ಜ್ಞಾನವಾಪಿ ಮಸೀದಿ ಸಮೀಕ್ಷೆಯ ವಿಚಾರದಲ್ಲಿ ಜುಲೈ 26ರವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿರುವ ಸುಪ್ರೀಂ ಕೋರ್ಟ್ ಆ ಮೂಲಕ ಮುಸ್ಲಿಂ ಪಕ್ಷಕಾರರಿಗೆ ಅಲಾಹಾಬಾದ್ ಹೈಕೋರ್ಟ್ ಎಡತಾಕಲು ಸಮಯಾವಕಾಶ ಕಲ್ಪಿಸಿದೆ [ಅಂಜುಮಾನ್ ಇಂತೆಝಾಮಿಯಾ ಮಸೀದಿ ನಿರ್ವಹಣಾ ಸಮಿತಿ ವಾರಾಣಸಿ ಮತ್ತು ಶ್ರೀಮತಿ ರಾಖಿ ಸಿಂಗ್ ನಡುವಣ ಪ್ರಕರಣ].
ಕಳೆದ ವಾರ ವಾರಾಣಸಿ ನ್ಯಾಯಾಲಯ ನೀಡಿದ್ದ ಆದೇಶದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಜ್ಞಾನವಾಪಿ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆ ಆರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೋಮವಾರ ಆದೇಶಿಸಿದೆ
ಶುಕ್ರವಾರ ಸಂಜೆ 4:30ಕ್ಕೆ ಸಮೀಕ್ಷೆಗೆ ಅನುಮತಿ ನೀಡುವ ಆದೇಶ ನೀಡಲಾಗಿದೆ ಎಂಬುದನ್ನು ಗಮನಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ಅಲಾಹಾಬಾದ್ ಹೈಕೋರ್ಟ್‌ಗೆ ತೆರಳಲು ಮುಸ್ಲಿಂ ಪಕ್ಷಕಾರರಿಗೆ ಅವಕಾಶ ನೀಡುವುದಕ್ಕಾಗಿ ಜು. 26ರವರೆಗೆ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಜಾರಿಗೆ ತರುವಂತಿಲ್ಲ ಎಂದು ಆದೇಶಿಸಿತು.
ಮುಸ್ಲಿಂ ಪಕ್ಷಕಾರರು ಅರ್ಜಿ ಸಲ್ಲಿಸಿದ ಬಳಿಕ ಹೈಕೋರ್ಟ್ ವಿಚಾರಣೆಗಾಗಿ ಪ್ರಕರಣವನ್ನು ರೋಸ್ಟರ್ ಮುಂದೆ ಇರಿಸಬೇಕು ಎಂದು ನ್ಯಾಯಾಲಯ ಹೈಕೋರ್ಟ್ ರಿಜಿಸ್ಟ್ರಾರ್ (ನ್ಯಾಯಾಂಗ) ಅವರಿಗೆ ನಿರ್ದೇಶನ ನೀಡಿದೆ.
"ವಾರಾಣಸಿ ಜಿಲ್ಲಾ ನ್ಯಾಯಾಧೀಶರ ಆದೇಶವನ್ನು ಪ್ರಶ್ನಿಸಿ ಆರ್ಟಿಕಲ್ 227 ರ ಅಡಿಯಲ್ಲಿ ಹೈಕೋರ್ಟ್ ಮೆಟ್ಟಿಲೇರಲು ನಾವು ಅರ್ಜಿದಾರರಿಗೆ ಅನುಮತಿ ನೀಡುತ್ತೇವೆ. ಜುಲೈ 21, ಸಂಜೆ 4:30 ರಂದು ಆದೇಶ ಹೊರಡಿಸಲಾಗಿದ್ದು ಇಂದು (ಸೋಮವಾರ) ಎಎಸ್‌ಐ ಸಮೀಕ್ಷೆ ನಡೆಸುತ್ತಿದೆ. ಮುಸ್ಲಿಂ ಪಕ್ಷಕಾರರಿಗೆ ಅವಕಾಶ ನೀಡಲು, ಜಿಲ್ಲಾ ನ್ಯಾಯಾಲಯದ ಆದೇಶವನ್ನು ಜುಲೈ 26 ರವರೆಗೆ ಜಾರಿಗೊಳಿಸಬಾರದು ಎಂದು ನಾವು ಸೂಚಿಸುತ್ತೇವೆ. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಲಾದ ಆದೇಶದ ಅವಧಿ ಕೊನೆಗೊಳ್ಳುವ ಮೊದಲು ಪ್ರಕರಣ ಆಲಿಸಲು ಅನುವಾಗುವಂತೆ ಅದನ್ನು ರೋಸ್ಟರ್ ಮುಂದಿರಿಸಬೇಕು” ಎಂದು ನ್ಯಾಯಾಲಯ ಹೇಳಿದೆ.
ಕಟ್ಟಡಕ್ಕೆ ಧಕ್ಕೆ ತರುವಂತಹ ಕಾರ್ಯ ಕೈಗೊಳ್ಳದಂತೆ ಎಎಸ್ಐ ಗೆ ನಿರ್ದೇಶನ ನೀಡಿ ಜುಲೈ 28ರಂದು ಪ್ರಕರಣದ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಆರಂಭದಲ್ಲಿ ತೀರ್ಮಾನಿಸಿತ್ತು.
ಆದರೆ ಮುಸ್ಲಿಂ ಪಕ್ಷಕಾರರ ಪರ ಹಾಜರಾದ ಹಿರಿಯ ವಕೀಲ ಹುಝೆಫಾ ಅಹ್ಮದಿ ಎಎಸ್‌ಐ ಈಗಾಗಲೇ ಮಸೀದಿಯ ಪಶ್ಚಿಮ ಗೋಡೆಯನ್ನು ಅಗೆಯಲು ಆರಂಭಿಸಿದೆ ಎಂದು ತಿಳಿಸಿದ ಬಳಿಕ ನ್ಯಾಯಾಲಯ ಇಂದೇ ಪ್ರಕರಣದ ವಿಚಾರಣೆ ನಡೆಸಲು ತೀರ್ಮಾನಿಸಿತು.
ಗೋಡೆಗಳನ್ನು ಒಡೆದಿಲ್ಲ. ಅಳತೆ ಮತ್ತು ಛಾಯಾಗ್ರಹಣ ಮಾತ್ರ ನಡೆಸಲಾಗುತ್ತಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿಪಾದಿಸಿದರು. ಆವರಣದ ಯಾವುದೇ ನಿರ್ಮಿತಿಯಲ್ಲಿ ಬದಲಾವಣೆ ಮಾಡುವುದಿಲ್ಲ ಎಂದು ಅವರು ದೃಢಪಡಿಸಿದರು.
ಆದರೂ ಸಮೀಕ್ಷೆ ನಡೆಸಲು ಎಎಸ್‌ಐ ತರಾತುರಿ ತೋರುತ್ತಿರುವುದನ್ನು ಪ್ರಶ್ನಿಸಿದ ಅಹ್ಮದಿ ವಾರಾಣಸಿ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವಂತೆ ಒತ್ತಾಯಿಸಿದರು.