ವಿಧಾನಸಭೆಯಲ್ಲಿ ದ್ವೇಷ ಭಾಷಣ, ಸಾಮಾಜಿಕ ಬಹಿಷ್ಕಾರ ಪ್ರತಿಬಂಧ ವಿಧೇಯಕಗಳ ಅಂಗೀಕಾರ

ಈ ಎರಡು ಮಸೂದೆಗಳನ್ನು ಕ್ರಮವಾಗಿ ಡಿಸೆಂಬರ್‌ 10 ಮತ್ತು 11ರಂದು ವಿಧಾನಸಭೆಯಲ್ಲಿ ಮಂಡಿಸಲಾಗಿತ್ತು.
Vidhana Soudha
Vidhana Soudha
Published on

ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ ಮತ್ತು ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕಗಳಿಗೆ ಗುರುವಾರ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿವೆ. ಈ ಎರಡು ಮಸೂದೆಗಳನ್ನು ಕ್ರಮವಾಗಿ ಡಿಸೆಂಬರ್‌ 10 ಮತ್ತು 11ರಂದು ವಿಧಾನಸಭೆಯಲ್ಲಿ ಮಂಡಿಸಲಾಗಿತ್ತು.

ವ್ಯಕ್ತಿ, ವ್ಯಕ್ತಿಗಳ ಗುಂಪು, ಸಂಸ್ಥೆಗಳ ವಿರುದ್ಧ ಸಮಾಜದಲ್ಲಿ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುವ ದ್ವೇಷ ಭಾಷಣದ ಪ್ರಸರಣೆ, ಪ್ರಕಟಣೆ ಅಥವಾ ಪ್ರಚಾರ ಹಾಗೂ ಅಪರಾಧ ತಡೆಗಟ್ಟಲು ಮತ್ತು ನಿರ್ಬಂಧಿಸಲು ಈ ಮಸೂದೆ ರೂಪಿಸಲಾಗಿದೆ. ಈ ಕೃತ್ಯಗಳಲ್ಲಿ ತೊಡಗುವವರಿಗೆ ದಂಡನೆ ಮತ್ತು ಸಂತ್ರಸ್ತರಿಗೆ ಪರಿಹಾರ ನೀಡಲು ಅವಕಾಶ ಕಲ್ಪಿಸಲಾಗಿದೆ.

ದ್ವೇಷ ಅಪರಾಧ ಎಸಗಿದರೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ಶಿಕ್ಷೆ ₹50 ಸಾವಿರ ದಂಡ ವಿಧಿಸಬಹುದಾಗಿದೆ. ಮತ್ತದೇ ಅಪರಾಧದಲ್ಲಿ ಭಾಗಿಯಾದರೆ 2-10 ವರ್ಷಗಳ ಶಿಕ್ಷೆ ಮತ್ತು ₹1 ಲಕ್ಷ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಇದು ಸಂಜ್ಞೇ ಅಪರಾಧವಾಗಿರಲಿದ್ದು, ಜಾಮೀನುರಹಿತವಾಗಿರಲಿದೆ ಎಂದು ವಿವರಿಸಲಾಗಿದೆ. ಈ ಮಸೂದೆಯನ್ನು ಗೃಹ ಸಚಿವ ಜಿ ಪರಮೇಶ್ವರ್‌ ಅವರು ಗುರುವಾರ ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದರು.

ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕದಲ್ಲಿ, ಜಾತಿ ಅಥವಾ ಸಮುದಾಯ ಪಂಚಾಯಿತಿಯ ಮೂಲಕ ಬಹಿಷ್ಕಾರ ಹಾಕುವುದು ಇನ್ನೂ ಹಲವು ಸಮುದಾಯಗಳಲ್ಲಿ ಚಾಲ್ತಿಯಲ್ಲಿದೆ. ಇದರಿಂದ ಘನತೆಯಿಂದ ಜೀವನ ನಡೆಸುವುದಕ್ಕೆ ಹಲವು ಸಮುದಾಯಗಳಿಗೆ ಕಿರುಕುಳವಾಗುತ್ತಿದೆ. ಸಮಾಜದಲ್ಲಿ ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗುತ್ತಿದ್ದು, ಸೌಹಾರ್ದಕ್ಕೆ ಧಕ್ಕೆಯಾಗುತ್ತಿದೆ. ಇಂಥ ಅಸಾಂವಿಧಾನಿಕ ಆಚರಣೆಗಳನ್ನು ನಿರ್ಮೂಲನೆ ಮಾಡುವುದು ಅಗತ್ಯವಾಗಿದೆ ಎಂದು ಹೇಳಲಾಗಿದೆ.

ಈ ಬಗೆಯ ಬಹಿಷ್ಕಾರಕ್ಕೆ ಸಭೆ ಸೇರುವ ಅಥವಾ ಭಾಗವಹಿಸುವ ಪ್ರತಿಯೊಬ್ಬರಿಗೂ ₹1 ಲಕ್ಷ ದಂಡ ವಿಧಿಸಲು ಅವಕಾಶ ಮಾಡಿಕೊಡಲಾಗಿದೆ. ಇಂಥ ಅಪರಾಧದಲ್ಲಿ ಭಾಗವಹಿಸಲು ಪ್ರೇರಣೆ ಅಥವಾ ನೆರವು ನೀಡುವವರೆಗೆ 3 ವರ್ಷ ಜೈಲು ಮತ್ತು ₹1 ಲಕ್ಷ ದಂಡ ವಿಧಿಸಬಹುದಾಗಿದೆ. ಸಂತ್ರಸ್ತನ ಸಮ್ಮತಿಯೊಂದಿಗೆ ರಾಜೀ ಮಾಡಿಕೊಳ್ಳಲೂ ಅವಕಾಶ ಕಲ್ಪಿಸಲಾಗಿರುವ ಈ ಮಸೂದೆಯನ್ನು ಸಮಾಜ ಕಲ್ಯಾಣ ಮಂತ್ರಿ ಡಾ. ಎಚ್‌ ಸಿ ಮಹದೇವಪ್ಪ ಸದನದಲ್ಲಿ ಮಂಡಿಸಿ ಅಂಗೀಕಾರ ಪಡೆದರು.

Attachment
PDF
Karnataka Hate Speech and Hate Crimes (Prevention) Bill
Preview
Attachment
PDF
Karnataka Social Boycott (Prevention, Prohibition and Redressal) Bill 2025
Preview
Kannada Bar & Bench
kannada.barandbench.com