ಜ್ಞಾನವಾಪಿ ಮಸೀದಿಯೊಳಗೆ ಪೂಜಾ ಹಕ್ಕು ಕೋರಿ ಹಿಂದೂ ಪಕ್ಷಕಾರರು ಹೂಡಿರುವ ಮೊಕದ್ದಮೆಯು ನಿರ್ವಹಣೆಗೆ ಯೋಗ್ಯ ಎಂದು ಪರಿಗಣಿಸಿರುವ ವಾರಾಣಸಿ ನ್ಯಾಯಾಲಯದ ಆದೇಶವನ್ನು ಅಲಾಹಾಬಾದ್ ಹೈಕೋರ್ಟ್ ಬುಧವಾರ ಎತ್ತಿಹಿಡಿದಿದೆ [ಅಂಜುಮನ್ ಇಂತೆಜಾಮಿಯಾ ಮಸೀದಿಯ ನಿರ್ವಹಣಾ ಸಮಿತಿ ವಾರಾಣಸಿ ವಿರುದ್ಧ ಶ್ರೀಮತಿ ರಾಖಿ ಸಿಂಗ್].
ಕಳೆದ ವರ್ಷ ಡಿಸೆಂಬರ್ 24ರಂದು ಕಾಯ್ದಿರಿಸಿದ್ದ ತೀರ್ಪನ್ನು ಇಂದು ಹೈಕೋರ್ಟ್ ನೀಡಿದೆ. ಜಿಲ್ಲಾ ನ್ಯಾಯಾಧೀಶರ ಆದೇಶ ಪ್ರಶ್ನಿಸಿ ಅಂಜುಮನ್ ಇಂತೇಜಾಮಿಯಾ ಮಸೀದಿ ನಿರ್ವಹಣಾ ಸಮಿತಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಸಿಪಿಸಿ VII ನಿಯಮ 11ರ ಅಡಿಯಲ್ಲಿ ಸಲ್ಲಿಸಿದ್ದ ಅರ್ಜಿಯ ಮೂಲಕ ಮೊಕದ್ದಮೆಯು ಊರ್ಜಿತಯೋಗ್ಯವಲ್ಲ ಎಂದು ವಿರೋಧಿಸಿ ಮುಸ್ಲಿಂ ಪಕ್ಷಕಾರರು ಸಲ್ಲಿಸಿದ್ದ ಮನವಿಯನ್ನು ಸೆಪ್ಟೆಂಬರ್ 12, 2022 ರಂದು, ಜಿಲ್ಲಾ ನ್ಯಾಯಾಧೀಶ ಡಾ.ಎ ಕೆ ವಿಶ್ವೇಶ ಅವರು ವಜಾಗೊಳಿಸಿದ್ದರು.
ಜ್ಞಾನವಾಪಿ ಮಸೀದಿ ಹಿಂದೂ ದೇವಾಲಯವಾಗಿದ್ದು ಈಗಲೂ ಹಿಂದೂ ದೈವಗಳ ಮೂರ್ತಿಗಳು ಅಲ್ಲಿವೆ. ಹೀಗಾಗಿ ಮಸೀದಿಯ ಆವರಣದೊಳಗೆ ಪೂಜೆ ಸಲ್ಲಿಸುವ ಹಕ್ಕನ್ನು ಹಿಂದೂ ಭಕ್ತರಿಗೆ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರಿಂದ ಪ್ರಕರಣ ಉದ್ಭವಿಸಿತ್ತು.