ಸರ್ಕಾರಿ ಉದ್ಯೋಗಕ್ಕೆ ಪುತ್ರಿಯು ಅಕ್ರಮವಾಗಿ ನೇಮಕವಾಗಲು ಅಧಿಕಾರ ದುರುಪಯೋಗ ಹಾಗೂ ಸ್ವಜನಪಕ್ಷಪಾತ ಎಸಗಿದ ಆರೋಪದ ಮೇಲೆ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತು ಮಾಡಲು ರಾಜ್ಯ ಸಂಪುಟದ ಸಚಿವರು ರಾಜ್ಯಪಾಲರಿಗೆ ಸಲಹೆ ಹಾಗೂ ಶಿಫಾರಸ್ಸು ಮಾಡಿದ್ದಾರೆಯೇ? ಎಂಬ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಸಿಬ್ಬಂದಿ ಹಾಗೂ ಆಡಳಿತ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.
ರಾಜ್ಯಪಾಲರು ಜುಲೈ 10ರಂದು ಹೊರಡಿಸಿದ ಅಮಾನತು ಆದೇಶ ರದ್ದು ಕೋರಿ ಶಿವಶಂಕರಪ್ಪ ಸಾಹುಕಾರ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಇದಕ್ಕೂ ಮುನ್ನ, ಶಿವಶಂಕರಪ್ಪ ಸಾಹುಕಾರ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು “ಅರ್ಜಿಯಲ್ಲಿ ರಾಜ್ಯ ಸರ್ಕಾರದ ಸಿಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರನ್ನು ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿ (ಪಕ್ಷಕಾರ) ಮಾಡಲಾಗಿದೆ” ಎಂದು ಪೀಠಕ್ಕೆ ತಿಳಿಸಿದರು.
ಆಗ ಪ್ರತಿಕ್ರಿಯಿಸಿದ ಪೀಠವು ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದದಿಂದ ಅರ್ಜಿದಾರರನ್ನು ಅಮಾನತು ಮಾಡಲು ರಾಜ್ಯ ಸರ್ಕಾರದ ಸಂಪುಟದ ಸಚಿವರು ರಾಜ್ಯಪಾಲರ ಸಲಹೆ ಹಾಗೂ ಶಿಫಾರಸ್ಸು ಮಾಡಿದ್ದರೇ? ಎಂಬ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಸಿಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.
ಅರ್ಜಿಯ ಹಿಂದಿನ ವಿಚಾರಣೆ ವೇಳೆ ಪೀಠವು ಸಚಿವ ಸಂಪುಟದ ಸಲಹೆ ಹಾಗೂ ಶಿಫಾರಸ್ಸು ಇಲ್ಲದೆಯೇ ರಾಜ್ಯಪಾಲರು ಅರ್ಜಿದಾರರ ಅಮಾನತು ಆದೇಶ ಹೊರಡಿಸಿದ್ದಾರೆ. ಅದು ಅಪಕ್ವ ಹಾಗೂ ಕಾನೂನುಬಾಹಿರ ಕ್ರಮವಾಗಿದೆ. ಹೀಗಾಗಿ, ಆದೇಶಕ್ಕೆ ತಡೆ ನೀಡಿ ಅರ್ಜಿದಾರರಿಗೆ ರಕ್ಷಣೆ ಕಲ್ಪಿಸಬೇಕು ಎಂದು ಅರುಣ್ ಶ್ಯಾಮ್ ನ್ಯಾಯಾಲಯವನ್ನು ಕೋರಿದ್ದರು.
ಆಗ ಪೀಠವು ರಾಜ್ಯ ಸರ್ಕಾರದ ಸಚಿವ ಸಂಪುಟ ಸದಸ್ಯರ ಸಲಹೆಯಿಲ್ಲದೇ ಅರ್ಜಿದಾರರನ್ನು ಅಮಾನತು ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಸರ್ಕಾರವಷ್ಟೇ ಮಾಹಿತಿ ನೀಡಬೇಕಿದೆ. ಹೀಗಾಗಿ, ಸರ್ಕಾರವನ್ನು ಅರ್ಜಿಯಲ್ಲಿ ಪ್ರತಿವಾದಿ ಮಾಡುವಂತೆ ಸೂಚಿಸಿತ್ತು. ಅದರಂತೆ ಅರ್ಜಿಯಲ್ಲಿ ಸರ್ಕಾರವನ್ನು ಪ್ರತಿವಾದಿ ಮಾಡಲಾಗಿದೆ.