ಹಿಂದೂಗಳು ಮತ್ತು ಮುಸಲ್ಮಾನರ ನಡುವೆ ವಿವಾದದ ವಿಷಯವಾಗಿರುವ ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿಗೆ ಮುಸ್ಲಿಮರು ಪ್ರವೇಶಿಸದಂತೆ ವಾರಣಾಸಿ ನ್ಯಾಯಾಲಯ ವಿಧಿಸಿದ್ದ ನಿಷೇಧವನ್ನು ಸುಪ್ರೀಂ ಕೋರ್ಟ್ ಮಂಗಳವಾರ ತೆರವುಗೊಳಿಸಿದೆ.
ಕೋರ್ಟ್ ಕಮಿಷನರ್ ಸಮೀಕ್ಷೆ ವೇಳೆ ಮಸೀದಿ ಸಂಕೀರ್ಣದಲ್ಲಿ ಪತ್ತೆಹಚ್ಚಲಾದ ಶಿವಲಿಂಗವನ್ನು ಸಂರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ವಾರಣಾಸಿಯ ಜಿಲ್ಲಾಧಿಕಾರಿಗೆ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಪಿ ಎಸ್ ನರಸಿಂಹ ಅವರಿದ್ದ ಪೀಠ ನಿರ್ದೇಶಿಸಿದ್ದು ಅದರಿಂದ ಮುಸ್ಲಿಮರ ಪ್ರಾರ್ಥನೆಗೆ ಅಡ್ಡಿಯುಂಟಾಗಬಾರದು ಎಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಪ್ರತಿವಾದಿಗಳಿಗೆ ನೋಟಿಸ್ ನೀಡಿದೆ.
ಶಿವಲಿಂಗ ಇರುವ ಪ್ರದೇಶಕ್ಕೆ ಸೂಕ್ತ ರಕ್ಷಣೆ ನೀಡಬೇಕು. ಮೇಲಿನ ನಿರ್ದೇಶನವು ಯಾವುದೇ ರೀತಿಯಲ್ಲಿ ಮುಸ್ಲಿಮರು ಮಸೀದಿಗೆ ಪ್ರವೇಶಿಸುವುದನ್ನು ಅವರು ಪ್ರಾರ್ಥನೆ ಮತ್ತು ಧಾರ್ಮಿಕ ಆಚರಣೆಯಲ್ಲಿ ತೊಡಗುವುದನ್ನು ನಿರ್ಬಂಧಿಸುವುದಿಲ್ಲ ಇಲ್ಲವೇ ಅಡ್ಡಿಪಡಿಸುವುದಿಲ್ಲ.
ಸುಪ್ರೀಂ ಕೋರ್ಟ್
ಧಾರ್ಮಿಕ ಆಚರಣೆಗಳ ಭಾಗವಾಗಿರುವುದರಿಂದ ಮುಸ್ಲಿಮರು ವಝು ಮಾಡಲು ಅನುಮತಿಸಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. "ವಝು ಧಾರ್ಮಿಕ ಆಚರಣೆಯಲ್ಲವೇ? ನಾವು ಅದನ್ನು ರಕ್ಷಿಸುತ್ತಿದ್ದೇವೆ" ಎಂದು ಮುಸ್ಲಿಂ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಹುಝೆಫಾ ಅಹ್ಮದಿ ಅವರಿಗೆ ತಿಳಿಸಿತು. ಆದರೆ ಉತ್ತರ ಪ್ರದೇಶ ಸರ್ಕಾರ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಆಕ್ಷೇಪಣೆ ಬಳಿಕ ಸಿವಿಲ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡಲು ನ್ಯಾಯಾಲಯ ನಿರಾಕರಿಸಿತು.
ಆದೇಶದ ಪ್ರಮುಖಾಂಶಗಳು
ಶಿವಲಿಂಗ ವಶಪಡಿಸಿಕೊಂಡ ಮಸೀದಿಯೊಳಗಿನ ಪ್ರದೇಶಕ್ಕೆ ರಕ್ಷಣೆ ಒದಗಿಸಲಾಗಿದೆ ಎಂಬುದನ್ನು ಜಿಲ್ಲಾಧಿಕಾರಿ ಖಾತ್ರಿಪಡಿಸಿಕೊಳ್ಳಬೇಕು.
ಮಸೀದಿಯೊಳಗೆ ಮುಸ್ಲಿಮರ ಪ್ರಾರ್ಥನೆ ಮತ್ತು ಧಾರ್ಮಿಕ ಆಚರಣೆಗಳ ಹಕ್ಕಿಗೆ ತೊಂದರೆಯಾಗಬಾರದು.
ಇಪ್ಪತ್ತು ಜನರು ಮಾತ್ರ ಪ್ರಾರ್ಥನೆ ಮಾಡಬೇಕು ಎಂಬಿತ್ಯಾದಿ ವಿಚಾರಣಾ ನ್ಯಾಯಾಲಯದ ನಿರ್ದೇಶನಗಳನ್ನು ಜಾರಿಗೆ ತರುವಂತಿಲ್ಲ.
ವಿಚಾರಣಾ ನ್ಯಾಯಾಲಯ ನಡೆಸುವ ವಿಚಾರಣೆಗೆ ತಡೆ ಇಲ್ಲ.
ಸರ್ವೋಚ್ಚ ನ್ಯಾಯಾಲಯ ಮೇ 19ರಂದು ಗುರುವಾರ ಪ್ರಕರಣವನ್ನು ಮತ್ತೆ ವಿಚಾರಣೆ ನಡೆಸಲಿದೆ.