'ದಿನೇಶ್‌ ಮನೆಯಲ್ಲಿ ಅರ್ಧ ಪಾಕಿಸ್ತಾನ' ಹೇಳಿಕೆ: ಬಿಜೆಪಿ ಶಾಸಕ ಯತ್ನಾಳ್‌ ವಿರುದ್ಧದ ತನಿಖೆಗೆ ತಡೆ

ಪೊಲೀಸರು, ದೂರುದಾರಾದ ಸಚಿವ ದಿನೇಶ್‌ ಗುಂಡೂರಾವ್‌ ಅವರ ಪತ್ನಿ ಟಬು ರಾವ್‌ ಮತ್ತು ಚುನಾವಣಾ ಸಂಚಾರಿ ವಿಚಕ್ಷಣಾ ಅಧಿಕಾರಿ ಎಸ್‌ ಬಿ ಜಿಡ್ಡಿಮನಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ ಹೈಕೋರ್ಟ್‌.
Basangouda Patil Yatnal and Karnataka HC
Basangouda Patil Yatnal and Karnataka HC
Published on

ʼಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆʼ ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿಯ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದಾಖಲಾದ ಎರಡು ಪ್ರತ್ಯೇಕ ಎಫ್‌ಐಆರ್‌ ಮತ್ತು ಅದಕ್ಕೆ ಸಂಬಂಧಿಸಿದ ತನಿಖೆಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ದಾಖಲಿಸಲಾದ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಬಸನಗೌಡ ಪಾಟೀಲ್ ಯತ್ನಾಳ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠ ವಿಚಾರಣೆ ನಡೆಸಿತು.

ಪ್ರತಿವಾದಿಗಳು, ಎಫ್‌ಐಆರ್‌ ದಾಖಲಿಸಿಕೊಂಡಿರುವ ವಿಜಯಪುರ ಗಾಂಧಿಚೌಕ್‌ ಠಾಣಾ ಪೊಲೀಸರು, ದೂರುದಾರಾದ ಸಚಿವ ದಿನೇಶ್‌ ಗುಂಡೂರಾವ್‌ ಅವರ ಪತ್ನಿ ಟಬು ರಾವ್‌ ಮತ್ತು ಚುನಾವಣಾ ಸಂಚಾರಿ ವಿಚಕ್ಷಣಾ ಅಧಿಕಾರಿ ಎಸ್‌ ಬಿ ಜಿಡ್ಡಿಮನಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.

ಯತ್ನಾಳ ಪರ ವಕೀಲ ವೆಂಕಟೇಶ ದಳವಾಯಿ, ಸಚಿವ ದಿನೇಶ್ ಗುಂಡೂರಾವ್ ಮನಬಂದತೆ ಹೇಳಿಕೆ ನೀಡುತ್ತಾರೆ ಎಂದೇಳಿ ಅರ್ಜಿದಾರರು ಈ ರೀತಿ ಹೇಳಿಕೆ ನೀಡಿದ್ದಾರೆ. ಆದರೆ, ಸಚಿವರ ಪತ್ನಿ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ದಿನೇಶ್ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ ಎಂಬುದಾಗಿ ಅರ್ಜಿದಾರರು ಹೇಳಿಕೆ ನೀಡಿದ್ದಾರೆ ಹೊರತು ಅವರ ಪತ್ನಿ ಪಾಕಿಸ್ತಾನದವರು ಎಂದಿಲ್ಲ. ಯತ್ನಾಳ್‌ ಅವರು ತನ್ನನ್ನು ಪಾಕಿಸ್ತಾನದ ಉಗ್ರಗಾಮಿಗಳಿಗೆ ಹೋಲಿಸಿರುವುದಾಗಿ ಟಬುರಾವ್‌ ಹೇಳಿರುವುದು ಕೇವಲ ಅವರ ಊಹೆಯಾಗಿದೆ ಎಂದು ವಾದಿಸಿದರು.

ಅಲ್ಲದೆ, ಅರ್ಜಿದಾರರ ಹೇಳಿಕೆಯಿಂದ ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡಿರುವುದಾಗಿ ಟಬು ರಾವ್‌ ಆರೋಪಿಸಿದ್ದಾರೆ. ಆದರೆ, ಪಾಕಿಸ್ತಾನ ಒಂದು ದೇಶ, ಧರ್ಮವಲ್ಲ. ಅರ್ಜಿದಾರರು ಧರ್ಮಗಳ ನಡುವೆ ದ್ವೇಷ ಹುಟ್ಟು ಹಾಕುವ ರೀತಿಯಲ್ಲಿ ನಡೆದುಕೊಂಡಿಲ್ಲ. ಹೀಗಾಗಿ, ಅವರ ವಿರುದ್ಧದ ಎಫ್‌ಐಆರ್‌ ರದ್ದುಪಡಿಸಬೇಕಿದೆ. ಅರ್ಜಿ ಇತ್ಯರ್ಥವಾಗುವರೆಗೆ ಎಫ್‌ಐಆರ್‌ ಹಾಗೂ ತನಿಖೆಗೆ ತಡೆ ನೀಡಬೇಕು ಎಂದು ಕೋರಿದರು.

ಪ್ರಕರಣದ ಹಿನ್ನೆಲೆ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ಬಿಜೆಪಿ ಕಾರ್ಯಕರ್ತನ ವಿಚಾರಣೆ ನಡೆಸಿದ್ದ ವಿಚಾರ ಸಂಬಂಧ ವಿಜಯಪುರದಲ್ಲಿ ಏಪ್ರಿಲ್‌ 6ರಂದು ಸುದ್ದಿಗಾರರ ಜತೆ ಮಾತನಾಡಿದ್ದ ಶಾಸಕ ಯತ್ನಾಳ್ ಸಚಿವ ದಿನೇಶ್ ಗುಂಡೂರಾವ್ ಅವರ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ. ದೇಶ ವಿರೋಧಿ ಹೇಳಿಕೆ ಕೊಡುವುದು ಗುಂಡೂರಾವ್‌ಗೆ ಚಟ ಎಂದು ಹೇಳಿಕೆ ನೀಡಿದ್ದರು.

ಈ ಹಿನ್ನೆಲೆ ಯತ್ನಾಳ್ ವಿರುದ್ಧ ವಿಜಯಪುರ ಗಾಂಧಿ ಚೌಕ್‌ ಠಾಣೆಗೆ ಟಬು ರಾವ್‌ ದೂರು ನೀಡಿದ್ದರು. ‘ನಮ್ಮ ಕುಟುಂಬದ ಗೌರವ ಹಾಳು ಮಾಡುವ ದುರುದ್ದೇಶದಿಂದ ಯತ್ನಾಳ್‌ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ನಮ್ಮ ಭಾವನೆಗಳಿಗೆ ನೋವುಂಟು ಮಾಡಿದೆ’ ಎಂದು ಆರೋಪಿಸಿದ್ದರು. ಮತ್ತೊಂದೆಡೆ ಯತ್ನಾಳ್‌ ಅವರು ಆಕ್ಷೇಪಾರ್ಹ ಹೇಳಿಕೆ ನೀಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಎಸ್ ಬಿ ಜಿದ್ದಿಮನಿ ಪ್ರತ್ಯೇಕ ದೂರು ದಾಖಲಿಸಿದ್ದರು. ಇವುಗಳ ರದ್ದತಿಗಾಗಿ ಯತ್ನಾಳ್‌ ಹೈಕೋರ್ಟ್ ಮೇಟ್ಟಿಲೇರಿದ್ದಾರೆ.

Kannada Bar & Bench
kannada.barandbench.com