ಹರಿಯಾಣ ನೂಹ್‌ ಗಲಭೆ: ವಿಎಚ್‌ಪಿ ರ‍್ಯಾಲಿಗೆ ತಡೆ ನೀಡದ ಸುಪ್ರೀಂ; ಹೆಚ್ಚುವರಿ ಪೊಲೀಸ್‌, ಸಿಸಿಟಿವಿ ಬಳಕೆ ನಿರ್ದೇಶನ

“ಯಾವುದೇ ಸಮುದಾಯದ ವಿರುದ್ಧ ದ್ವೇಷ ಭಾಷೆ ಅಥವಾ ಆಸ್ತಿಪಾಸ್ತಿ ನಷ್ಟ ನಡೆಸದಂತೆ ರಾಜ್ಯ ಸರ್ಕಾರ ಮತ್ತು ಪೊಲೀಸರು ಖಾತರಿಪಡಿಸುತ್ತಾರೆ ಎಂಬ ಭರವಸೆ ಮತ್ತು ನಂಬಿಕೆಯನ್ನು ನಾವು ಹೊಂದಿದ್ದೇವೆ” ಎಂದಿರುವ ಪೀಠ.
Supreme Court of India
Supreme Court of India

ಹರಿಯಾಣದ ನೂಹ್‌ನಲ್ಲಿ ನಡೆದಿರುವ ಕೋಮು ಗಲಭೆ ವಿರೋಧಿಸಿ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಬುಧವಾರ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ಬುಧವಾರ ನಿರಾಕರಿಸಿದೆ.

ಹರಿಯಾಣದ ನೂಹ್‌ನಲ್ಲಿ ನಡೆದ ಗಲಭೆ ವಿರೋಧಿಸಿ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ವಿಎಚ್‌ಪಿ ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಂಜಯ್‌ ಕೌಲ್‌ ಅವರ ನೇತೃತ್ವದ ಪೀಠವು ನಡೆಸಿತು.

ರ‍್ಯಾಲಿ ಸಂದರ್ಭದಲ್ಲಿ ಯಾವುದೇ ತೆರನಾದ ದ್ವೇಷ ಭಾಷೆ ಮತ್ತು ಹಿಂಸಾಚಾರಕ್ಕೆ ಆಸ್ಪದ ನೀಡದಂತೆ ಎಚ್ಚರವಹಿಸುವಂತೆ ಹರಿಯಾಣ ಸರ್ಕಾರ ಮತ್ತು ದೆಹಲಿ ಪೊಲೀಸರಿಗೆ ನ್ಯಾಯಾಲಯ ನಿರ್ದೇಶಿಸಿದೆ. ದ್ವೇಷ ಭಾಷೆಗೆ ಸಂಬಂಧಿಸಿದಂತೆ ಹಿಂದೆ ಸುಪ್ರೀಂ ಕೋರ್ಟ್‌ ಮಾಡಿರುವ ಆದೇಶವನ್ನು ಸರ್ಕಾರಿ ಪ್ರಾಧಿಕಾರಿಗಳು ಪಾಲಿಸಬೇಕು ಎಂದು ಪೀಠ ಹೇಳಿದೆ.

“ಯಾವುದೇ ಸಮುದಾಯದ ವಿರುದ್ಧ ದ್ವೇಷ ಭಾಷೆ ಅಥವಾ ಆಸ್ತಿಯ ವಿರುದ್ಧ ಹಿಂಸಾಚಾರ ನಡೆಸದಂತೆ ರಾಜ್ಯ ಸರ್ಕಾರ ಮತ್ತು ಪೊಲೀಸರು ಖಾತರಿಪಡಿಸುತ್ತಾರೆ ಎಂಬ ಭರವಸೆ ಮತ್ತು ನಂಬಿಕೆಯನ್ನು ನಾವು ಹೊಂದಿದ್ದೇವೆ. ಅಗತ್ಯವಿರುವ ಕಡೆ ಹೆಚ್ಚುವರಿ ಪೊಲೀಸ್‌ ಪಡೆ ಅಥವಾ ಅರೆಸೇನಾ ಪಡೆಯನ್ನು ನಿಯೋಜಿಸಬೇಕು. ಅಗತ್ಯವಿರುವ ಕಡೆ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಾಧಿಕಾರಗಳು ಸಿಸಿಟಿವಿ ಕ್ಯಾಮೆರಾ ಬಳಕೆ ಮಾಡಬೇಕು ಮತ್ತು ಅದನ್ನು ವಿಡಿಯೊ ಚಿತ್ರೀಕರಣ ಮಾಡಬೇಕು. ಸಿಸಿಟಿವಿ ವಿಡಿಯೊಗಳನ್ನು ಸಂರಕ್ಷಿಸಿಡಬೇಕು” ಎಂದು ಪೀಠ ಆದೇಶದಲ್ಲಿ ಹೇಳಿದೆ.

ವಿಚಾರಣೆಯ ಸಂದರ್ಭದಲ್ಲಿ ಪೀಠವು “ಪರಿಸ್ಥಿತಿಯನ್ನು ಹಾಳುಗೆಡವುವ ಯಾವುದೇ ಕಲಹ ಅಥವಾ ದ್ವೇಷ ಭಾಷೆಯ ಪ್ರಯೋಗ ಮಾಡಬಾರದು. ನಮ್ಮ ಹಿಂದಿನ ಆದೇಶ ಅನುಪಾಲನೆಯಾಗುವಂತೆ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ರಾಜು ಅವರು ನೋಡಿಕೊಳ್ಳಬೇಕು. ಯಾವುದೇ ದ್ವೇಷ ಭಾಷೆ ಅಥವಾ ಹಿಂಸಾಚಾರಕ್ಕೆ ಆಸ್ಪದವಾಗದಂತೆ ಪ್ರಾಧಿಕಾರಗಳು ಎಚ್ಚರವಹಿಸಬೇಕು” ಎಂದು ನ್ಯಾ. ಖನ್ನಾ ಹೇಳಿದರು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ಯು ಸಿಂಗ್‌ ಅವರು “ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಬೃಹತ್‌ ಪ್ರಮಾಣದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಒಂದು ಸಮುದಾಯದ ಹತ್ಯಾಕಾಂಡಕ್ಕೆ ಕರೆ ನೀಡುವಂಥ ದ್ವೇಷ ಭಾಷೆ ಬಳಕೆ ಮಾಡುವ ಆತಂಕವಿದೆ. ಸೂಕ್ಷ್ಮ ಪ್ರದೇಶಗಳಾದ ಕರ್ವಾಲ್‌ ನಗರದಂಥಲ್ಲಿ ಐದು ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ” ಎಂದರು.

ಇದಕ್ಕೆ ಪೀಠವು “ಇದು ಸರ್ಕಾರದ ಸಂಸ್ಥೆಗಳಿಗೆ ತಿಳಿದಿದ್ದು, ನಮ್ಮ ಆದೇಶಕ್ಕೆ ಅನುಗುಣವಾಗಿ ಅವರು ಕ್ರಮಕೈಗೊಳ್ಳಬೇಕಿದೆ” ಎಂದಿತು. ಇದಕ್ಕೆ ಪ್ರತಿಕ್ರಿಯಿಸಿದ ರಾಜು ಅವರು “ನ್ಯಾ. ಜೋಸೆಫ್‌ ಅವರ ತೀರ್ಪನ್ನು ನಾವು ಅನುಪಾಲಿಸಬೇಕಿದೆ” ಎಂದರು.

ಆಗ ಪೀಠವು “ಸೂಕ್ಷ್ಮ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ಹೆಚ್ಚುವರಿ ಪೊಲೀಸ್‌ ಪಡೆಗಳನ್ನು ನಿಯೋಜಿಸಬೇಕು. ಸಿಸಿಟಿವಿ ಕ್ಯಾಮೆರಾ ಬಳಕೆ ಮಾಡಬೇಕು. ನಾವು ಯಾವುದೇ ಪಕ್ಷ ವಹಿಸುತ್ತಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಕೆಲಸವಾಗಿದೆ. ಕಾನೂನಿನ ಪ್ರಕಾರ ಯಾವುದೇ ಹಿಂಸಾಚಾರ, ದ್ವೇಷ ಭಾಷೆ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಯಾಗದಂತೆ ಅವರು ಕ್ರಮಕೈಗೊಳ್ಳಬೇಕು” ಎಂದಿತು.

Kannada Bar & Bench
kannada.barandbench.com