ಡೇರಾ ಸಚ್ಚಾ ಸೌದಾದ ವ್ಯವಸ್ಥಾಪಕ ರಂಜಿತ್ ಸಿಂಗ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡೇರಾದ ಮಾಜಿ ಮುಖ್ಯಸ್ಥ ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಪಂಚಕುಲದಲ್ಲಿರುವ ಸಿಬಿಐ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಸಿಂಗ್ ಜೊತೆಗೆ ನಾಲ್ವರು ಅಪರಾಧಿಗಳಾದ ಅವತಾರ್ ಸಿಂಗ್, ಜಸ್ಬೀರ್ ಸಿಂಗ್, ಸಬ್ದಿಲ್ ಸಿಂಗ್ ಹಾಗೂ ಕ್ರಿಶನ್ ಲಾಲ್ ಅವರಿಗೆ ಕೂಡ ಜೀವಾವಧಿ ಶಿಕ್ಷೆ ವಿಧಿಸಿರುವುದಾಗಿ ಐಎಎನ್‌ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ವಿಶೇಷ ನ್ಯಾಯಾಧೀಶ ಸುಶೀಲ್ ಕುಮಾರ್ ಗಾರ್ಗ್ ಶಿಕ್ಷೆಯನ್ನು ಪ್ರಕಟಿಸಿದರು.
ಈ ಹಿಂದಿನ ವಿಚಾರಣೆ ವೇಳೆ ಐಪಿಸಿ ಸೆಕ್ಷನ್ 302 (ಕೊಲೆ), 506 (ಕ್ರಿಮಿನಲ್ ಬೆದರಿಕೆ) ಮತ್ತು 120 ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಆರೋಪಿಗಳನ್ನು ನ್ಯಾಯಾಲಯ ಅಪರಾಧಿಗಳೆಂದು ಘೋಷಿಸಿತ್ತು. ಸುದೀರ್ಘ ವಿಚಾರಣೆಯ ಬಳಿಕ ಪ್ರಕರಣ ತಾರ್ಕಿಕ ಅಂತ್ಯ ಕಂಡಿದೆ. 2002ರಲ್ಲಿ ರಂಜಿತ್ ಅವರ ಕೊಲೆ ನಡೆದಿತ್ತು.
ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಧೀಶರು ಸಿಬಿಐನ ಸರ್ಕಾರಿ ಅಭಿಯೋಜಕರಿಂದ ಅನಗತ್ಯವಾಗಿ ಪ್ರಭಾವಿತರಾಗಿದ್ದಾರೆ ಎಂದು ಹೇಳಿ ಪ್ರಕರಣವನ್ನು ಬೇರೆ ಸಿಬಿಐ ನ್ಯಾಯಾಲಯಕ್ಕೆ ವಹಿಸುವಂತೆ ಸಂತ್ರಸ್ತನ ಪುತ್ರ ಜಸ್ಬೀರ್ ಸಿಂಗ್ ಈ ಹಿಂದೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮೊರೆ ಹೋಗಿದ್ದರು.
ವರ್ಗಾವಣೆ ಅರ್ಜಿ ವಿಚಾರಣೆ ವೇಳೆ ಸಿಬಿಐ ನ್ಯಾಯಾಲಯದ ತೀರ್ಪು ಪ್ರಕಟಿಸದಂತೆ ಹೈಕೋರ್ಟ್ ತಡೆ ಹಿಡಿದಿತ್ತು. ಆದರೆ ಅರ್ಜಿದಾರರ ವಾದದಲ್ಲಿ ಹುರುಳಿಲ್ಲ ಎಂದು ಕಂಡುಕೊಂಡ ನ್ಯಾಯಾಲಯ ಮನವಿ ವಜಾಗೊಳಿಸಿತ್ತು.
ಇಬ್ಬರು ಮಹಿಳಾ ಅನುಯಾಯಿಗಳ ಮೇಲೆ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮಾತ್ರವಲ್ಲದೆ ಡೇರಾದಲ್ಲಿನ ಲೈಂಗಿಕ ಕಿರುಕುಳದ ಬಗ್ಗೆ ವರದಿ ಪ್ರಕಟಿಸಿದ ಸಿರ್ಸಾ ಮೂಲದ ಪತ್ರಕರ್ತ ರಾಮ್ ಚಂದರ್ ಚತರ್‌ಪತಿ ಹತ್ಯೆಗೆ ಸಂಬಂಧಿಸಿದಂತೆ ಗುರ್ಮೀತ್ ರಾಮ್ ರಹೀಮ್‌ಗೆ ಈಗಾಗಲೇ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.