ನಿಷೇಧಿತ 11 ತಳಿ ಸಾಕುನಾಯಿಗಳ ವಶಕ್ಕೆ ಸೂಚಿಸಿದ ಗುರುಗ್ರಾಮ ಗ್ರಾಹಕ ನ್ಯಾಯಾಲಯ: ಮಾಲೀಕರಿಗೆ ₹2 ಲಕ್ಷದವರೆಗೆ ದಂಡ

ಗುರುಗ್ರಾಮದಲ್ಲಿರುವ ನಾಯಿ ಮಾಲೀಕರು ₹12,000 ಪಾವತಿಸಿ ತಮ್ಮ ಸಾಕುಪ್ರಾಣಿಗಳನ್ನು ನೋಂದಾಯಿಸಿಕೊಳ್ಳಬೇಕು ಮತ್ತು ಅವುಗಳಿಗೆ ಲೋಹದ ಸರಪಳಿ ಹಾಗೂ ಬಾಯಿ-ಕುಕ್ಕೆ ಹಾಕಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
Gurugram
Gurugram
Published on

ನವೆಂಬರ್ 15 ರಿಂದ ಜಾರಿಗೆ ಬರುವಂತೆ ಎಲ್ಲಾ ಬೀದಿನಾಯಿಗಳನ್ನು ಹಿಡಿಯುವಂತೆ ಗುರುಗ್ರಾಮ್ ಮುನ್ಸಿಪಲ್ ಕಾರ್ಪೊರೇಶನ್‌ಗೆ ಗ್ರಾಹಕ ನ್ಯಾಯಾಲಯವು ಇತ್ತೀಚೆಗೆ ಆದೇಶಿಸಿದೆ.

ಬೀದಿನಾಯಿಗಳಿಂದ ಕಚ್ಚಿಸಿಕೊಂಡ ಅಥವಾ ದಾಳಿಗೀಡಾದ ನಾಗರಿಕರಿಗೆ ಪರಿಹಾರ ನೀಡುವ ಸಂಬಂಧ ನೀತಿಯೊಂದನ್ನು ರೂಪಿಸುವಂತೆ ಸ್ಥಳೀಯಾಡಳಿತಕ್ಕೆ  ಗುರುಗ್ರಾಮದಲ್ಲಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಸಂಜೀವ್ ಜಿಂದಾಲ್ ಆದೇಶಿಸಿದ್ದಾರೆ.

ಕನಿಷ್ಠ ₹ 20,000 ಪರಿಹಾರ ನೀಡಬೇಕು ಮತ್ತು ನಾಯಿ ಕಡಿತದಿಂದ ಉಂಟಾದ ಗಾಯದ ಗಂಭೀರತೆ ಆಧರಿಸಿ ₹ 2 ಲಕ್ಷದವರೆಗೆ ಪರಿಹಾರ ಧನ ಹೆಚ್ಚು ಮಾಡಬಹುದು ಎಂದು ಅದು ತಿಳಿಸಿದೆ.

ಕೇಂದ್ರ ಸರ್ಕಾರ ಅಮೇರಿಕನ್ ಪಿಟ್-ಬುಲ್ ಟೆರಿಯರ್, ಡೋಗೊ ಅರ್ಜೆಂಟಿನೋ, ರೊಟ್‌ವೀಲರ್, ನಿಯಾಪೊಲಿಟನ್ ಮ್ಯಾಸ್ಟಿಫ್, ಬೋರ್‌ಬೋಲ್, ಪ್ರೆಸಾ ಕೆನಾರಿಯೊ, ವುಲ್ಫ್ ಡಾಗ್, ಬ್ಯಾಂಡಾಗ್, ಅಮೇರಿಕನ್ ಬುಲ್‌ಡಾಗ್, ಫಿಲಾ ಬ್ರೆಸಿಲಿರೊ,  ಕೇನ್ ಕೊರ್ಸೊ ಸೇರಿದಂತೆ 11 ತಳಿಗಳನ್ನು ಸಾಕದಂತೆ ನಿಷೇಧಿಸಿದ್ದು ಆ ಕುರಿತ ಆದೇಶವನ್ನು ಜಾರಿಗೆ ತರಬೇಕು ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೆ ಗುರುಗ್ರಾಮದಲ್ಲಿರುವ ನಾಯಿ ಮಾಲೀಕರು ₹12,000 ಪಾವತಿಸಿ ತಮ್ಮ ಸಾಕುಪ್ರಾಣಿಗಳನ್ನು ನೋಂದಾಯಿಸಿಕೊಳ್ಳಬೇಕು ಮತ್ತು ಅವುಗಳಿಗೆ ಲೋಹದ ಸರಪಳಿ ಹಾಗೂ ಬಾಯಿ-ಕುಕ್ಕೆ ಹಾಕಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಈ ನಾಯಿಗಳನ್ನು ಸಾಕಲು ನೀಡಿದ್ದ ಪರವಾನಗಿಗಳನ್ನು ತಕ್ಷಣವೇ ರದ್ದುಪಡಿಸಿ ಎಲ್ಲಾ ನಾಯಿಗಳನ್ನು ವಶಕ್ಕೆ ಪಡೆಯಬೇಕು. ನಿಷೇಧದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ನ್ಯಾಯಾಲಯ ಇದೇ ವೇಳೆ ಸೂಚಿಸಿತು.

ಈ ವರ್ಷ ಆಗಸ್ಟ್ 11ರಂದು ಗುರುಗ್ರಾಮದ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಡೊಗೊ ಅರ್ಜೆಂಟಿನೋ ತಳಿಗೆ ಸೇರಿದ ನಾಯಿಯಿಂದ ಮಾರಣಾಂತಿಕ ದಾಳಿಗೆ ಒಳಗಾದ ಮನೆ ಸಹಾಯಕಿಯೊಬ್ಬರು ಸಲ್ಲಿಸಿದ್ದ ದೂರನ್ನು ಆಲಿಸಿದ ನ್ಯಾಯಾಲಯ ಅವರುಗೆ ₹2 ಲಕ್ಷ ಪರಿಹಾರ ನೀಡುವಂತೆ ಸೂಚಿಸಿತು. ಆ ಮೊತ್ತವನ್ನು ಸಂಬಂಧಪಟ್ಟ ಮಾಲೀಕರಿಂದ ಭರಿಸಲು ಪುರಸಭೆಗೆ ಸ್ವಾತಂತ್ರ್ಯ ನೀಡಲಾಯಿತು.

Kannada Bar & Bench
kannada.barandbench.com