ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ದೊರೆತ ಶಿವಲಿಂಗ ಎನ್ನಲಾದ ವಸ್ತುವನ್ನು ರಕ್ಷಿಸಬೇಕು ಎಂದು ಕೋರಿದ್ದ ಆದೇಶವನ್ನು ವಿಸ್ತರಿಸಬೇಕೆಂದು ಕೋರಿ ಹಿಂದೂ ಪಕ್ಷಕಾರರು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಬರುವ ಸೋಮವಾರ ವಿಚಾರಣೆ ನಡೆಸಲಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠದ ಎದುರು ವಕೀಲ ವಿಷ್ಣು ಶಂಕರ್ ಜೈನ್ ಅವರು ಇಂದು ಪ್ರಕರಣ ಪ್ರಸ್ತಾಪಿಸಿದರು. ಈ ಸಂಬಂಧ ನಾಳೆ ಮಧ್ಯಾಹ್ನ ಮೂರು ಗಂಟೆಗೆ ಪೀಠ ರಚಿಸುವುದಾಗಿ ನ್ಯಾಯಾಲಯ ತಿಳಿಸಿತು.
ಸಮೀಕ್ಷೆ ವೇಳೆ ದೊರೆತ ವಸ್ತುವನ್ನು ರಕ್ಷಿಸಬೇಕು ಎಂದು ನೀಡಿದ್ದ ಆದೇಶದ ಗಡುವು ನವೆಂಬರ್ 12ಕ್ಕೆ ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಲಾಗಿದೆ. ಆದೇಶ 7 ನಿಯಮ 11ರಂತೆ (ದೂರುಗಳ ತಿರಸ್ಕಾರ) ಮುಸ್ಲಿಂ ಪಕ್ಷಕಾರರ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಕೂಡ ಅವರು ತಿಳಿಸಿದರು.
ಜ್ಞಾನವಾಪಿ ಮಸೀದಿಯ ಆವರಣದ ಸಮೀಕ್ಷೆಯ ವೇಳೆ ಕಂಡುಬಂದ ವಸ್ತು ಶಿವಲಿಂಗವೇ ಅಥವಾ ಕಾರಂಜಿಯೇ ಎಂಬ ಕುರಿತು ವೈಜ್ಞಾನಿಕ ತನಿಖೆ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್ಐ) ನಿರ್ದೇಶನ ನೀಡಬೇಕೆಂದು ಕೋರಿ ಹಿಂದೂ ಪಕ್ಷಕಾರರು ಸಲ್ಲಿಸಿದ್ದ ಮನವಿಯನ್ನು ಕಳೆದ ತಿಂಗಳು, ವಾರಾಣಸಿ ನ್ಯಾಯಾಲಯ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಅಲಾಹಾಬಾದ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.
ಜ್ಞಾನವಾಪಿ ಮಸೀದಿಯಲ್ಲಿ ದೊರೆತ ವಸ್ತುವಿನ ಕಾಲ ನಿರ್ಧರಿಸುವುದಕ್ಕೆ ಬಳಸುವ ಕಾರ್ಬನ್ ಡೇಟಿಂಗ್, ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (ಜಿಪಿಆರ್), ಉತ್ಖನನ ಮತ್ತಿತರ ವಿಧಾನಗಳಿಂದ ಆ ವಸ್ತುವಿಗೆ ಹಾನಿಯಾಗುತ್ತದೆಯೇ ಎಂಬ ಕುರಿತು ಅಭಿಪ್ರಾಯ ನೀಡುವಂತೆ ಅಲಾಹಾಬಾದ್ ಹೈಕೋರ್ಟ್ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಹಾನಿರ್ದೇಶಕರಿಗೆ ಕಳೆದ ವಾರ ಸೂಚಿಸಿತ್ತು.