ಉತ್ತರ ಪ್ರದೇಶದ ಪೊಲೀಸರು ಅಕ್ಟೋಬರ್ 5ರಂದು ಕೇರಳದ ಪತ್ರಕರ್ತ ಸಿದ್ದಿಕಿ ಕಪ್ಪನ್ ಅವರನ್ನು ಬಂಧಿಸಿದ್ದು, ಅವರ ಬಿಡುಗಡೆಗೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಹಾಜರುಪಡಿಸುವಂತೆ ಹೇಬಿಯಸ್ ಕಾರ್ಪಸ್ ಮನವಿ ಸಲ್ಲಿಸಲಾಗಿದೆ.
ಹಾಥ್‌ರಸ್‌ನಲ್ಲಿ 19 ವರ್ಷದ ದಲಿತ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ನಡುರಾತ್ರಿಯಲ್ಲಿ ಕುಟುಂಬಸ್ಥರ ಅನುಮತಿ ಪಡೆಯದೇ ಆಕೆಯ ಶವವನ್ನು ದಹನ ಮಾಡಿದ ಪ್ರಕರಣವನ್ನು ವರದಿ ಮಾಡಲು ಅಲ್ಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅಕ್ಟೋಬರ್ 5ರಂದು ಕಪ್ಪನ್ ಅವರನ್ನು ಹಾಥ್‌ರಸ್‌ನ ಟೋಲ್ ಪ್ಲಾಜಾದ ಬಳಿ ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದರು.
ಡಿ ಕೆ ಬಸು ವರ್ಸಸ್ ಪಶ್ಚಿಮ ಬಂಗಾಳ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾರಿಗೊಳಿಸಿದ್ದ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಎಂದು ವಕೀಲೆ ಶ್ವೇತಾ ಗಾರ್ಗ್ ಅವರು ಕೇರಳ ಕಾರ್ಯನಿರತ ಪತ್ರಕರ್ತರ ಸಂಘದ ಪರವಾಗಿ ಸಲ್ಲಿಸಿರುವ ಮನವಿಯಲ್ಲಿ ವಿವರಿಸಿದ್ದಾರೆ.
ಇದೇ ರೀತಿ ಹಾಥ್‌ರಸ್ ಪ್ರಕರಣವನ್ನು ವರದಿ ಮಾಡುವ ವಿಚಾರದಲ್ಲಿ ಎಲ್ಲಾ ಪತ್ರಕರ್ತರಿಗೂ ಸಮಾನ ಅವಕಾಶ ಕಲ್ಪಿಸುವಂತೆ ಮನವಿ ಮಾಡಲಾಗಿದ್ದು, ಹೀಗೆ ಹೇಳಲಾಗಿದೆ.
www.azhimukham.com ಎಂಬ ವೆಬ್‌ಸೈಟ್ ಜೊತೆ ಕೆಲಸ ಮಾಡುತ್ತಿರುವ ಕಪ್ಪನ್ ಅವರನ್ನು ಬಿಡುಗಡೆ ಮಾಡುವಂತೆ ಸಂಘವು ಮನವಿ ಮಾಡಿದೆ.