
ಮಂಗಳೂರು- ಕಾರ್ಕಳದ ನಡುವೆ ನಾಲ್ಕು ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ದಿನದಲ್ಲಿ ಐದು ಸಿಂಗಲ್ ಟ್ರಿಪ್ ಕೈಗೊಳ್ಳಲು ಹೊಸದಾಗಿ ಪರ್ಮಿಟ್ ನೀಡಲಾಗಿರುವ ಕ್ರಮ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ನೋಟಿಸ್ ಜಾರಿಗೊಳಿಸಿದೆ.
ಖಾಸಗಿ ಬಸ್ ಮಾಲೀಕರಾದ ಉಡುಪಿ ಜಿಲ್ಲೆ ಕಾಪು ನಿವಾಸಿ ವಿಜಯಾ ಎಚ್. ತಂತ್ರಿ ಹಾಗೂ ಇತರರು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್‌ಪ್ರಸಾದ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ, ದಕ್ಷಿಣ ಕನ್ನಡ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿತು. ಹೊಸ ಪರ್ಮಿಟ್ ನೀಡುವ ಮೊದಲು ನೂತನ ಸಮಗ್ರ ಏರಿಯಾ ಯೋಜನೆ-2019ರ ಅನ್ವಯ ಸಾರಿಗೆ ಬೇಡಿಕೆ ಕುರಿತು ಜಂಟಿ ಸಮೀಕ್ಷೆ ನಡೆಸಲಾಗಿದೆಯೇ ಎಂಬ ಬಗ್ಗೆ ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆಯನ್ನು ಏಪ್ರಿಲ್ 21ಕ್ಕೆ ಮುಂದೂಡಿತು.
ಅಲ್ಲದೇ, ಈ ಹೊಸ ಟ್ರಿಪ್‌ಗಳಿಗೆ ವೇಳಾಪಟ್ಟಿ ನಿಗದಿಪಡಿಸುವ ಸಂಬಂಧ ದಕ್ಷಿಣ ಕನ್ನಡ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಏಪ್ರಿಲ್ 8ರಂದು ಕರೆದಿರುವ ಸಭೆಯ ನಿರ್ಣಯವು ನ್ಯಾಯಾಲಯದ ಮುಂದಿನ ಆದೇಶಕ್ಕೆ ಒಳಪಡಲಿದೆ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ. ಅರ್ಜಿದಾರರ ಪರ ವಕೀಲ ಅಭಿಜಿತ್ ಹಾನಹಳ್ಳಿ ವಕಾಲತ್ತು ವಹಿಸಿದ್ದರು. ಹಿರಿಯ ವಕೀಲ ವಿಕ್ರಂ ಹುಯಿಲಗೋಳ ವಾದಿಸಿದರು.
ಮಂಗಳೂರು- ಕಾರ್ಕಳದ ನಡುವೆ ನಾಲ್ಕು ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ದಿನದಲ್ಲಿ ಐದು ಸಿಂಗಲ್ ಟ್ರಿಪ್‌ಗಳಿಗೆ ಹೊಸದಾಗಿ ಪರ್ಮಿಟ್ ಮಂಜೂರು ಮಾಡಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು 2025ರ ಮಾರ್ಚ್ 17ರಂದು ಅಧಿಸೂಚನೆ ಹೊರಡಿಸಿದ್ದರು. ಈ ಅಧಿಸೂಚನೆಯು ನೂತನ ಸಮಗ್ರ ಏರಿಯಾ ಯೋಜನೆ-2019ಕ್ಕೆ ತದ್ವಿರುದ್ಧವಾಗಿದ್ದು, ಖಾಸಗಿ ಬಸ್ ಮಾಲೀಕರ ವಾದವನ್ನು ಆಲಿಸದೇ ಏಕಪಕ್ಷೀಯವಾಗಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.