ವಾರಣಸಿಯ ಗ್ಯಾನವಪಿ ಮಸೀದಿಯಲ್ಲಿ ಪರಿಶೀಲನೆ ನಡೆಸಿ ಸರ್ವೆ ಮತ್ತು ವಿಡಿಯೊಗ್ರಫಿ ಮಾಡಲು ನ್ಯಾಯಾಲಯ ನೇಮಿಸಿರುವ ಆಯುಕ್ತರಿಗೆ ಅನುಮತಿಸಿರುವ ಅಲಾಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ [ಅಂಜುಮನ್ ಇಂತೆಜಾಮಿಯಾ ಮಸೀದಿ ವರ್ಸಸ್ ರಾಖಿ ಸಿಂಗ್ ಮತ್ತು ಇತರರು].
ಪ್ರಕರಣವನ್ನು ತುರ್ತಾಗಿ ಪಟ್ಟಿ ಮಾಡುವಂತೆ ಅಂಜುಮನ್ ಇಂತೆಜಾಮಿಯಾ ಮಸೀದಿ ಸಲ್ಲಿಸಿರುವ ಮನವಿಯನ್ನು ಹಿರಿಯ ವಕೀಲ ಹುಜೇಫಾ ಅಹ್ಮದಿ ಅವರು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರ ನೇತೃತ್ವದ ಪೀಠದ ಮುಂದೆ ಉಲ್ಲೇಖಿಸಿದರು.
“ಇಂದಿನಿಂದ ಸರ್ವೆ ನಡೆಯಲಿದ್ದು, ಈ ಪ್ರಕರಣವನ್ನು ತುರ್ತಾಗಿ ವಿಚಾರಣೆಗೆ ಪಟ್ಟಿ ಮಾಡಿ” ಎಂದು ಅಹ್ಮದಿ ವಿನಂತಿಸಿದರು. ಮನವಿ ಮತ್ತು ದಾಖಲೆಗಳನ್ನು ಪರಿಶೀಲಿಸಿ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲಾಗುವುದು. “ಈ ಪ್ರಕರಣದ ಬಗ್ಗೆ ನನಗೆ ಮಾಹಿತಿ ಇಲ್ಲ. ದಾಖಲೆಗಳನ್ನು ಪರಿಶೀಲಿಸಿ ಅದನ್ನು ವಿಚಾರಣೆಗೆ ನಿಗದಿ ಮಾಡುತ್ತೇನೆ” ಎಂದು ಸಿಜೆಐ ಹೇಳಿದರು.
ಮಸೀದಿಯಲ್ಲಿ ಹಿಂದೂ ದೇವರುಗಳಿದ್ದು, ಅಲ್ಲಿ ಪೂಜೆ ಮತ್ತು ಪ್ರಾರ್ಥನೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಹಿಂದೂಗಳು ಅಧೀನ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದಾರೆ. ಸರ್ವೆ ಮತ್ತು ವಿಡಿಯೊಗ್ರಫಿ ನಡೆಸಲು ಅಧೀನ ನ್ಯಾಯಾಲಯವು ಆಯುಕ್ತರನ್ನು ನೇಮಕ ಮಾಡಿದೆ. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಅಲಾಹಾಬಾದ್ ಹೈಕೋರ್ಟ್‌ನಲ್ಲಿ ಏಪ್ರಿಲ್ 21ರಂದು ವಜಾ ಮಾಡಿದೆ.
ಇದರ ಬೆನ್ನಿಗೇ, ನ್ಯಾಯಾಲಯ ನೇಮಿಸಿರುವ ಆಯುಕ್ತರು ಪಕ್ಷಪಾತಿಯಾಗಿದ್ದು, ಅವರನ್ನು ಬದಲಾಯಿಸಬೇಕು ಎಂದು ಆಕ್ಷೇಪಿಸಿ ಅಧೀನ ನ್ಯಾಯಾಲಯದಲ್ಲಿ ಮಸೀದಿ ಸಮಿತಿಯು ಮನವಿ ಸಲ್ಲಿಸಿತ್ತು. ಈ ಮನವಿಯನ್ನೂ ವಜಾ ಮಾಡಿರುವುದರಿಂದ ಸರ್ವೆಗೆ ಅನುಮತಿ ದೊರೆತಿದೆ.