ಮಸೀದಿಯಲ್ಲಿ ಹಿಂದೂಗಳ ಪ್ರಾರ್ಥನೆಗೆ ಅನುಮತಿ: ಅಲಾಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ ಜ್ಞಾನವಾಪಿ ಮಸೀದಿ ಸಮಿತಿ

ಜ್ಞಾನವಾಪಿ ಮಸೀದಿ ಇರುವ ಭೂಮಿಯ ಧಾರ್ಮಿಕ ಸ್ವರೂಪ ಕುರಿತಂತೆ ನ್ಯಾಯಾಲಯದಲ್ಲಿ ಬಿರುಸಿನ ವಿಚಾರಣೆ ನಡೆಯುತ್ತಿರುವ ಮಧ್ಯೆಯೇ ಜಿಲ್ಲಾ ನ್ಯಾಯಾಲಯ ನಿನ್ನೆ ಹಿಂದೂ ದಾವೆದಾರರಿಗೆ ಮಸೀದಿ ನೆಲಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿತ್ತು.
ಅಲಾಹಾಬಾದ್ ಹೈಕೋರ್ಟ್, ಜ್ಞಾನವಾಪಿ ಮಸೀದಿ
ಅಲಾಹಾಬಾದ್ ಹೈಕೋರ್ಟ್, ಜ್ಞಾನವಾಪಿ ಮಸೀದಿ

ಉತ್ತರಪ್ರದೇಶದ ವಾರಾಣಸಿಯಲ್ಲಿರುವ ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಹಿಂದೂ ದಾವೆದಾರರಿಗೆ ಪ್ರಾರ್ಥನೆ ಮತ್ತು ಪೂಜೆ ಸಲ್ಲಿಸಲು ಅವಕಾಶ ನೀಡಿದ್ದ ವಾರಾಣಸಿ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅಂಜುಮನ್ ಇಂತೆಜಾಮಿಯಾ ಮಸ್ಜೀದ್‌ ಸಮಿತಿ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಪ್ರಕರಣವನ್ನು ರಿಯ ವಕೀಲ ಎಸ್ಎಫ್ಎ ನಖ್ವಿ ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನೋಜ್ ಕುಮಾರ್ ಗುಪ್ತಾ ಅವರೆದುರು ಪ್ರಸ್ತಾಪಿಸಿದರು. ಆಗ ನ್ಯಾಯಮೂರ್ತಿಗಳ ಸಲಹೆಯಂತೆ, ತುರ್ತು ವಿಚಾರಣೆಗಾಗಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಅವರೆದುರು ಅರ್ಜಿ ಸಲ್ಲಿಸಲಾಯಿತು.

ಇದಕ್ಕೂ ಮುನ್ನ ಇಂದು ಬೆಳಿಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಸಮಿತಿ ಪ್ರಕರಣದಲ್ಲಿ ತ್ವರಿತ ವಿಚಾರಣೆ ಕೋರಿತ್ತು. ಆದರೆ ಅಲಾಹಾಬಾದ್‌ ಹೈಕೋರ್ಟ್‌ ಮೊರೆ ಹೋಗುವಂತೆ ಸುಪ್ರೀಂ ಕೋರ್ಟ್‌ ರಿಜಿಸ್ಟ್ರಾರ್‌ ಮುಸ್ಲಿಂ ದಾವೆದಾರರಿಗೆ ಸೂಚಿಸಿದ್ದರು.

17ನೇ ಶತಮಾನದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್ ಆಳ್ವಿಕೆಯಲ್ಲಿ ದೇವಾಲಯದ ಒಂದು ಭಾಗವನ್ನು ನಾಶಪಡಿಸಲಾಗಿದೆ ಎಂಬುದು ಹಿಂದೂ ಪಕ್ಷಕಾರರ ವಾದವಾಗಿತ್ತು.

ಆದರೆ, ಮಸೀದಿ ಔರಂಗಜೇಬನ ಆಳ್ವಿಕೆಗಿಂತ ಮುಂಚಿನದು ಕಾಲಾನಂತರದಲ್ಲಿ ಇದು ವಿವಿಧ ಬದಲಾವಣೆಗಳಿಗೆ ಒಳಪಟ್ಟಿದೆ ಎಂದು ಮುಸ್ಲಿಂ ಪಕ್ಷಕಾರರು ಸಮರ್ಥಿಸಿಕೊಂಡಿದ್ದರು.

ವಾದ ಆಲಿಸಿದ್ದ ಜಿಲ್ಲಾ ನ್ಯಾಯಾಧೀಶ ಎ ಕೆ ವಿಶ್ವೇಶ ಅವರು ಕಾಶಿ ವಿಶ್ವನಾಥ ಟ್ರಸ್ಟ್ ಮಂಡಳಿಯು ಸೂಚಿಸುವ ಅರ್ಚಕರಿಗೆ ಪೂಜೆ ಪುನಸ್ಕಾರ ಸಲ್ಲಿಸಲು ಹಸ್ತಾಂತರಿಸಬೇಕು. ಈ ಉದ್ದೇಶಕ್ಕಾಗಿ, ಬೇಲಿಯನ್ನು ಸಹ ನಿರ್ಮಿಸಬಹುದು ಎಂದು ನಿನ್ನೆ ತೀರ್ಪು ನೀಡಿದ್ದರು.

ಜಿಲ್ಲಾ ನ್ಯಾಯಾಲಯದ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ದಾವೆದಾರರು ಈ ಸಂಬಂಧ ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿಗೆ ಬರೆದಿದ್ದ ಪತ್ರದಲ್ಲಿ "ಇಂತಹ ಅನಗತ್ಯ ಅವಸರಕ್ಕೆ ಕಾರಣ ಎಂದರೆ ಸರ್ಕಾರ ಹಿಂದೂ ದಾವೆದಾರರೊಂದಿಗೆ ಸೇರಿಕೊಂಡು ಮಸೀದಿ ನಿರ್ವಹಣಾ ಸಮಿತಿ ಆದೇಶದ ವಿರುದ್ಧ ಪರಿಹಾರ ಪಡೆಯದಂತೆ ಮುಂಚಿತವಾಗಿಯೇ ಮಾರ್ಗಗಳನ್ನು ಮುಚ್ಚುವುದಾಗಿದೆ" ಎಂದಿತ್ತು.

ಈ ಮಧ್ಯೆ, ಜಿಲ್ಲಾ ನ್ಯಾಯಾಲಯದ ಆದೇಶ ಪ್ರಶ್ನಿಸದಂತೆ ಹಿಂದೂ ದಾವೆದಾರರು ಅಲಾಹಾಬಾದ್‌ ಹೈಕೋರ್ಟ್‌ಗೆ ಕೇವಿಯಟ್‌ ಸಲ್ಲಿಸಿದ್ದಾರೆ.

Kannada Bar & Bench
kannada.barandbench.com