ಒಂದು ರಾಷ್ಟ್ರ ಒಂದು ಚುನಾವಣೆ: ಕೇಂದ್ರ ರಚಿಸಿರುವ ಉನ್ನತ ಮಟ್ಟದ ಸಮಿತಿಯಲ್ಲಿ ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ

ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಏಕಕಾಲಕ್ಕೆ ಚುನಾವಣೆ ನಡೆಸುವುದು ಅಪೇಕ್ಷಣೀಯ ಎಂದು ಸರ್ಕಾರ ಹೇಳಿದೆ.
Senior Advocate Harish Salve
Senior Advocate Harish Salve

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ವಿಚಾರ ಪರಿಶೀಲಿಸಲು ಕೇಂದ್ರ ಸರ್ಕಾರದ ಕಾನೂನು ಸಚಿವಾಲಯ, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಎಂಟು ಸದಸ್ಯರ ಉನ್ನತ ಮಟ್ಟದ ಸಮಿತಿ (ಎಚ್‌ಎಲ್‌ಸಿ) ರಚಿಸಿದ್ದು ಹಿರಿಯ ವಕೀಲ ಹರೀಶ್ ಸಾಳ್ವೆ ಸಮಿತಿಯ ಸದಸ್ಯರಾಗಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ವಿರೋಧ ಪಕ್ಷದ ಮಾಜಿ ನಾಯಕ ಗುಲಾಂ ನಬಿ ಆಜಾದ್, 15ನೇ ಹಣಕಾಸು ಆಯೋಗದ ಅಧ್ಯಕ್ಷ ಎನ್.ಕೆ.ಸಿಂಗ್, ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಡಾ.ಸುಭಾಷ್ ಸಿ ಕಶ್ಯಪ್ ಹಾಗೂ ಮಾಜಿ ಮುಖ್ಯ ವಿಚಕ್ಷಣಾ ಆಯುಕ್ತ ಸಂಜಯ್ ಕೊಠಾರಿ ಸಮಿತಿಯ ಇತರ ಸದಸ್ಯರು.

“…ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವುದು ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಅಪೇಕ್ಷಣೀಯವಾಗಿದ್ದು ಏಕಕಾಲಕ್ಕೆ ಚುನಾವಣೆ ನಡೆಸುವ ವಿಚಾರವಾಗಿ ಪರಿಶೀಲನೆ ನಡೆಸಿ ಶಿಫಾರಸು ಮಾಡಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ” ಎಂದು ನಿರ್ಣಯ ತಿಳಿಸಿದೆ.

Also Read
ಲೋಕಸಭಾ ಚುನಾವಣೆ: ಹೊಸದಾಗಿ ಮೊದಲ ಹಂತದ ಇವಿಎಂ, ವಿವಿಪ್ಯಾಟ್‌ ಪರಿಶೀಲನೆ ಕೋರಿದ್ದ ಕಾಂಗ್ರೆಸ್‌ ನಾಯಕನ ಅರ್ಜಿ ವಜಾ

ಸಮಿತಿಯ ಸಭೆಗಳಿಗೆ ವಿಶೇಷ ಆಹ್ವಾನಿತರಾಗಿ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಭಾಗವಹಿಸಲಿದ್ದಾರೆ . ಕಾನೂನು ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ನಿತೇನ್ ಚಂದ್ರ, ಸಮಿತಿಯ ಕಾರ್ಯದರ್ಶಿಯಾಗಿರುತ್ತಾರೆ.

ದೇಶದ ಸಂವಿಧಾನ ಮತ್ತಿತರ ಕಾನೂನುನಗಳಡಿ ಅಸ್ತಿತ್ವದಲ್ಲಿರುವ ಚೌಕಟ್ಟನ್ನು ಗಮನಿಸಿ ಲೋಕಸಭೆ, ರಾಜ್ಯ ವಿಧಾನಸಭೆ ಪುರಸಭೆ ಹಾಗೂ ಪಂಚಾಯತ್‌ಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಸಮಿತಿಯು ಪರಿಶೀಲಿಸಿ ಶಿಫಾರಸು ಮಾಡಬೇಕು ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ತಿಳಿಸಿದೆ.

ಏಕಕಾಲದಲ್ಲಿ ಚುನಾವಣೆ ನಡೆಸಲು ತಿದ್ದುಪಡಿಗಳ ಅಗತ್ಯವಿರುವ ಸಂವಿಧಾನ, ಜನಪ್ರತಿನಿಧಿ ಕಾಯಿದೆ- 1950, ಪ್ರಜಾಪ್ರತಿನಿಧಿ ಕಾಯಿದೆ- 1951 ಮತ್ತಿತರ ಕಾಯಿದೆಗಳಿಗೆ ನಿರ್ದಿಷ್ಟ ತಿದ್ದುಪಡಿಗಳನ್ನು ಪರಿಶೀಲಿಸಿ ಸಮಿತಿ ಶಿಫಾರಸು ಮಾಡಲಿದೆ.

ನಿರ್ಣಯದ ಪ್ರಕಾರ ಸಮಿತಿ ಚುನಾವಣೆಗಳ ಏಕೀಕರಣಕ್ಕಾಗಿ ಚೌಕಟ್ಟೊಂದನ್ನು ಸೂಚಿಸಬೇಕಿದ್ದು ಏಕಕಾಲದಲ್ಲಿ ಚುನಾವಣೆ ನಡೆಸಲಾಗದಿದ್ದರೆ ಹಾಗೆ ಚುನಾವಣೆ ನಡೆಸಬಹುದಾದ ಹಂತಗಳು ಮತ್ತು ಕಾಲಮಿತಿಯನ್ನು ಸೂಚಿಸಲಿದೆ.

ಸಮಿತಿ ಕೂಡಲೇ ಕಾರ್ಯಾರಂಭ ಮಾಡಲಿದ್ದು ಆದಷ್ಟು ಬೇಗ ಶಿಫಾರಸುಗಳನ್ನು ಮಾಡಲಿದೆ. ಸಮಿತಿಯ ಪ್ರಧಾನ ಕಚೇರಿ ನವದೆಹಲಿಯಲ್ಲಿ ಇರಲಿದೆ ಎಂದು ನಿರ್ಣಯ ಮಾಹಿತಿ ನೀಡಿದೆ.  

Related Stories

No stories found.
Kannada Bar & Bench
kannada.barandbench.com