ಗುರುವಾರ (ನಾಳೆ) ಆಚರಿಸಲಾಗುವ ಹನುಮ ಜಯಂತಿ ಉತ್ಸವಕ್ಕೆ ಸಂಬಂಧಿಸಿದಂತೆ ಯಾವುದೇ ಹೇಳಿಕೆ ನೀಡಬಾರದು ಎಂದು ಆಡಳಿತ ಮತ್ತು ವಿರೋಧ ಪಕ್ಷಗಳ ಎಲ್ಲಾ ರಾಜಕೀಯ ನಾಯಕರಿಗೆ ಕಲ್ಕತ್ತಾ ಹೈಕೋರ್ಟ್ ಬುಧವಾರ ತಾಕೀತು ಮಾಡಿದೆ (ಸುವೆಂದು ಅಧಿಕಾರಿ ಮತ್ತು ಪಶ್ಚಿಮ ಬಂಗಾಳ ಸರ್ಕಾರ ನಡುವಣ ಪ್ರಕರಣ).
ಹೌರಾ ಮತ್ತು ದಲ್ಖೋಲಾ ಜಿಲ್ಲೆಗಳಲ್ಲಿ ರಾಮನವಮಿ ಆಚರಣೆಯ ಸಂದರ್ಭದಲ್ಲಿ ಹಠಾತ್ ಹಿಂಸಾಚಾರ ಭುಗಿಲೆದ್ದಿದ್ದರಿಂದ ಮತ್ತು ನಾಳೆ ಮೆರವಣಿಗೆ ನಡೆಸಲು ಅನುಮತಿ ಕೋರಿ 2,000 ಕ್ಕೂ ಹೆಚ್ಚು ಅರ್ಜಿಗಳು ಕಲ್ಕತ್ತಾ ಹೈಕೋರ್ಟ್‌ಗೆ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಟಿ ಎಸ್ ಶಿವಜ್ಞಾನಂ ಮತ್ತು ಹಿರಣ್ಮಯ್ ಭಟ್ಟಾಚಾರ್ಯ ಅವರಿದ್ದ ಪೀಠ ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿ 'ಸೂಕ್ಷ್ಮ ಪರಿಸ್ಥಿತಿ' ಇರುವುದನ್ನು ಗಣನೆಗೆ ತೆಗೆದುಕೊಂಡಿತು.
"ಸಮಸ್ಯೆಯ ಸೂಕ್ಷ್ಮತೆಯನ್ನು ಪರಿಗಣಿಸಿ, ನಾಳೆ ಆಚರಿಸಲಾಗುವ ಹಬ್ಬಕ್ಕೆ ಸಂಬಂಧಿಸಿದಂತೆ ರಾಜಕೀಯ ವ್ಯಕ್ತಿ ಅಥವಾ ನಾಯಕ ಇಲ್ಲವೇ ಯಾವುದೇ ಸಾಮಾನ್ಯ ವ್ಯಕ್ತಿ ಸಾರ್ವಜನಿಕವಾಗಿ ಅಥವಾ ಮಾಧ್ಯಮಗಳಲ್ಲಿ ಯಾವುದೇ ಹೇಳಿಕೆ ನೀಡಬಾರದು” ಎಂದು ನ್ಯಾಯಾಲಯ ಸೂಚಿಸಿತು.
ನಿಸ್ಸಂಶಯವಾಗಿ, ಯಾರಿಗೂ (ಧಾರ್ಮಿಕ ಮೆರವಣಿಗೆಗಳನ್ನು ನಡೆಸುವ) ಹಕ್ಕು ಇಲ್ಲ. ಜನ ಮುಕ್ತವಾಗಿ ಸಂಚರಿಸಬಹುದಾಗಿದ್ದು (ಇತರರಿಗೆ) ಅಡ್ಡಿಪಡಿಸಿದರೆ, ಖಂಡಿತವಾಗಿಯೂ ಸರ್ಕಾರ ನಿರ್ಬಂಧ ವಿಧಿಸಬಹುದು. ಇದು ಧಾರ್ಮಿಕ ಅಥವಾ ರಾಜಕೀಯದ ಎಲ್ಲಾ ಸಮಾವೇಶ ಮತ್ತು ಮೆರವಣಿಗೆಗಳಿಗೆ ಅನ್ವಯಿಸುತ್ತದೆ ಎಂದು ಅದು ಹೇಳಿತು.
ರಾಜ್ಯದಲ್ಲಿ ಈಗ ರಾಮನವಮಿ ಮತ್ತು ಹನುಮ ಜಯಂತಿ ಆಚರಣೆಗಳು ಫ್ಯಾಷನ್ ಆಗಿ ಮಾರ್ಪಟ್ಟಿವೆ ಎಂದು ತಿಳಿಸಿದ ಎಜಿ, ಕಳೆದ ಐದರಿಂದ ಮೆರವಣಿಗೆ ನಡೆಸಲು ಅನುಮತಿ ನೀಡಿರುವ ಸಂಸ್ಥೆಗಳ ಅರ್ಜಿಗಳನ್ನು ಮಾತ್ರ ಪರಿಗಣಿಸಲು ರಾಜ್ಯಕ್ಕೆ ಸ್ವಾತಂತ್ರ್ಯ ನೀಡಬೇಕು ಎಂದು ಕೋರಿದರು.
ಆಗ ನ್ಯಾಯಾಲಯ "ಬಹುಶಃ (ಭಾರತದ) ಪಶ್ಚಿಮದ ಪ್ರಭಾವವಿದೆ. ಆದರೆ ಅದು ರಾಜ್ಯಕ್ಕೆ ಬಂದ ನಂತರ ಅದು ಇಲ್ಲಿ ರೂಢಿಗೆ ಬಂದಿಗೆ. ನಾವು ಶಾಂತಿ ಭಂಗವಾಗದಂತೆ ನೋಡಿಕೊಳ್ಳಬೇಕಿದೆ. ಭಾಗವಹಿಸುವವರ ಪ್ರಮಾಣವನ್ನು ಗಮನಿಸಿದರೆ, ರಾಜ್ಯ ಪೊಲೀಸ್ ಪಡೆ ಅರೆಸೇನಾ ಪಡೆಗಳಿಗಾಗಿ ನೀವು ನೆರೆಯ ರಾಜ್ಯಗಳಿಂದ ಸಹಾಯವನ್ನು ಪಡೆಯಬಹುದು. ಆ ಸಹಾಯ ತೆಗೆದುಕೊಳ್ಳದಿರುವುದು ಸರ್ಕಾರದ ವೈಫಲ್ಯವಾಗುತ್ತದೆ " ಎಂದು ಎಸಿಜೆ ಹೇಳಿದರು.
ಅರ್ಜಿಗಳನ್ನು ಪರಿಗಣಿಸಿದ ಪೀಠ, ಅರೆಸೇನಾ ಪಡೆ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ.