[ಗುಜರಾತ್ ಗಲಭೆ] ಮೋದಿಗೆ ಕ್ಲೀನ್ ಚಿಟ್ ಪ್ರಶ್ನಿಸಿ ಝಾಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿ: ಆದೇಶ ಕಾಯ್ದಿರಿಸಿದ ಸುಪ್ರೀಂ

ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ಜೆ ಕೆ ಮಹೇಶ್ವರಿ ಮತ್ತು ಸಿ ಟಿ ರವಿಕುಮಾರ್ ಅವರ ಪೀಠ ತೀರ್ಪನ್ನು ಕಾಯ್ದಿರಿಸಿದೆ.
[ಗುಜರಾತ್ ಗಲಭೆ] ಮೋದಿಗೆ ಕ್ಲೀನ್ ಚಿಟ್ ಪ್ರಶ್ನಿಸಿ ಝಾಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿ: ಆದೇಶ ಕಾಯ್ದಿರಿಸಿದ ಸುಪ್ರೀಂ
Zakia Jafri, Supreme Court

2002ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ರಾಜ್ಯದ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಎಸ್‌ಐಟಿ ಕ್ಲೀನ್‌ಚಿಟ್‌ ನೀಡಿರುವುದನ್ನು ಪ್ರಶ್ನಿಸಿ ಗಲಭೆಗೆ ಬಲಿಯಾದ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಾಕಿಯಾ ಜಾಫ್ರಿ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಬುಧವಾರ ತೀರ್ಪು ಕಾಯ್ದಿರಿಸಿದೆ.

ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ದಿನೇಶ್ ಮಾಹೇಶ್ವರಿ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿತು. ಪಕ್ಷಕಾರರು ಮಾಡಿದ ವಾದದ ಪ್ರಮುಖಾಂಶಗಳು ಹೀಗಿವೆ:

ಕಪಿಲ್‌ ಸಿಬಲ್‌ ವಾದ ಸರಣಿಯ ಪ್ರಮುಖಾಂಶಗಳು

 • ಎಸ್‌ಐಟಿ ಲಭ್ಯವಿರುವ ಎಲ್ಲ ಅಂಶಗಳನ್ನು ಪರಿಶೀಲಿಸಿಲ್ಲ. ಅದರ ತನಿಖೆ ಪಕ್ಷಪಾತವನ್ನು ತೋರಿಸುತ್ತದೆ. ದ್ವೇಷವನ್ನು ಪ್ರಚಾರ ಮಾಡಲು ಸರ್ಕಾರ ಸಹಾಯ ಮಾಡಿದೆ. ಕೋಮುಸೌಹಾರ್ದ ಕದಡುವಂತಹ ಕರಪತ್ರಗಳ ಬಗ್ಗೆ ಎಸ್‌ಐಟಿ ಗಮನಿಸಲಿಲ್ಲ.

 • ಆರೋಪಿ ಪೊಲೀಸರು, ಅಧಿಕಾರಿಗಳು, ರಾಜಕಾರಣಿಗಳು ಮೊಬೈಲ್‌ ಸಂದೇಶ ಹಂಚಿಕೊಂಡಿದ್ದು ಅವನ್ನು ವಶಪಡಿಸಿಕೊಂಡಿಲ್ಲ. ಆ ಕುರಿತು ತನಿಖೆ ನಡೆಸಿಲ್ಲ.

 • ಕೆಲವು ಗುಜರಾತಿ ಪತ್ರಿಕೆಗಳು ಕೋಮುದ್ವೇಷವನ್ನು ಹರಡಿವೆ. ಭಾವನಗರದ ಪತ್ರಿಕೆಯೊಂದು ಪ್ರತೀಕಾರ ತೀರಿಸಿಕೊಳ್ಳಲು ಹಿಂದೂಗಳು ಮತ್ತು ಹಿಂದೂ ಸಂಘಟನೆಗಳಿಗೆ ಕರೆ ನೀಡಿತು, ಆದರೆ ಅದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.

 • ಉನ್ನತ ಪೊಲೀಸ್‌ ಅಧಿಕಾರಿಗಳು ಸಲ್ಲಿಸಿದ ವರದಿಗೆ ಗೃಹ ಸಚಿವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

 • ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೃಷ್ಣ ಐಯ್ಯರ್‌ ಅವರ ನೇತೃತ್ವದ ಕಳಕಳಿಯುಳ್ಳ ನಾಗರಿಕರ ನ್ಯಾಯಮಂಡಳಿ ಸಲ್ಲಿಸಿದ್ದ ಗಲಭೆಯ ಕುರಿತಾದ ವರದಿಗಳ ಪ್ರಮುಖ ಭಾಗಗಳನ್ನು ಸಿಬಲ್‌ ತಮ್ಮ ವಾದಕ್ಕೆ ಪೂರಕವಾಗಿ ಉಲ್ಲೇಖಿಸಿದರು.

 • ವಿಶ್ವ ಹಿಂದೂ ಪರಿಷತ್‌ನ ಗುಜರಾತ್‌ ಅಧ್ಯಕ್ಷ “ಇದು (ಗಲಭೆ) ಆಗಲೇ ಬೇಕು ಎಂದು ಅಂದು ಬೆಳಗ್ಗೆ ನಾವು ಕೂತು ಪಟ್ಟಿಯನ್ನು ಮಾಡಿದೆವು. ನಾವು ಸಿದ್ಧವಾಗಿರಲಿಲ್ಲ. ನಮಗೆ ಇಷ್ಟವಿರಲಿಲ್ಲ. ಆದರೆ ನಾವು ಕೋಪಾವಿಷ್ಠರಾಗಿದ್ದೆವು. ಗಲಭೆ ಮಾಡಿದವರು ಉತ್ತಮ ಕುಟುಂಬಗಳ ಹಿನ್ನೆಲೆಯ ಹಿಂದೂಗಳಾಗಿದ್ದರು,” ಎಂದು ಗಲಭೆಯ ಹಿಂದಿನ ಸಂಚಿನ ಬಗ್ಗೆ ಹೇಳಿಕೊಂಡಿದ್ದನ್ನು ಸಿಬಲ್ ಉಲ್ಲೇಖಿಸಿದರು.

ಎಸ್‌ಐಟಿ ಪರ ವಕೀಲ ಮುಕುಲ್ ರೋಹಟ್ಗಿ ವಾದ:

 • ಮೃತ ದೇಹಗಳನ್ನು ಮೆರವಣಿಗೆ ಮಾಡಲಾಯಿತು ಎಂಬ ಸಿಬಲ್ ಅವರ ವಾದ ಒಪ್ಪುವಂತಹುದ್ದಲ್ಲ. ಸರಿಯೋ ತಪ್ಪೋ, ತಮ್ಮ ಬೆಂಬಲಿಗರನ್ನು ಕೊಂದಿದ್ದರಿಂದ ವಿಎಚ್‌ಪಿ ಕಳವಳಗೊಂಡಿತ್ತು. ರಾತ್ರಿ 12ರಿಂದ 3ಗಂಟೆಯವರೆಗೆ ಮೆರವಣಿಗೆ ನಡೆಸಲು ಸಾಧ್ಯವೇ? ? ಸತ್ತ 58 ಜನರಲ್ಲಿ 33 ಅಹಮದಾಬಾದ್‌ಗೆ ಸೇರಿದವರಾಗಿದ್ದರಿಂದ ಅವರ ಸಂಬಂಧಿಕರಿಗೆ ಮೃತದೇಹಗಳನ್ನು ಹಸ್ತಾಂತರಿಸಲು ಸುಲಭವಾಗಲಿ ಎಂದು ಅವುಗಳನ್ನು ಅಲ್ಲಿಗೆ ಕರೆತರಲಾಗುತ್ತಿತ್ತು.

 • ಗೃಹ ಸಚಿವಾಲಯ ಶ್ರೀಕುಮಾರ್‌ ಅವರ ವರದಿಗೆ ಪ್ರತಿಕ್ರಿಯಿಸಲಿಲ್ಲ ಎಂಬ ವಾದದಲ್ಲಿ ಹುರುಳಿಲ್ಲ. ಮಧ್ಯಾಹ್ನ 2:30 ಕ್ಕೆ ಗೃಹ ಸಚಿವಾಲಯಕ್ಕೆ ಫ್ಯಾಕ್ಸ್ ಕಳುಹಿಸಲಾಗಿದೆ ... ಸೇನೆ ರಾತ್ರಿ 11:30 ರ ಹೊತ್ತಿಗೆ ಬರಲು ಆರಂಭಿಸಿತು. ಸೇನೆಯನ್ನು ಗಡಿಯಿಂದ ಏರ್ ಲಿಫ್ಟ್ ಮಾಡಲಾಯಿತು. ಸಂಸತ್‌ ದಾಳಿ ನಡೆದು ಒಂದೆರಡು ತಿಂಗಳು ಕಳೆದಿತ್ತು.

 • 2009ರಲ್ಲಿ ಎಸ್‌ಐಟಿ ರಚಿಸಲಾಗಿದ್ದು, 2002ರ ಮೊಬೈಲ್‌ಗಳನ್ನು ಆಗಲೂ ವಶದಲ್ಲಿಟ್ಟುಕೊಳ್ಳಬೇಕು ಎಂದು ನಿರೀಕ್ಷಿಸುವುದು ಸಮಂಜಸವಲ್ಲ. ಹಾಗೊಂದು ವೇಳೆ ಏನನ್ನಾದರೂ ಮರೆಮಾಚಬೇಕೆಂದಿದ್ದರೆ ಎಸ್‌ಐಟಿ ಕ್ಯಾಬಿನೆಟ್‌ ಸಚಿವೆ ಮಾಯಾಬೆನ್‌ ಹಾಗೂ ಪೊಲೀಸ್‌ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸುವ ಧೈರ್ಯ ಮಾಡುತ್ತಿರಲಿಲ್ಲ. ಪ್ರಕರಣದಲ್ಲಿ ಮಾಯಾಬೆನ್‌ ಕೊಡ್ನಾನಿ ಅವರು ದೋಷಿಯೆಂದು ತೀರ್ಮಾನವಾಗಿದ್ದಲ್ಲದೆ ಶಿಕ್ಷೆಯೂ ಅನುಭವಿಸುವಂತಾಯಿತು.

 • ತೆಹಲ್ಕಾ ಟೇಪ್‌ಗಳ ಅಸಲಿತನವನ್ನು ಪ್ರಶ್ನಿಸಲಾಗಿಲ್ಲ ಎಂಬುದು ನಿಜವಾದರೂ, ಕುಟುಕು ಕಾರ್ಯಾಚರಣೆಯ ವಿಷಯವನ್ನು ನ್ಯಾಯಾಲಯವು ತಿರಸ್ಕರಿಸಿದೆ. ಅದರ ಹೊರತಾಗಿಯೂ, ಕುಟುಕು ಕಾರ್ಯಾಚರಣೆ ನಡೆಸಿದ ಪತ್ರಕರ್ತ ಆಶಿಶ್ ಖೇತನ್ ಸೇರಿದಂತೆ ಸಂಬಂಧಪಟ್ಟ ಎಲ್ಲರನ್ನೂ ಎಸ್‌ಐಟಿ ಪರಿಶೀಲಿಸಿತು.

 • ದೂರಿನ ಉದ್ದಕ್ಕೂ ಹಿಂದಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಹೆಸರನ್ನು ಉಲ್ಲೇಖಿಸಲಾಗಿದೆ. ಆದರೆ, ಅವರನ್ನು ಒಳಗೊಂಡ ಯಾವುದೇ ಭಾಗವನ್ನು ಸಿಬಲ್‌ ಅವರು ಓದಲಿಲ್ಲ.

ಗುಜರಾತ್ ಸರ್ಕಾರದ ಪರವಾಗಿ ಎಸ್‌ಜಿ ತುಷಾರ್‌ ಮೆಹ್ತಾ ವಾದ…

 • ರಾಜ್ಯ ಸರ್ಕಾರ ತನ್ನಿಂದ ಸಾಧ್ಯವಾದುದನ್ನೆಲ್ಲಾ ಮಾಡಿದೆ. ಅರ್ಜಿದಾರರಾದ ಸಿಟಿಜನ್ಸ್‌ ಫಾರ್‌ ಜಸ್ಟೀಸ್‌ ಮತ್ತು ತೀಸ್ತಾ ಸೆಟಲ್ವಾಡ್‌ ಅವರ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆಗಳಿವೆ. ಗಲಭೆ ಸಂತ್ರಸ್ತರ ಕಲ್ಯಾಣಕ್ಕಾಗಿ ನೀಡಿದ ಹಣವನ್ನು ತೀಸ್ತಾ ದುರುಪಯೋಗಪಡಿಸಿಕೊಂಡಿದ್ದಾರೆ. ಜಾಕಿಯಾ ಜಾಫ್ರಿ ಅವರ ಹಿಂದಿನ ಶಕ್ತಿ ತೀಸ್ತಾ ಆಗಿದ್ದಾರೆ.

ಪ್ರತ್ಯುತ್ತರ ವಾದ ಮಂಡನೆ ವೇಳೆ ತಮ್ಮ ಕಕ್ಷೀದಾರರ ಪರವಾಗಿ ವಕೀಲರಾದ ಮುಕುಲ್ ರೋಹಟಗಿ, ಸಿಬಲ್‌ ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡರು,

Related Stories

No stories found.
Kannada Bar & Bench
kannada.barandbench.com