮನವಿ ಮಾಡಿದ್ದರು. ಹೀಗಿರುವಾಗ, ಉನ್ನತಮಟ್ಟದಲ್ಲಿ ಪಿತೂರಿಯ ಸಂಚು ನಡೆದಿದೆ ಎಂಬ ಅನುಮಾನ ಹೊಂದಲಾಗದು ಎಂದು ನ್ಯಾಯಾಲಯವು ಸಂಕ್ಷಿಪ್ತವಾಗಿ ಹೇಳಿದೆ.