[ಜ್ಞಾನವಾಪಿ ಪ್ರಕರಣ] ಅರ್ಜಿಯ ಊರ್ಜಿತತ್ವದ ಪ್ರಶ್ನೆ: ಮೇಲ್ಮನವಿ ಕುರಿತ ಆದೇಶ ಕಾಯ್ದಿರಿಸಿದ ಅಲಾಹಾಬಾದ್‌ ಹೈಕೋರ್ಟ್‌

ಹಿಂದೂ ಪಕ್ಷಕಾರರು ಸಲ್ಲಿಸಿದ್ದ ಅರ್ಜಿಯ ಊರ್ಜಿತತ್ವ ಪ್ರಶ್ನಿಸಿ ಮುಸ್ಲಿಂ ಪಕ್ಷಕಾರರು ಸಲ್ಲಿಸಿದ್ದ ಅರ್ಜಿಯನ್ನು ವಾರಾಣಸಿ ನ್ಯಾಯಾಲಯವು ಸೆಪ್ಟೆಂಬರ್‌ನಲ್ಲಿ ವಜಾ ಮಾಡಿತ್ತು.
Allahabad High Court
Allahabad High Court

ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ಮಾಡುವ ಹಕ್ಕಿಗೆ ಸಂಬಂಧಿಸಿದಂತೆ ಹಿಂದೂ ಪಕ್ಷಕಾರರು ಸಲ್ಲಿಸಿರುವ ಅರ್ಜಿಯು ನಿರ್ವಹಣಾ ಯೋಗ್ಯ ಎಂದಿದ್ದ ವಾರಾಣಸಿ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅಂಜುಮನ್‌ ಇಂತೇಜಾಮಿಯಾ ಮಸೀದಿ ನಿರ್ವಹಣಾ ಸಮಿತಿ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದ ಆದೇಶವನ್ನು ಅಲಾಹಾಬಾದ್‌ ಹೈಕೋರ್ಟ್‌ ಶುಕ್ರವಾರ ಕಾಯ್ದಿರಿಸಿದೆ [ಅಂಜುಮನ್‌ ಇಂತೆಜಾಮಿಯಾ ಮಸೀದಿ ನಿರ್ವಹಣಾ ಸಮಿತಿ ವರ್ಸಸ್‌ ರಾಖಿ ಸಿಂಗ್‌].

ನಾಗರಿಕ ಪ್ರಕ್ರಿಯಾ ಸಂಹಿತೆ ನಿಯಮದ ಅಡಿ ಮುಸ್ಲಿಂ ಪಕ್ಷಕಾರರು ಹಿಂದೂ ಪಕ್ಷಕಾರರ ಅರ್ಜಿಯ ಊರ್ಜಿತತ್ವವನ್ನು ಪ್ರಶ್ನಿಸಿದ್ದ ಕೋರಿಕೆಯನ್ನು ಸೆಪ್ಟೆಂಬರ್‌ 12ರಂದು ಜಿಲ್ಲಾ ನ್ಯಾಯಾಧೀಶ ಡಾ. ಎ ಕೆ ವಿಶ್ವೇಶ್‌ ವಜಾ ಮಾಡಿದ್ದರು. ಇದನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾ. ಜೆ ಜೆ ಮುನೀರ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶ ಕಾಯ್ದಿರಿಸಿದೆ.

ಜ್ಞಾನವಾಪಿ ಮಸೀದಿಯು ದೇವಸ್ಥಾನವಾಗಿದ್ದು, ಅಲ್ಲಿ ಈಗಲೂ ಹಿಂದೂ ದೇವರ ಮೂರ್ತಿಗಳಿವೆ. ಹೀಗಾಗಿ, ಅಲ್ಲಿ ಪೂಜೆ ಸಲ್ಲಿಸುವ ಅವಕಾಶ ಕಲ್ಪಿಸಬೇಕು ಎಂದು ಕೋರಿ ಹಿಂದೂ ಪಕ್ಷಕಾರರು ಸಿವಿಲ್‌ ನ್ಯಾಯಾಲಯದಲ್ಲಿ ದಾವೆ ಹೂಡುವುದರೊಂದಿಗೆ ಪ್ರಕರಣ ಮುಂಚೂಣಿಗೆ ಬಂದಿದೆ. ಸಿವಿಲ್‌ ನ್ಯಾಯಾಲಯದ ನಿರ್ದೇಶನದಂತೆ ಮಸೀದಿಯ ಸರ್ವೆಯನ್ನು ವಕೀಲ ಆಯುಕ್ತರು ನಡೆಸಿದ್ದು, ವಿಡಿಯೊ ಸರ್ವೆ ಮತ್ತು ಅದರ ಸಂಬಂಧಿತ ವರದಿಯನ್ನು ಸಿವಿಲ್‌ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಈ ಮಧ್ಯೆ, 1947ರ ಆಗಸ್ಟ್‌ 15ರಂದು ಇದ್ದಂತೆಯೇ ಎಲ್ಲಾ ಧಾರ್ಮಿಕ ಕಟ್ಟಡಗಳನ್ನು ರಕ್ಷಿಸಬೇಕು ಎಂದು ರಾಮಜನ್ಮ ಭೂಮಿ ಹೋರಾಟದ ಸಂದರ್ಭದಲ್ಲಿ ಜಾರಿಗೊಳಿಸಲಾದ ಆರಾಧನಾ ಸ್ಥಳಗಳ ಕಾಯಿದೆ 1991ರ ಅಡಿ ಹಿಂದೂ ಪಕ್ಷಕಾರರ ಅರ್ಜಿಯ ಊರ್ಜಿತತ್ವವನ್ನು ಪ್ರಶ್ನಿಸಿ ಮನವಿಯು ನಿರ್ವಹಣೆಗೆ ಯೋಗ್ಯವಲ್ಲ ಎಂದು ಮುಸ್ಲಿಂ ಪಕ್ಷಕಾರರು ವಾದಿಸಿದ್ದರು. ಆರಾಧಾನಾ ಸ್ಥಳ ಕಾಯಿದೆ ಸೆಕ್ಷನ್‌ 4ರ ಪ್ರಕಾರ ಸ್ವಾತಂತ್ರ್ಯ ಪೂರ್ವದಲ್ಲಿ ಧಾರ್ಮಿಕ ಕಟ್ಟಡಗಳು ಹೇಗಿದ್ದವೋ ಅದೇ ರೀತಿ ಇರಲಿವೆ. ಈ ವಿಚಾರದಲ್ಲಿ ಯಾವುದೇ ಪ್ರಕರಣಗಳನ್ನು ನ್ಯಾಯಾಲಯಗಳು ವಿಚಾರಣೆಗೆ ಎತ್ತಿಕೊಳ್ಳುವಂತಿಲ್ಲ. ಈಗಾಗಲೇ ನ್ಯಾಯಾಲಯದಲ್ಲಿರುವ ಪ್ರಕರಣಗಳು ವಜಾಗೊಳ್ಳಲಿವೆ. ಹಾಗಾಗಿ, ಮನವಿ ನಿರ್ವಹಣೆಗೆ ಅರ್ಹವಲ್ಲ ಎನ್ನುವ ವಾದವನ್ನು ಮುಸ್ಲಿಂ ಪಕ್ಷಕಾರರು ಮಂಡಿಸಿದ್ದರು.

ಇತ್ತ ಹಿಂದೂ ಪಕ್ಷಕಾರರು ತಾವು ಮಸೀದಿಯನ್ನು ದೇವಾಲಯವಾಗಿ ಪರಿವರ್ತಿಸಬೇಕು ಎಂದು ಎಲ್ಲಿಯೂ ಕೋರಿಲ್ಲ ಎಂದು ಹೇಳಿದ್ದರು. ಹಿಂದೂ ಪಕ್ಷಕಾರರ ಈ ವಾದವನ್ನು ವಿಚಾರಣಾಧೀನ ನ್ಯಾಯಾಲಯವು ಪುರಸ್ಕರಿಸಿ, ಅರ್ಜಿಯನ್ನು ಊರ್ಜಿತಗೊಳಿಸಿತ್ತು.

Related Stories

No stories found.
Kannada Bar & Bench
kannada.barandbench.com