ಕೊಲೆ ಪ್ರಕರಣವೊಂದರಲ್ಲಿ ಡೇರಾ ಸಚ್ಚಾ ಸೌದಾದ ಮಾಜಿ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ದೋಷಿ ಎಂದು ಪಂಚಕುಲದ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ರಂಜೀತ್ ಸಿಂಗ್ ಎಂಬುವರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಗುರುಮೀತ್ ರಾಮ್ ರಹೀಂ ಸಿಂಗ್ ಅವರನ್ನು ದೋಷಿ ಎಂದಿರುವ ನ್ಯಾಯಾಲಯ ಶಿಕ್ಷೆಯ ಪ್ರಮಾಣದ ಕುರಿತಾದ ವಿಚಾರಣೆಯನ್ನು ಅಕ್ಟೋಬರ್ 12ರಂದು ನಡೆಸಲಿದೆ.
ರಾಮ್ ರಹೀಂ ಸಿಂಗ್ ಅಲ್ಲದೆ ಪ್ರಕರಣದ ಇತರ ಆರೋಪಿಗಳಾದ ಜಸ್ಬೀರ್ ಸಿಂಗ್, ಸಬ್‌ದಿಲ್ ಸಿಂಗ್ ಮತ್ತು ಕೃಷ್ಣ ಲಾಲ್ ಅವರನ್ನು ಕೊಲೆ (302), ಜೀವ ಬೆದರಿಕೆ (506), ಅಪರಾಧದ ಸಂಚಿನ (120ಬಿ) ಅಡಿ ದೋಷಿಗಳು ಎಂದು ನ್ಯಾಯಾಲಯ ತೀರ್ಮಾನಿಸಿದೆ.
“ಪ್ರಕರಣದ ಆರೋಪಿಗಳಾದ ಬಾಬಾ ಗುರ್ಮೀತ್ ರಾಮ್ ರಹೀಂ ಸಿಂಗ್, ಅವತಾರ್ ಸಿಂಗ್, ಜಸ್ಬೀರ್ ಸಿಂಗ್, ಸಬ್‌ದಿಲ್ ಸಿಂಗ್ ಮತ್ತು ಕೃಷ್ಣ ಲಾಲ್ ಅವರನ್ನು ಸೆಕ್ಷನ್ 120- ಬಿ ಐಪಿಸಿ ಜೊತೆಗೆ ಸೆಕ್ಷನ್ 302 ಐಪಿಸಿ ಮತ್ತು ಸೆಕ್ಷನ್ 506 ಜೊತೆಗೆ ಸೆಕ್ಷನ್ 120 ಬಿ ಐಪಿಸಿ ಅಡಿ ದೋಷಿಗಳು ಎಂದು ತೀರ್ಮಾನಿಸಲಾಗಿದೆ. ಅಲ್ಲದೆ ಆರೋಪಿ ಸಬ್‌ದಿಲ್ ಸಿಂಗ್ ಅವರನ್ನು ಹೆಚ್ಚುವರಿಯಾಗಿ ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್ 27 ರ ಅಡಿ ಅಪರಾಧ ಎಸಗಿರುವುದರಲ್ಲಿಯೂ ತಪ್ಪಿತಸ್ಥ ಎಂದು ಪರಿಗಣಿಸಿ ದೋಷಿ ಎಂದು ತೀರ್ಮಾನಿಸಲಾಗಿದೆ” ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ.
ತಮ್ಮ ಇಬ್ಬರು ಹಿಂಬಾಲಕ ಸಾಧ್ವಿಯರನ್ನು ಅತ್ಯಾಚಾರಗೈದ ಪ್ರಕರಣದಲ್ಲಿ ಇದಾಗಲೇ ರಾಮ್ ರಹೀಂ ಸಿಂಗ್ ಅವರನ್ನು ದೋಷಿ ಎಂದು ತೀರ್ಮಾನಿಸಿ 20 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಲಾಗಿದೆ. ಅಲ್ಲದೆ ತಮ್ಮ ಡೇರಾದಲ್ಲಿ ಸಾಧ್ವಿಯರ ಲೈಂಗಿಕ ಶೋಷಣೆ ನಡೆಯುತ್ತಿರುವ ಬಗ್ಗೆ ವರದಿಯ ಮೂಲಕ ಬೆಳಕು ಚೆಲ್ಲಿದ್ದ ರಾಮ್ ಚಂದರ್ ಚತ್ತರ್‌ಪತಿ ಎನ್ನುವ ಪತ್ರಕರ್ತನನ್ನು ಕೊಲೆ ಮಾಡಿದ ಆರೋಪದಲ್ಲಿಯೂ ದೋಷಿ ಎಂದು ತೀರ್ಮಾನಿಸಲಾಗಿದೆ.