ಪಶು ವೈದ್ಯಕೀಯ ಆಸ್ಪತ್ರೆ ಜಾಗ ಮೊರಾರ್ಜಿ ವಸತಿ ಶಾಲೆಗೆ ಹಸ್ತಾಂತರ: ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್‌ ನಿರ್ದೇಶನ

ಸಚಿವ ಜಮೀರ್ ಅಹ್ಮದ್ ಖಾನ್ ಸೂಚನೆ ಮೇರೆಗೆ ಚಾಮರಾಜಪೇಟೆ ಛಲವಾದಿ ಪಾಳ್ಯದಲ್ಲಿರುವ ಪಶು ವೈದ್ಯಕೀಯ ಆಸ್ಪತ್ರೆಯ ಜಾಗವನ್ನು ಮೌಲಾನಾ ಅಜಾದ್ ಮುರಾರ್ಜಿ ವಸತಿ ಶಾಲೆಗೆ ಹಸ್ತಾಂತರಿಸಿ ರಾಜ್ಯ ಸರ್ಕಾರವು 2024ರ ಫೆಬ್ರವರಿ 26ರಂದು ಆದೇಶ ಹೊರಡಿಸಿತ್ತು.
ಪಶು ವೈದ್ಯಕೀಯ ಆಸ್ಪತ್ರೆ ಜಾಗ ಮೊರಾರ್ಜಿ ವಸತಿ ಶಾಲೆಗೆ ಹಸ್ತಾಂತರ: ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್‌ ನಿರ್ದೇಶನ
Published on

ಚಾಮರಾಜಪೇಟೆಯ ಶಾಸಕರೂ ಆದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಸೂಚನೆ ಮೇರೆಗೆ ಚಾಮರಾಜಪೇಟೆ ಛಲವಾದಿ ಪಾಳ್ಯದಲ್ಲಿರುವ ಪಶು ವೈದ್ಯಕೀಯ ಆಸ್ಪತ್ರೆಯ ಜಾಗವನ್ನು ಮೌಲಾನಾ ಅಜಾದ್ ಮೊರಾರ್ಜಿ ವಸತಿ ಶಾಲೆಗೆ ಹಸ್ತಾಂತರಿಸಿ ಸರ್ಕಾರ ಹೊರಡಿಸಿದ ಆದೇಶ ರದ್ದು ಮಾಡಬೇಕು ಎಂದು ಕೋರಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಬುಧವಾರ ನಿರ್ದೇಶಿಸಿದೆ.

ಬೆಂಗಳೂರಿನ ವಕೀಲ ಗಿರೀಶ್ ಭಾರದ್ವಾಜ್ ಹಾಗೂ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರ ಗಿರೀಶ್ ಭಾರದ್ವಾಜ್ ಪರ ವಕೀಲ ಪಿ ವೆಂಕಟೇಶ್ ದಳವಾಯಿ ಅವರು “ಛಲವಾದಿ ಪಾಳ್ಯದಲ್ಲಿ ಸುಮಾರು 200 ವರ್ಷಗಳಿಂದ ಬೆಂಗಳೂರು ನಗರದಲ್ಲಿ ಪಶುಗಳಿಗೆ ಚಿಕಿತ್ಸೆಗಾಗಿ ಮೀಸಲಿಟ್ಟಿದ್ದ ಪಶು ವೈದ್ಯಕೀಯ ಚಿಕಿತ್ಸಾಲಯವನ್ನು ಅಲ್ಪಸಂಖ್ಯಾತ ಇಲಾಖೆಯ ಸುಪರ್ದಿಗೆ ಸ್ಥಳಾಂತರ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಆದೇಶ ರದ್ದುಗೊಳಿಸಬೇಕು ಹಾಗೂ ಛಲವಾದಿಪಾಳ್ಯದಲ್ಲಿರುವ ಪಶುವೈದ್ಯ ಆಸ್ಪತ್ರೆಯನ್ನು ಈಗಿರುವ ಸ್ಥಳದಲ್ಲೇ ಮುಂದುವರಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು” ಎಂದು ನ್ಯಾಯಾಲಯವನ್ನು ಕೋರಿದರು.

ಸರ್ಕಾರದ ವಕೀಲೆ ನಿಲೋಫರ್‌ ಅಕ್ಬರ್‌ ಅವರು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಕೋರಿದರು. ಇದರಿಂದ ಅರ್ಜಿ ವಿಚಾರಣೆಯನ್ನು ಮಾರ್ಚ್‌ 6ಕ್ಕೆ ಮುಂದೂಡಿದ ಪೀಠವು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಿ ವಕೀಲರಿಗೆ ನಿರ್ದೇಶಿಸಿತು.

ಸಚಿವ ಜಮೀರ್ ಅಹ್ಮದ್ ಖಾನ್ ಅವರ ಸೂಚನೆ ಮೇರೆಗೆ ಚಾಮರಾಜಪೇಟೆ ಛಲವಾದಿ ಪಾಳ್ಯದಲ್ಲಿರುವ ಪಶು ವೈದ್ಯಕೀಯ ಆಸ್ಪತ್ರೆಯ ಜಾಗವನ್ನು ಮೌಲಾನಾ ಅಜಾದ್ ಮುರಾರ್ಜಿ ವಸತಿ ಶಾಲೆಗೆ ಹಸ್ತಾಂತರಿಸಿ ರಾಜ್ಯ ಸರ್ಕಾರವು 2024ರ ಫೆಬ್ರವರಿ 26ರಂದು ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Kannada Bar & Bench
kannada.barandbench.com