ಜ್ಞಾನವಾಪಿ- ಕಾಶಿ ವಿಶ್ವನಾಥ ಪ್ರಕರಣ: ಶಿವಲಿಂಗದ ಎಎಸ್ಐ ಸಮೀಕ್ಷೆ ಕೋರಿ ಸುಪ್ರೀಂ ಮೆಟ್ಟಿಲೇರಿದ ಹಿಂದೂ ಪಕ್ಷಕಾರರು

ಮಸೀದಿ ಸಮಿತಿ ಹೇಳಿರುವಂತೆ ಶಿವಲಿಂಗ ಕೇವಲ ಕಾರಂಜಿಯಾಗಿರುವುದರಿಂದ ಮುಸ್ಲಿಮರಿಗೆ ಅದು ಧಾರ್ಮಿಕವಾಗಿ ಮಹತ್ವದ್ದಲ್ಲ ಎಂದು ಹಿಂದೂ ಪಕ್ಷಕಾರರು ಹೇಳಿಕೊಂಡಿದ್ದಾರೆ.
ಸುಪ್ರೀಂ ಕೋರ್ಟ್ (ಎಡ) ಮತ್ತು ಜ್ಞಾನವಾಪಿ ಮಸೀದಿ (ಬಲ)
ಸುಪ್ರೀಂ ಕೋರ್ಟ್ (ಎಡ) ಮತ್ತು ಜ್ಞಾನವಾಪಿ ಮಸೀದಿ (ಬಲ)
Published on

ಜ್ಞಾನವಾಪಿ ಮಸೀದಿ-ಕಾಶಿ ವಿಶ್ವನಾಥ ದೇವಾಲಯ ವಿವಾದಕ್ಕೆ ಸಂಬಂಧಿಸಿದಂತೆ ಮಸೀದಿಯಲ್ಲಿ ಪತ್ತೆಯಾದ ಕಾರಂಜಿಯ ವಿವರವಾದ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್ಐ) ನಿರ್ದೇಶನ ನೀಡುವಂತೆ ಹಿಂದೂ ಪಕ್ಷಕಾರರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಶಿವಲಿಂಗದ ರಚನೆಯು ಕೃತಕ ಗೋಡೆಗಳಿಂದ ಸುತ್ತುವರೆದಿದ್ದು, ಇದು ಆಧುನಿಕ ನಿರ್ಮಾಣವಾಗಿದೆ ಮತ್ತು ಮೂಲ ಕಟ್ಟಡದೊಂದಿಗೆ ನಂಟು ಹೊಂದಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಮಸೀದಿ ಸಮಿತಿ ಹೇಳಿರುವಂತೆ ಶಿವಲಿಂಗ ಕೇವಲ ಕಾರಂಜಿಯಾಗಿರುವುದರಿಂದ ಮುಸ್ಲಿಮರಿಗೆ ಅದು ಧಾರ್ಮಿಕವಾಗಿ ಮಹತ್ವದ್ದಲ್ಲ ಎಂದು ಹಿಂದೂ ಪಕ್ಷಕಾರರು ಹೇಳಿಕೊಂಡಿದ್ದಾರೆ.

ಶಿವಲಿಂಗದ ರಚನೆ ಹೊರತುಪಡಿಸಿ ಅತಿಕ್ರಮಿಸದಂತಹ ತಂತ್ರಜ್ಞಾನ ಬಳಸಿಕೊಂಡು ಮಸೀದಿ ಆವರಣವನ್ನು ಸಮೀಕ್ಷೆ ಮಾಡಲು ಎಎಸ್ಐಗೆ ಈ ಹಿಂದೆ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಅನುಮತಿ ನೀಡಿತ್ತು.

ಬಳಿಕ ವರದಿ ಸಲ್ಲಿಸಿದ್ದ ಎಎಸ್‌ಐ ಮಸೀದಿಯನ್ನು ನಿಜವಾಗಿಯೂ ಹಿಂದೂ ಪ್ರಾಚೀನ ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂದಿತ್ತು.

ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ, ನ್ಯಾಯಮೂರ್ತಿ ಮನೋಜ್ ಮಿಶ್ರಾ
ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ, ನ್ಯಾಯಮೂರ್ತಿ ಮನೋಜ್ ಮಿಶ್ರಾ

ಶಿವಲಿಂಗದ ವೈಶಿಷ್ಟ್ಯಗಳಾದ ʼಪೀಠ, ಪೀಠಿಕಾʼ ಇತ್ಯಾದಿಗಳನ್ನು ಮರೆಮಾಚಲು ಉದ್ದೇಶಪೂರ್ವಕವಾಗಿ ಶಿವಲಿಂಗದ ಸುತ್ತಲೂ ಹೊಸದಾಗಿ ಗೋಡಿ ನಿರ್ಮಿಸಲಾಗಿದೆ ಎಂದು ಹಿಂದೂ ಪಕ್ಷಕಾರರು ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.

ಶಿವಲಿಂಗದ ನೈಜ ಮೂಲವನ್ನು ನಿರ್ಧರಿಸಲು ಎಎಸ್ಐ ಸಮೀಕ್ಷೆಯ ಅಗತ್ಯವಿದೆ. ಶಿವಲಿಂಗ, ಅದರ ಸುತ್ತಲಿನ ಪ್ರದೇಶ, ಗೋಡೆಗಳು ಮತ್ತು ಸಂಪೂರ್ಣ ಮೊಹರು ಮಾಡಿದ ಪ್ರದೇಶವನ್ನು ಎಎಸ್‌ಐ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕೆಂದು ಕೋರಲಾಗಿದೆ.

ಸಮೀಕ್ಷೆ ವೇಳೆ ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಪತ್ತೆಯಾದ ವಸ್ತು ಹಿಂದೂ ಪಕ್ಷಕಾರರು ಹೇಳಿದಂತೆ ಶಿವಲಿಂಗವೇ ಎಂಬ ವಿವಾದಾತ್ಮಕ ವಿಚಾರಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಕೈಗೆತ್ತಿಕೊಂಡಿತ್ತು.

ಮಸೀದಿ ಆವರಣದಲ್ಲಿ ಪೂಜಿಸುವ ಹಕ್ಕುಗಳನ್ನು ಕೋರಿ ಹಿಂದೂ ಆರಾಧಕರು ಸಲ್ಲಿಸಿದ್ದ 1991ರ ಸಿವಿಲ್ ಮೊಕದ್ದಮೆಯ ನಿರ್ವಹಣಾರ್ಹತೆ ಪ್ರಶ್ನಿಸಿ ಮುಸ್ಲಿಂ ಪಕ್ಷಕಾರರು ಸಲ್ಲಿಸಿದ್ದ ಅರ್ಜಿಯನ್ನು 2023ರ ಡಿಸೆಂಬರ್‌ನಲ್ಲಿ ಅಲಾಹಾಬಾದ್‌ ಹೈಕೋರ್ಟ್‌ ತಿರಸ್ಕರಿಸಿತ್ತು.

1991ರ ಪೂಜಾ ಸ್ಥಳಗಳ (ವಿಶೇಷ ನಿಯಮಾವಳಿ) ಕಾಯಿದೆಯಿಂದ ಹಿಂದೂ ಪಕ್ಷಕಾರರ ದಾವೆಯನ್ನು ನಿರ್ಬಂಧಿಸಲಾಗದು ಎಂದು ಹೈಕೋರ್ಟ್ ತೀರ್ಪು ನೀಡಿತ್ತು.

Kannada Bar & Bench
kannada.barandbench.com