ಶಿವಲಿಂಗದ ವೈಜ್ಞಾನಿಕ ವಿಶ್ಲೇಷಣೆಗೆ ಅನುಮತಿಸಿದ್ದ ಹೈಕೋರ್ಟ್‌ ಆದೇಶವನ್ನು ತಾತ್ಕಾಲಿಕವಾಗಿ ಮುಂದೂಡಿದ ಸುಪ್ರೀಂ ಕೋರ್ಟ್

ಹೈಕೋರ್ಟ್‌ ಆದೇಶ ಪ್ರಶ್ನಿಸಿ ಮುಸ್ಲಿಮ್‌ ಪಕ್ಷಕಾರರು ಸಲ್ಲಿಸಿರುವ ಮೇಲ್ಮನವಿಗೆ ಆಕ್ಷೇಪಣೆ ಸಲ್ಲಿಸುವಂತೆ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.
Gyanvapi- Kashi dispute
Gyanvapi- Kashi dispute

ಜ್ಞಾನವಾಪಿ ಮಸೀದಿ ವ್ಯಾಪ್ತಿಯಲ್ಲಿ ಪತ್ತೆಯಾದ ವಸ್ತುವು ಶಿವಲಿಂಗವೇ ಅಥವಾ ಕಾರಂಜಿಯೇ ಎಂಬುದಕ್ಕೆ ಸಂಬಂಧಿಸಿದಂತೆ ವೈಜ್ಞಾನಿಕ ತನಿಖೆ ನಡೆಸಲು ಅಲಾಹಾಬಾದ್‌ ಹೈಕೋರ್ಟ್‌ ಮಾಡಿರುವ ಆದೇಶವನ್ನು ಸುಪ್ರೀಂ ಕೋರ್ಟ್‌ ಸದ್ಯಕ್ಕೆ ಮುಂದೂಡಿದೆ.

ಅಲಾಹಾಬಾದ್‌ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಅಂಜುಮನ್‌ ಇಂತೇಜಾಮಿಯಾ ಮಸೀದಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಪಿ ಎಸ್‌ ನರಸಿಂಹ ಅವರ ನೇತೃತ್ವದ ವಿಭಾಗೀಯ ಪೀಠವು ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಂದ ಪ್ರತಿಕ್ರಿಯೆ ಬಯಸಿದೆ.

“ವಿಶೇಷ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲು ಇಂದು ಕೋರಲಾಗಿದೆ. ಆದರೆ, ಪ್ರಮುಖ ಅರ್ಜಿಯನ್ನು ಇಂದು ವಿಚಾರಣೆಗೆ ನಿಗದಿಪಡಿಸಲಾಗಿದೆ. ಉತ್ತರ ಪ್ರದೇಶ ಮತ್ತು ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಿಚಾರಣೆಗೆ ಹಾಜರಾಗಿದ್ದು, ನೋಟಿಸ್‌ ಜಾರಿ ಮಾಡಬೇಕು. ಹೈಕೋರ್ಟ್ ಆದೇಶದಲ್ಲಿನ ನಿರ್ದೇಶನಗಳ ಪರಿಣಾಮವು ಸೂಕ್ಷ್ಮವಾಗಿ ಪರಿಶೀಲಿಸಲು ಅರ್ಹವಾಗಿರುವುದರಿಂದ, ವಿಚಾರಣೆ ಮುಂದೂಡಲಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಇದಕ್ಕೂ ಮುನ್ನ, ಮುಸ್ಲಿಮ್‌ ಪಕ್ಷಕಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹುಫೇಜ್‌ ಅಹ್ಮದಿ ಅವರು ಮೇ 22ರಂದು ಕಾರ್ಬನ್‌ ಡೇಟಿಂಗ್‌ ನಡೆಸಲು ಉದ್ದೇಶಿಸಲಾಗಿದೆ. ಇದನ್ನು ರಜೆಯಲ್ಲಿ ಮಾಡದಂತೆ ನಿರ್ದೇಶಿಸಬೇಕು” ಎಂದು ಕೋರಿದರು.

ಆಗ ಪೀಠವು “ಇದನ್ನು ನಾವು ಎಚ್ಚರಿಕೆಯಿಂದ ಪರಿಶೀಲಿಸಬೇಕೆ ಸಾಲಿಸಿಟರ್‌ ಜನರಲ್‌” ಎಂದು ಕೇಳಿತು.

ಇದಕ್ಕೆ ಎಸ್‌ಜಿ ಮೆಹ್ತಾ “ಹೌದು. ಒಬ್ಬರು ಪಕ್ಷಕಾರರು ಅದು ಶಿವಲಿಂಗ ಎಂಥಲೂ ಮತ್ತೊಬ್ಬರು ಅದು ಕಾರಂಜಿ ಎನ್ನುತ್ತಿದ್ದು, ಅದಕ್ಕೆ ಯಾವುದೇ ಹಾನಿಯಾಗದಂತೆ ಎಚ್ಚರವಹಿಸಬೇಕು” ಎಂದರು.

ಆಗ ಪೀಠವು ಹೈಕೋರ್ಟ್‌ ಆದೇಶ ಮುಂದೂಡಿ, ಪಕ್ಷಕಾರರಿನಿಗೆ ನೋಟಿಸ್‌ ಜಾರಿ ಮಾಡಿತು.

ವೈಜ್ಞಾನಿಕ ತನಿಖೆ ನಡೆಸಲು ಪ್ರಾಚ್ಯವಸ್ತು ಇಲಾಖೆಗೆ (ಎಎಸ್‌ಐ) ನಿರ್ದೇಶಿಸಬೇಕು ಎಂಬ ಹಿಂದೂ ಪಕ್ಷಕಾರರ ಕೋರಿಕೆಯನ್ನು ತಿರಸ್ಕರಿಸಿ ವಾರಾಣಸಿ ಜಿಲ್ಲಾ ನ್ಯಾಯಾಲಯವು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಮಾಡಿದ್ದ ಆದೇಶವನ್ನು ಅಲಾಹಾಬಾದ್‌ ಹೈಕೋರ್ಟ್‌ ಬದಿಗೆ ಸರಿಸಿತ್ತು. ಈಗ ಇದನ್ನು ಪ್ರಶ್ನಿಸಿ ಮುಸ್ಲಿಮ್‌ ಪಕ್ಷಕಾರರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

Related Stories

No stories found.
Kannada Bar & Bench
kannada.barandbench.com