ದ್ವೇಷ ಭಾಷಣ: ಜಿತೇಂದ್ರ ತ್ಯಾಗಿ ಖುಲಾಸೆಗೊಳಿಸಿದ ನ್ಯಾಯಾಲಯ

ವಿಚಾರಣೆಯ ಸಮಯದಲ್ಲಿ ಸಾಕ್ಷಿಗಳು ನೀಡಿದ ಹೇಳಿಕೆಗಳ ಪ್ರಕಾರ, "ಭಾಷಣದ ನಂತರ ಯಾವುದೇ ಧಾರ್ಮಿಕ ಉದ್ವಿಗ್ನತೆ ಉಂಟಾಗಿಲ್ಲ" ಎಂದು ನ್ಯಾಯಾಲಯ ತಿಳಿಸಿತು.
Jitendra Tyagi (formerly Waseem Rizvi)
Jitendra Tyagi (formerly Waseem Rizvi)
Published on

2021 ರ ಹರಿದ್ವಾರ ಧರ್ಮ ಸಂಸದ್ ಸಂದರ್ಭದಲ್ಲಿ ನಡೆದ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿದ್ವಾರದ ನ್ಯಾಯಾಲಯ ಜಿತೇಂದ್ರ ತ್ಯಾಗಿ (ಹಿಂದಿನ ಹೆಸರು ವಾಸಿಮ್ ರಿಜ್ವಿ) ಅವರನ್ನು ಖುಲಾಸೆಗೊಳಿಸಿದೆ.

ತ್ಯಾಗಿ ಅವರನ್ನು ಖುಲಾಸೆಗೊಳಿಸಿದ ಚೀಫ್ ಜುಡಷಿಯಲ್ ಮ್ಯಾಜಿಸ್ಟ್ರೇಟ್ ಅವಿನಾಶ್ ಶ್ರೀವಾಸ್ತವ ಅವರು, "ಐಪಿಸಿ ಸೆಕ್ಷನ್ 153ಎ ಅಡಿಯಲ್ಲಿ ಅಪರಾಧ ಎನಿಸಿಕೊಳ್ಳಲು ಯಾವುದೇ ಒಬ್ಬ ವ್ಯಕ್ತಿಗೆ ನೋವುಂಟುಮಾಡಿದರೆ ಸಾಲದು ಅಥವಾ ಈ ಸೆಕ್ಷನ್ ಅಡಿಯಲ್ಲಿ ಅಪರಾಧವೆನಿಸಿಕೊಳ್ಳಲು ಅಪರಾಧ ಎಸಗಿದ್ದು ಅಗತ್ಯ ಅಂಶವಾಗುವುದಿಲ್ಲ. ಪದಗಳ ಮೂಲಕ ಧಾರ್ಮಿಕ ಭಾವನೆಗಳನ್ನು ನೋಯಿಸುವುದು ಐಪಿಸಿ ಸೆಕ್ಷನ್ 298 ರ ಅಡಿಯಲ್ಲಿ ಶಿಕ್ಷಾರ್ಹವಾಗಿದ್ದರೂ, ಅಂತಹ ಪದಗಳನ್ನು ಅಪರಾಧಕ್ಕೆ ತುತ್ತಾದ ವ್ಯಕ್ತಿ ಆಲಿಸಿರಬೇಕು ಅಥವಾ ಆತನ ಉಪಸ್ಥಿತಿಯಲ್ಲಿ ಹೇಳುವುದು (ಸೆಕ್ಷನ್‌ 153ಎ ಅಡಿ) ಅತ್ಯಗತ್ಯ - ಇಲ್ಲಿ ಅದು ನಡೆದಿಲ್ಲ" ಎಂದರು.

ಉತ್ತರ ಪ್ರದೇಶ ಶಿಯಾ ಕೇಂದ್ರ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷರಾದ ತ್ಯಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು.

2021ರ ಡಿಸೆಂಬರ್ 17ರಿಂದ 19ರವರೆಗೆ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ಇಸ್ಲಾಂ ಮತ್ತು ಪ್ರವಾದಿ ಮುಹಮ್ಮದ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ತ್ಯಾಗಿ ವಿರುದ್ಧ ಜನವರಿ 2, 2022ರಂದು ಎಫ್ಐಆರ್ ದಾಖಲಿಸಲಾಗಿತ್ತು.

ತನಿಖಾಧಿಕಾರಿಗೆ ಸಾಮಾಜಿಕ ಮಾಧ್ಯಮದಲ್ಲಿ ಸ್ವೀಕರಿಸಿದ ವಿಡಿಯೋ ತುಣುಕನ್ನು ನೀಡಿದ್ದಾಗಿ ದೂರುದಾರರು ಒಪ್ಪಿಕೊಂಡಿದ್ದಾರೆ ಮತ್ತು ಅದನ್ನು ಅವರು ತಮ್ಮ ಫೋನ್‌ನಿಂದ ಪೆನ್ ಡ್ರೈವ್‌ಗೆ ವರ್ಗಾಯಿಸಿದ್ದಾರೆ ಎಂಬುದನ್ನು‌ ನ್ಯಾಯಾಲಯ‌ ಗಮನಿಸಿತು.

"ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ಸಂದೇಶಗಳು ಸಾಮಾನ್ಯವಾಗಿ ವೈರಲ್ ಆಗಿರುತ್ತವೆ ಮತ್ತು ಸಾರ್ವಜನಿಕ ಬಳಕೆಗಾಗಿ ಉದ್ದೇಶಿಸಲಾಗಿರುತ್ತದೆ. ಆದ್ದರಿಂದ, ದೂರುದಾರರ ಮೊಬೈಲ್‌ನಲ್ಲಿ ಲಭ್ಯವಿರುವ ವೀಡಿಯೊ ತುಣುಕನ್ನು ಎಲೆಕ್ಟ್ರಾನಿಕ್ ದಾಖಲೆಗಳ ವರ್ಗದ ಅಡಿಯಲ್ಲಿ ಅಧಿಕೃತ ಪುರಾವೆ ಎಂದು ಪರಿಗಣಿಸಲಾಗದು. ದೂರುದಾರರೊಂದಿಗೆ ಹಂಚಿಕೊಂಡ ವಸ್ತುವಿಷಯವನ್ನು ಕಳುಹಿಸುವವರು ತಿರುಚಿರಬಹುದು ಎಂಬ ಸಾಧ್ಯತೆಯನ್ನು ಸಹ ತಳ್ಳಿಹಾಕಲಾಗುವುದಿಲ್ಲ" ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವಿಚಾರಣೆಯ ಸಮಯದಲ್ಲಿ ಸಾಕ್ಷಿಗಳು ನೀಡಿದ ಹೇಳಿಕೆಗಳ ಪ್ರಕಾರ, "ಭಾಷಣದ ನಂತರ ಯಾವುದೇ ಧಾರ್ಮಿಕ ಉದ್ವಿಗ್ನತೆ ಉಂಟಾಗಿಲ್ಲ" ಎನ್ನುವ ಅಂಶವನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿತು.

Kannada Bar & Bench
kannada.barandbench.com