[ಜ್ಞಾನವಾಪಿ ಪ್ರಕರಣ] ಶಿವಲಿಂಗದ ವೈಜ್ಞಾನಿಕ ಪರಿಶೀಲನೆ ಮನವಿ ಕುರಿತಾದ ಆದೇಶ ಮುಂದೂಡಿದ ವಾರಾಣಸಿ ನ್ಯಾಯಾಲಯ

ವಿವಾದಿತ ಸ್ಥಳದಲ್ಲಿ ಪತ್ತೆಯಾದ ಶಿವಲಿಂಗವು ಹಿಂದೂಗಳ ಆರಾಧನೆಯ ವಸ್ತುವಾಗಿದ್ದು ಪ್ರಾಚೀನ ಕಾಲದಿಂದಲೂ ವಿವಾದಿತ ಆವರಣದಲ್ಲಿದೆ. ಶಿವಲಿಂಗದ ಸ್ವರೂಪ ಮತ್ತು ಕಾಲಮಾನ ಪತ್ತೆ ಮಾಡಲು ಎಎಸ್‌ಐಗೆ ನಿರ್ದೇಶಿಸಬೇಕು ಎನ್ನುವುದು ಅರ್ಜಿದಾರರ ವಾದ.
Gyanvapi Mosque
Gyanvapi Mosque
Published on

ಜ್ಞಾನವಾಪಿ ಮಸೀದಿ ಆವರಣದಲ್ಲಿ ಸಮೀಕ್ಷೆ ಕೈಗೊಂಡ ವೇಳೆ ಪತ್ತೆಯಾದ ವಸ್ತುವು ಶಿವಲಿಂಗವೋ ಅಥವಾ ಕಾರಂಜಿಯೋ ಎನ್ನುವುದನ್ನು ನಿರ್ಧರಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ವೈಜ್ಞಾನಿಕ ಪರಿಶೀಲನೆ ಕೈಗೊಳ್ಳುವಂತೆ ನಿರ್ದೇಶಿಸಲು ಕೋರಿ ಹಿಂದೂ ಪಕ್ಷಕಾರರು ಸಲ್ಲಿಸಿದ್ದ ಮನವಿಯ ಕುರಿತಾದ ಆದೇಶವನ್ನು ವಾರಾಣಸಿ ನ್ಯಾಯಾಲಯವು ಅಕ್ಟೋಬರ್‌ 11, 2022ಕ್ಕೆ ಮುಂದೂಡಿದೆ [ಶ್ರೀಮತಿ. ರಾಖಿ ಸಿಂಗ್ ವರ್ಸಸ್‌ ಉತ್ತರ ಪ್ರದೇಶ ಸರ್ಕಾರ].

ಪ್ರಕರಣದ ವಿಚಾರಣೆಯನ್ನು ಶುಕ್ರವಾರ ನಡೆಸಿದ ಜಿಲ್ಲಾ ನ್ಯಾಯಾಧೀಶ ಡಾ. ಎ ಕೆ ವಿಶ್ವೇಶ ಅವರು ಮಸೀದಿಯ ಸಮಿತಿಯು ಹಿಂದೂ ಪಕ್ಷಕಾರರ ಕೋರಿಕೆಯ ಸಂಬಂಧ ನ್ಯಾಯಾಲಯವು ಎತ್ತಿರುವ ಎರಡು ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸಲು ಸಮಯಾವಕಾಶ ಕೋರಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಂದೂಡಿದರು.

ಹಿಂದೂ ಪಕ್ಷಕಾರರ ಕೋರಿಕೆಯ ಹಿನ್ನೆಲೆಯಲ್ಲಿ ನ್ಯಾಯಾಲಯವು ಎರಡು ನಿರ್ದಿಷ್ಟ ಪ್ರಶ್ನೆಗಳನ್ನು ಪಕ್ಷಕಾರರ ಮುಂದಿರಿಸಿದ್ದು, ಇದಕ್ಕೆ ಉತ್ತರಿಸುವಂತೆ ಮಸೀದಿ ಸಮಿತಿಗೆ ಸೂಚಿಸಿದೆ. ಆ ಪ್ರಶ್ನೆಗಳು ಹೀಗಿವೆ:

- ಜ್ಞಾನವಾಪಿ ಮಸೀದಿ ಆವರಣದಲ್ಲಿ ಪತ್ತೆಯಾಯಿತು ಎನ್ನಲಾದ ಶಿವಲಿಂಗವು ಮೊಕದ್ದಮೆ ನಡೆಯುತ್ತಿರುವ ಆಸ್ತಿಯ ಒಂದು ಭಾಗವಾಗಿದೆಯೇ, ಇಲ್ಲವೇ?

- ಆಕ್ಷೇಪಿತ ನಿರ್ಮಿತಿಯ ಕುರಿತು 'ವೈಜ್ಞಾನಿಕ ತನಿಖೆ'ಗೆ ಆದೇಶಿಸಲು ನ್ಯಾಯಾಲಯಕ್ಕೆ ಅಧಿಕಾರವಿದೆಯೇ ಇಲ್ಲವೇ?

ಇದೇ ಪ್ರಶ್ನೆಗಳಿಗೆ ಉತ್ತರವಾಗಿ ಹಿಂದೂ ಪಕ್ಷಕಾರರ ಪರ ವಕೀಲ ವಿಷ್ಣು ಶಂಕರ್ ಜೈನ್‌ ಅವರು ಶುಕ್ರವಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಪತ್ತೆಯಾಗಿದೆ ಎನ್ನಲಾದ ಶಿವಲಿಂಗವು ಮೊಕದ್ದಮೆಯ ಹೂಡಲಾಗಿರುವ ಆಸ್ತಿಯ ಭಾಗ ಎಂದು ಅವರು ಮೊದಲನೆಯ ಪ್ರಶ್ನೆಗೆ ಉತ್ತರಿಸಿದರು. ಎರಡನೆಯ ಪ್ರಶ್ನೆಗೆ ಅವರು, 1908ರ ನಾಗರಿಕ ಪ್ರಕ್ರಿಯಾ ಸಂಹಿತೆಯ ನಿಯಮ 10ಎ ಆದೇಶ 26ರ ಅಡಿ ಪತ್ತೆಯಾಗಿದೆ ಎನ್ನಲಾದ ಶಿವಲಿಂಗದ 'ವೈಜ್ಞಾನಿಕ ತನಿಖೆ'ಗೆ ಆದೇಶಿಸಲು ನ್ಯಾಯಾಲಯಕ್ಕೆ ಅಧಿಕಾರವಿದೆ ಎಂದು ಹೇಳಿದರು.

ಹಿಂದೂ ಪಕ್ಷಕಾರರ ಈ ವಿವರಣೆಗೆ ಸಂಬಂಧಿಸಿದಂತೆ ನ್ಯಾಯಾಲಯವು ಮಸೀದಿ ಸಮಿತಿಯ ಪ್ರತಿಕ್ರಿಯೆಯನ್ನು ಅಕ್ಟೋಬರ್‌ 11ಕ್ಕೆ ಆಲಿಸಲಿದೆ.

ವಿವಾದಿತ ಸ್ಥಳದಲ್ಲಿ ಪತ್ತೆಯಾದ ಶಿವಲಿಂಗವು ಹಿಂದೂಗಳ ಆರಾಧನೆಯ ವಸ್ತುವಾಗಿದ್ದು ಪ್ರಾಚೀನ ಕಾಲದಿಂದಲೂ ವಿವಾದಿತ ಆವರಣದಲ್ಲಿದೆ ಎಂದು ನಂಬಲಾಗಿದೆ. ಈ ಕುರಿತು ಸಂಪೂರ್ಣ ನ್ಯಾಯಕ್ಕಾಗಿ ಮತ್ತು ಶಿವನ ಬಹುಸಂಖ್ಯೆಯ ಆರಾಧಕರಿಗೆ ಪರಿಹಾರ ಒದಗಿಸಿಕೊಡುವ ಸಲುವಾಗಿ ಶಿವಲಿಂಗದ ಸ್ವರೂಪ ಮತ್ತು ಕಾಲಮಾನ ಪತ್ತೆ ಮಾಡಲು ಎಎಸ್‌ಐಗೆ ನಿರ್ದೇಶಿಸಬೇಕು ಎನ್ನುವುದು ಅರ್ಜಿದಾರರ ಬೇಡಿಕೆಯಾಗಿದೆ.

ಆಸಕ್ತಿಕರ ಸಂಗತಿ ಎಂದರೆ, ಶಿವಲಿಂಗದ ಕುರಿತ ವೈಜ್ಞಾನಿಕ ತನಿಖೆಯ ಬಗ್ಗೆ ಹಿಂದೂ ಪಕ್ಷಕಾರರಲ್ಲಿಯೇ ಒಮ್ಮತವಿಲ್ಲ. ಒಟ್ಟು ಐವರು ಹಿಂದೂ ಅರ್ಜಿದಾರರಲ್ಲಿ ನಾಲ್ವರು ವೈಜ್ಞಾನಿಕ ತನಿಖೆಯ ಪರವಾಗಿದ್ದರೆ ಓರ್ವ ಅರ್ಜಿದಾರೆ ರಾಖಿ ಸಿಂಗ್‌ ಅವರು ವೈಜ್ಞಾನಿಕ ತನಿಖೆಗೆ ವಿರುದ್ಧವಾಗಿದ್ದಾರೆ. ಈ ವಿಚಾರದಲ್ಲಿ ಮಸೀದಿ ಸಮಿತಿ ಮತ್ತು ರಾಖಿ ಸಿಂಗ್ ಅವರ ನಿಲುವು ಒಂದೇ ಆಗಿದೆ.

Kannada Bar & Bench
kannada.barandbench.com