ಪತ್ನಿಯನ್ನು ಆಕೆಯ ಪೋಷಕರು ಅಕ್ರಮವಾಗಿ ಒತ್ತೆ ಇಟ್ಟುಕೊಂಡಿದ್ದಾರೆ ಎನ್ನಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ರಾಜ್ಯಗಳ ಬೇರೆ ಬೇರೆ ನ್ಯಾಯಾಲಯಗಳ ನ್ಯಾಯಾಧೀಶರು ಮುಖಾಮುಖಿಯಾದ ಅಪರೂಪದ ಬೆಳವಣಿಗೆ ಈಚೆಗೆ ನಡೆದಿದೆ. ಕರ್ನಾಟಕ ಹೈಕೋರ್ಟ್ ಮತ್ತು ಆಂಧ್ರ ಪ್ರದೇಶ ನೆಲ್ಲೂರಿನ ನ್ಯಾಯಾಲಯಗಳ ನ್ಯಾಯಾಧೀಶರು ವಿಡಿಯೊ ಕಾನ್ಫರೆನ್ಸ್ ಮೂಲಕ ಮುಖಾಮುಖಿಯಾಗಿದ್ದಾರೆ.
ಬೆಂಗಳೂರಿನ 27 ವರ್ಷದ ಬೊಮ್ಮನಹಳ್ಳಿಯ ವ್ಯಕ್ತಿಯೊಬ್ಬರು ತನ್ನ ಪತ್ನಿಯನ್ನು ಆಕೆಯ ಪೋಷಕರು ಅಕ್ರಮವಾಗಿ ಒತ್ತೆ ಇಟ್ಟುಕೊಂಡಿದ್ದಾರೆ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಪಿ ಎಸ್ ದಿನೇಶ್ ಕುಮಾರ್ ಮತ್ತು ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.
ಸೆಪ್ಟೆಂಬರ್ 29ರಂದು ಹೈಕೋರ್ಟ್‌ನ ವಿಭಾಗೀಯ ಪೀಠವು ಅರ್ಜಿದಾರರ ಪತ್ನಿಯನ್ನು ನೆಲ್ಲೂರಿನ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಅರ್ಜಿದಾರರ ಪತ್ನಿ ಎನ್ನಲಾದ ಮಹಿಳೆಯನ್ನು ನೆಲ್ಲೂರಿನ ಐದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಜಿ ದೇವಿಕಾ ಅವರ ಮುಂದೆ ಹಾಜರುಪಡಿಸಿದ್ದರು. ನೆಲ್ಲೂರು ನ್ಯಾಯಾಲಯವನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಕರ್ನಾಟಕ ಹೈಕೋರ್ಟ್ ಜೊತೆ ಸಂಪರ್ಕಿಸಲಾಗಿತ್ತು.
ಬೆಂಗಳೂರಿನ ವ್ಯಕ್ತಿಯ ಪತ್ನಿ ಎನ್ನಲಾದ ಮಹಿಳೆಯ ಜೊತೆ ಹೈಕೋರ್ಟ್‌ನ ವಿಭಾಗೀಯ ಪೀಠವು ಸಂವಾದ ನಡೆಸಿತು. ನೀವು ಅರ್ಜಿದಾರರನ್ನು ವಿವಾಹವಾಗಿದ್ದೀರಾ ಎಂಬ ಪ್ರಶ್ನೆಗೆ ಅರ್ಜಿದಾರರ ಪತ್ನಿಯು ಇಲ್ಲ ಎಂದು ಉತ್ತರಿಸಿದ್ದಾರೆ. ಮದುವೆಯ ಪ್ರಸ್ತಾಪ ಇತ್ತೇ ಎಂಬುದಕ್ಕೂ ಮಹಿಳೆಯು ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಯಾರ ಜೊತೆ ಇದ್ದೀರಿ ಎಂಬ ಪ್ರಶ್ನೆಗೆ ಪೋಷಕರ ಜೊತೆಗಿದ್ದೇನೆ ಎಂದು ಹೇಳಿದ್ದಾರೆ. ಪೋಷಕರಿಂದ ಬೆದರಿಕೆ ಅಥವಾ ಬಲವಂತ ಇದೆಯೇ ಎಂಬ ಪ್ರಶ್ನೆಗೂ ನಕಾರಾತ್ಮವಾಗಿ ಉತ್ತರಿಸಿದ್ದಾರೆ ಎಂದು ಆದೇಶದಲ್ಲಿ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.
ವಿಡಿಯೊ ಕಾನ್ಫರೆನ್ಸ್ ಮೂಲಕ ಅರ್ಜಿದಾರ ಪತ್ನಿಯೊಂದಿಗೆ ವಿಚಾರಣೆಯಲ್ಲಿ ಭಾಗಿಯಾದ ನ್ಯಾಯಾಧೀಶರಾದ ಜಿ ದೇವಿಕಾ ಅವರ ಪ್ರಯತ್ನಕ್ಕೆ ಕರ್ನಾಟಕ ಹೈಕೋರ್ಟ್ ಮೆಚ್ಚುಗೆ ದಾಖಲಿಸಿದೆ.