
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ನಾಲ್ಕರ್ ಕ್ರಾಸ್ ಸಮೀಪದ ಖಾಸಗಿ ಹೋಟೆಲ್‌ನಲ್ಲಿ ಮಹಿಳೆ ಮತ್ತು ಪುರುಷರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಮಹಿಳೆ ನ್ಯಾಯಾಧೀಶರ ಮುಂದೆ ನೀಡಿರುವ ಹೇಳಿಕೆ ಆಧರಿಸಿ ಪೊಲೀಸರು ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.
ಸಂತ್ರಸ್ತೆಯ ಮಹಿಳೆಯನ್ನು ಪೊಲೀಸರು ಗುರುವಾರ ಹಾನಗಲ್‌ನ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಬಿ ವೆಂಕಟಪ್ಪ ಅವರ ಮುಂದೆ ಹಾಜರುಪಡಿಸಿದರು. ಈ ಸಂದರ್ಭದಲ್ಲಿ ಗೌಪ್ಯ ವಿಚಾರಣೆ ನಡೆಸಿದ ನ್ಯಾಯಾಧೀಶರ ಮುಂದೆ ಸಂತ್ರಸ್ತೆಯ ಘಟನೆಯ ಭಯಾನಕತೆಯನ್ನು ವಿವರಿಸಿದರು. ಇದನ್ನು ಸಿಆರ್‌ಪಿಸಿ ಸೆಕ್ಷನ್ 164ರ ಅಡಿ ನ್ಯಾಯಾಲಯವು ದಾಖಲಿಸಿಕೊಂಡಿತು. ಇದರ ಆಧಾರದಲ್ಲಿ ಆರೋಪಿಗಳ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 376-ಡಿ ಸೇರ್ಪಡೆ ಮಾಡಿದ್ದಾರೆ.
ಹೋಟೆಲ್ ಕೊಠಡಿಗೆ ಆಗಷ್ಟೇ ಹೋಗಿ ಕುಳಿತಿದ್ದ ನನ್ನನ್ನು ಏಳು ಯುವಕರ ಗುಂಪು ಏಕಾಏಕಿ ರೂಮಿಗೆ ನುಗ್ಗಿ, ನನ್ನನ್ನು ಎಳೆದೊಯ್ದು ಬೈಕಿನಲ್ಲಿ ಕುಳ್ಳಿರಿಸಿ ಕಾಡಿನತ್ತ ಕರೆದೊಯ್ದರು. ಅಲ್ಲಿ ಒಬ್ಬರಾದ ಮೇಲೆ ಒಬ್ಬರು ಅತ್ಯಾಚಾರ ಎಸಗಿ, ದೈಹಿಕ ಮತ್ತು ಮಾನಸಿಕವಾಗಿ ಹಿಂಸಿಸಿದರು. ಮನೆಗೆ ತೆರಳುವುದಾಗಿ ಪರಿಪರಿಯಾಗಿ ಬೇಡಿದರೂ ಅವರು ಅವಕಾಶ ನೀಡಲಿಲ್ಲ ಎಂದು ಸಂತ್ರಸ್ತೆ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಸಂತ್ರಸ್ತೆಯ ಈ ಹೇಳಿಕೆ ಆಧರಿಸಿ ಮಹಿಳಾ ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ ಎನ್ನಲಾಗಿದೆ.
ಪ್ರಕರಣದ ಹಿನ್ನೆಲೆ: ಉತ್ತರ ಕನ್ನಡ ಜಿಲ್ಲೆಯ ಮಹಿಳೆ ಮತ್ತು ಪುರುಷ ನಾಲ್ಕರ್ ಕ್ರಾಸ್ ಸಮೀಪದ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದರು. ಈ ಸಂದರ್ಭದಲ್ಲಿ ಮುಸ್ಲಿಮ್ ಸಮುದಾಯದ ಯುವಕರು ಹೋಟೆಲ್‌ಗೆ ನುಗ್ಗಿ ಮಹಿಳೆ-ಪುರಷನ ಮೇಲೆ ದಾಳಿ ನಡೆಸಿದ್ದರು. ಈ ಸಂಬಂಧ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿತ್ತು. ಹೋಟೆಲ್ ರೂಮ್ ಬಾಯ್ ದೂರು ಆಧರಿಸಿ ಅಕ್ಕಿಆಲೂರು ಗ್ರಾಮದ ಏಳು ಮಂದಿಯ ವಿರುದ್ಧ ಹಾನಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪೈಕಿ ಮೂವರ ಬಂಧನವಾಗಿದ್ದು, ಉಳಿದವರ ಬಂಧನಕ್ಕೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.