ಹರಿದ್ವಾರ ಧರ್ಮ ಸಂಸದ್ ದ್ವೇಷ ಭಾಷಣ: ಉತ್ತರಾಖಂಡ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ಸುಪ್ರೀಂ ಕೋರ್ಟ್

ಹರಿದ್ವಾರದ ಧರ್ಮ ಸಂಸದ್ ರೀತಿಯ ಕಾರ್ಯಕ್ರಮಗಳಲ್ಲಿ ಮಾಡುವ ಭಾಷಣಗಳು ದೇಶದ ವಾತಾವರಣ ಹಾಳುಮಾಡುತ್ತವೆ ಮತ್ತು ಪ್ರಜಾಪ್ರಭುತ್ವದ ಸ್ವರೂಪವನ್ನು ನಾಶಪಡಿಸುತ್ತವೆ ಎಂದು ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ವಾದಿಸಿದರು.
ಹರಿದ್ವಾರ ಧರ್ಮ ಸಂಸದ್ ದ್ವೇಷ ಭಾಷಣ: ಉತ್ತರಾಖಂಡ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ಸುಪ್ರೀಂ ಕೋರ್ಟ್
Published on

ಹರಿದ್ವಾರದ ಧರ್ಮ ಸಂಸದ್‌ನಲ್ಲಿ ಮುಸ್ಲಿಮ್‌ ಸಮುದಾಯವನ್ನು ಗುರಿಯಾಗಿಸಿ ನಡೆಸಿದ ದ್ವೇಷ ಭಾಷಣದ ಕುರಿತು ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಉತ್ತರಾಖಂಡ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ [ಕುರ್ಬಾನ್ ಅಲಿ ಇನ್ನಿತರರು ಹಾಗೂ ಭಾರತ ಒಕ್ಕೂಟ ಮತ್ತಿತರರ ನಡುವಣ ಪ್ರಕರಣ].

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠದೆದುರು ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ ಹರಿದ್ವಾರದ ಧರ್ಮ ಸಂಸದ್‌ ರೀತಿಯ ಕಾರ್ಯಕ್ರಮಗಳಲ್ಲಿ ಮಾಡುವ ಭಾಷಣಗಳು ದೇಶದ ವಾತಾವರಣವನ್ನು ಹಾಳುಮಾಡುತ್ತವೆ ಮತ್ತು ಪ್ರಜಾಪ್ರಭುತ್ವದ ಸ್ವರೂಪವನ್ನು ನಾಶಪಡಿಸುತ್ತವೆ ಎಂದು ವಾದಿಸಿದರು.

ಪ್ರಕರಣದ ಮಧ್ಯಪ್ರವೇಶಕಾರರಲ್ಲಿ ಒಬ್ಬರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ಗುಂಪು ಹತ್ಯೆಗೆ ಸಂಬಂಧಿಸಿದಂತೆ ತೆಹಸೀನ್ ಪೂನವಾಲಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ ಎಂದು ನ್ಯಾಯಾಲಯದ ಗಮನಸೆಳೆದರು.

Also Read
ಹರಿದ್ವಾರ ಧರ್ಮ ಸಂಸದ್‌ ದ್ವೇಷ ಭಾಷಣ ಪ್ರಕರಣ: ತನಿಖೆಗೆ ಕೋರಿರುವ ಪಿಐಎಲ್ ವಿಚಾರಣೆ ಬುಧವಾರ ನಡೆಸಲಿರುವ ಸುಪ್ರೀಂ

ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ದ್ವೇಷ ಭಾಷಣಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣ ಬಾಕಿ ಉಳಿದಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಅವುಗಳ ಜೊತೆಗೆ ಈ ಪ್ರಕರಣವನ್ನು ಸೇರಿಸಿ ವಿಚಾರಣೆ ನಡೆಸಬಾರದೆಂದು ಸಿಬಲ್‌ ಮನವಿ ಮಾಡಿದರು.

ಹರಿದ್ವಾರದ ಧರ್ಮ ಸಂಸದ್‌ ರೀತಿಯ ಕಾರ್ಯಕ್ರಮಗಳಲ್ಲಿ ಮಾಡುವ ಭಾಷಣಗಳು ದೇಶದ ವಾತಾವರಣ ಹಾಳುಮಾಡುತ್ತವೆ ಮತ್ತು ಪ್ರಜಾಪ್ರಭುತ್ವದ ಸ್ವರೂಪವನ್ನು ನಾಶಪಡಿಸುತ್ತವೆ.

"ತ್ವರಿತ ಕ್ರಮ ತೆಗೆದುಕೊಳ್ಳದಿದ್ದರೆ, ಉನಾ, ದಸ್ನಾ, ಕುರುಕ್ಷೇತ್ರದಲ್ಲಿ ಇಂತಹ ಧರ್ಮ ಸಂಸದ್‌ಗಳನ್ನು ನಡೆಸಲಾಗುತ್ತದೆ. ಮತ್ತು ಇಂತಹ ಘಟನೆಗಳು ಇಡೀ ದೇಶದ ವಾತಾವರಣ ಹಾಳುಮಾಡುತ್ತವೆ. ಇದು ಪ್ರಜಾಪ್ರಭುತ್ವದ ಸ್ವರೂಪವನ್ನು ನಾಶಪಡಿಸುತ್ತದೆ." ಎಂದರು.

ಆಗ ನ್ಯಾಯಾಲಯದ ತೀರ್ಪುಗಳನ್ನು ಅನುಷ್ಟಾನಗೊಳಿಸುವ ಅಗತ್ಯವಿದೆ ಎಂದು ವಕೀಲರು ಹೇಳುತ್ತಿದ್ದಾರೆ. ನೋಟಿಸ್‌ ನೀಡಲಾಗುವುದು. 10 ದಿನಗಳ ನಂತರ ಪ್ರಕರಣವನ್ನು ಪಟ್ಟಿ ಮಾಡಲಾಗುತ್ತಿದ್ದು ಆ ಪ್ರಕರಣಗಳಿಗೂ ಇದಕ್ಕೂ ಸಂಬಂಧ ಇದೆಯೇ ಎಂದು ನೋಡಿ ನಂತರ ಪ್ರಕರಣವನ್ನು ಅವುಗಳೊಂದಿಗೆ ಸೇರಿಸುವ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿತು.

Kannada Bar & Bench
kannada.barandbench.com