[ದ್ವೇಷ ಭಾಷಣ] ಟಿವಿ ವಾಹಿನಿಗಳು ನಿರ್ದಿಷ್ಟ ಕಾರ್ಯಸೂಚಿ ಹೊಂದಿದ್ದು ಸಮಾಜದಲ್ಲಿ ಒಡಕು ಸೃಷ್ಟಿಸುತ್ತಿವೆ: ಸುಪ್ರೀಂ

ದ್ವೇಷ ಭಾಷಣ ನಿಯಂತ್ರಿಸಲು ಕೇಂದ್ರ ಸರ್ಕಾರವು ಅಪರಾಧ ದಂಡ ಪ್ರಕ್ರಿಯಾ ಸಂಹಿತೆಗೆ (ಸಿಆರ್‌ಪಿಸಿ) ಸಮಗ್ರ ತಿದ್ದುಪಡಿಗಳನ್ನು ತರುವ ಚಿಂತನೆಯನ್ನು ಹೊಂದಿದೆ ಎಂದು ಕೇಂದ್ರ ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿದೆ.
Hate Speech
Hate Speech

ಟಿವಿ ವಾಹಿನಿಗಳು ನಿರ್ದಿಷ್ಟ ಕಾರ್ಯಸೂಚಿ (ಅಜೆಂಡಾ) ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದು, ಸುದ್ದಿಯನ್ನು ರೋಚಕಗೊಳಿಸುವ ಸ್ಪರ್ಧೆಗೆ ಇಳಿದಿವೆ. ತಮ್ಮ ಹೂಡಿಕೆದಾರರ ಮೂಗಿನ ನೇರಕ್ಕೆ ನಡೆಯುತ್ತಿದ್ದು, ಭಾರತದಲ್ಲಿ ವಿಭಜನೆ ಉಂಟು ಮಾಡುತ್ತಿವೆ ಎಂದು ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ದ್ವೇಷ ಭಾಷೆ ಪ್ರಕರಣಗಳ ಕುರಿತು ಕ್ರಮ ಕೈಗೊಳ್ಳುವಂತೆ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್‌ ಮತ್ತು ಬಿ ವಿ ನಾಗರತ್ನ ಅವರ ನೇತೃತ್ವದ ವಿಭಾಗೀಯ ಪೀಠವು ಶುಕ್ರವಾರ ವಿಚಾರಣೆ ನಡೆಸಿತು.

ಇಂಥ ದ್ವೇಷ ಭಾಷಣ ಕಾರ್ಯಕ್ರಮಗಳ ಪ್ರಸಾರವನ್ನು ಹೇಗೆ ನಿಯಂತ್ರಿಸುವಿರಿ ಎಂದು ಸುದ್ದಿ ಪ್ರಸಾರ ಗುಣಮಟ್ಟ ಪ್ರಾಧಿಕಾರ (ನ್ಯೂಸ್‌ ಬ್ರಾಡ್‌ಕಾಸ್ಟಿಂಗ್‌ ಸ್ಟ್ಯಾಂಡರ್ಸ್‌ ಅಥಾರಿಟಿ) ಮತ್ತು ಕೇಂದ್ರ ಸರ್ಕಾರವನ್ನು ಪೀಠವು ಪ್ರಶ್ನಿಸಿತು.

“ವಾಸ್ತವದಲ್ಲಿ ಚಾನೆಲ್‌ಗಳು ಪ್ರತಿಸ್ಪರ್ಧೆಗೆ ಇಳಿದಿವೆ. ಅವುಗಳು ಎಲ್ಲವನ್ನೂ ರೋಚಕಗೊಳಿಸುತ್ತಿವೆ. ಇದನ್ನು ಹೇಗೆ ನಿಯಂತ್ರಿಸುವಿರಿ? ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮುಖ್ಯ. ಸ್ವಾತಂತ್ರ್ಯದ ಸಮಸ್ಯೆ ಏನೆಂದರೆ ಅದು ವೀಕ್ಷಕರಿಗೆ ಸಂಬಂಧಿಸಿರುವುದು. ಜನರಿಗೆ ವಾಹಿನಿಗಳ ಕಾರ್ಯಸೂಚಿ ಅರಿವಾಗಬಲ್ಲದೇ ಎನ್ನುವುದು ಪ್ರಶ್ನೆ. ಈ ಕಾರ್ಯಸೂಚಿಗಳು ಮತ್ತಾರನ್ನೋ ಪೊರೆಯುತ್ತಿರುತ್ತದೆ. ಅಲ್ಲದೇ, ಚಾನೆಲ್‌ಗಳಲ್ಲಿ ಹಣದ ಹೂಡಿಕೆಯಾಗಿರುತ್ತದೆ. ಯಾರು ಹಣ ಹಾಕುತ್ತಾರೋ ಅವರು ಅಣತಿ ನೀಡುತ್ತಾರೆ," ಎಂದು ನ್ಯಾ. ಜೋಸೆಫ್‌ ವಿವರಿಸಿದರು.

“ಇಂಥ ಚಾನೆಲ್‌ಗಳು ಸಮಾಜದಲ್ಲಿ ಬಿರುಕು ಉಂಟು ಮಾಡುತ್ತಿವೆ. ನೀವು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತಾಡುವಾಗ ಅದಕ್ಕೆ ನೀವು ಅರ್ಹರು ಎಂಬಂತೆ ನಡೆದುಕೊಳ್ಳಬೇಕು. ಇಲ್ಲವಾದರೆ ಯಾವ ರೀತಿಯ ಘನತೆ ತಾನೆ ನಮಗೆ ಉಳಿಯುತ್ತದೆ” ಎಂದರು.

ಆಗ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಎಂ ನಟರಾಜ್‌ ಅವರು, “ದ್ವೇಷ ಭಾಷಣ ನಿಯಂತ್ರಿಸಲು ಕೇಂದ್ರ ಸರ್ಕಾರವು ಅಪರಾಧ ದಂಡ ಪ್ರಕ್ರಿಯಾ ಸಂಹಿತೆಗೆ (ಸಿಆರ್‌ಪಿಸಿ) ಸಮಗ್ರ ತಿದ್ದುಪಡಿಗಳನ್ನು ತರುವ ಯೋಜನೆಯನ್ನು ಹೊಂದಿದೆ” ಎಂದು ತಿಳಿಸಿದರು. “ಸಿಆರ್‌ಪಿಸಿ ತಿದ್ದುಪಡಿ ತರುವ ಚಿಂತನೆಯಲ್ಲಿ ನಾವಿದ್ದೇವೆ. ಇದು ಒಕ್ಕೂಟ ಸರ್ಕಾರದ ನಿಲುವಾಗಿದೆ” ಎಂದು ಹೇಳಿದರು.

ವಿಚಾರಣೆಯ ಒಂದು ಹಂತದಲ್ಲಿ ಪೀಠವು ಎನ್‌ಬಿಎಸ್‌ಎ ಕುರಿತು “ದುರದೃಷ್ಟಕರವೆಂದರೆ ನೀವು ಏನನ್ನೂ ಮಾಡುತ್ತಿಲ್ಲ” ಎಂದಿತು.

ಇದಕ್ಕೆ ಎನ್‌ಬಿಎಸ್‌ಎ ಪರ ವಕೀಲರು “ಸುದರ್ಶನ್‌ ಟಿವಿ ಮತ್ತು ರಿಪಬ್ಲಿಕ್‌ ಟಿವಿಯು ನಮ್ಮ ನೆಟ್‌ವರ್ಕ್‌ ಭಾಗವಾಗಿಲ್ಲ. ಹೀಗಾಗಿ, ಅವರು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ನಮ್ಮ ಸಂಹಿತೆಯನ್ನು ಕಾರ್ಯಕ್ರಮದ ಸಂಹಿತೆಯ ಭಾಗವಾಗಿಸಬೇಕು. ಆಗ ಮಾತ್ರ ಇದು ಎಲ್ಲರಿಗೂ ಅನ್ವಯವಾಗುತ್ತದೆ” ಎಂದರು.

ಆಗ ಪೀಠವು “ಟಿವಿ ಕಾರ್ಯಕ್ರಮಗಳ ಭಾಗವಾದ ಸುದ್ದಿ ನಿರೂಪಕರೇ ಸಮಸ್ಯೆಯಾದರೆ ಏನು ಮಾಡುವುದು. ಎನ್‌ಬಿಎಸ್‌ಎ ಪಕ್ಷಪಾತಿಯಾಗಬಾರದು. ಏಕಮುಖ ಕಾರ್ಯಕ್ರಮ ಪ್ರಸಾರ ಮಾಡಬಾರದು” ಎಂದು ಒತ್ತಿ ಹೇಳಿತು. ಮುಂದುವರಿದು, “ಸುದ್ದಿ ನಿರೂಪಕರಿಗೆ ದಂಡ ವಿಧಿಸುವಂತಾದರೆ, ತಾವು ದಂಡ ತೆರಬೇಕಾಗುತ್ತದೆ ಎಂದು ಅವರಿಗೆ ಅರಿವಾಗುತ್ತದೆ. ಸುದ್ದಿ ನಿರೂಪಕರನ್ನು ಸುದ್ದಿ ಪ್ರಸಾರದಿಂದ ಹೊರಗಿಡುವ ಬಗ್ಗೆಯೂ ಆಲೋಚಿಸಬಹುದು” ಎಂದಿತು.

“ಬಹುತೇಕ ಈ ಪ್ರಕರಣಗಳು ಕೋಮು ಮತ್ತು ಧಾರ್ಮಿಕ  ವಿಚಾರಗಳಿಗೆ ಸಂಬಂಧಿಸಿವೆ. ಮಾಧ್ಯಮದಲ್ಲಿ ಕೆಲಸ ಮಾಡುವ ಪತ್ರಕರ್ತರು ಹೇಗೆ ವರ್ತಿಸಬೇಕು ಎಂಬುದನ್ನು ಅರಿತುಕೊಳ್ಳಬೇಕು. ಅತ್ಯಂತ ಪರಿಣಾಮಕಾರಿಯಾದ ಸ್ಥಾನಗಳನ್ನು ಅಲಂಕರಿಸುತ್ತೇವೆ ಎಂಬುದನ್ನು ಅವರು ಮನನ ಮಾಡಿಕೊಳ್ಳಬೇಕು ಹಾಗೂ ಅವರನ್ನು ವೀಕ್ಷಿಸುವ ಜನರು ತಕ್ಷಣಕ್ಕೆ ಯಾವುದು ಸರಿ ಎಂಬುದನ್ನು ಅರ್ಥಮಾಡಿಕೊಳ್ಳಬಲ್ಲವರಲ್ಲ ಎಂದು ಅರಿತುಕೊಳ್ಳಬೇಕು” ಎಂದು ಪೀಠ ಹೇಳಿತು.

ನ್ಯಾಯಮೂರ್ತಿ ಜೋಸೆಫ್‌ ಅವರು ಸಿಆರ್‌ಪಿಸಿಗೆ ಮಾಡಲು ಬಯಸಿರುವ ತಿದ್ದುಪಡಿಯ ಕುರಿತು ಎಎಸ್‌ಜಿಯನ್ನು ಪ್ರಶ್ನಿಸಿದರು. ತಿದ್ದುಪಡಿ ಮಾಡಲಾಗುವುದು ಎಂದು ನೀವು ಹೇಳುತ್ತಿದ್ದೀರಿ. ಈಗಿರುವ ಅಪರಾಧ ಸಂಹಿತೆ ಸಾಲುವುದಿಲ್ಲವೇ. ಕಾನೂನು ಆಯೋಗವೂ ಇದನ್ನೇ ಸಲಹೆ ಮಾಡಿತ್ತು. ನೀವು ಏನು ಮಾಡಲು ಪ್ರಯತ್ನಿಸುತ್ತಿದ್ದೀರಿ? ಎಂದರು.

Also Read
ದ್ವೇಷ ಭಾಷಣ ಪ್ರಕರಣ: ರಾಜಕಾರಣಿ ಆಜಂ ಖಾನ್‌ಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ

ಆಗ ಎಎಸ್‌ಜಿ ಅವರು “ಸಿಆರ್‌ಪಿಸಿಗೆ ಸಮಗ್ರ ತಿದ್ದುಪಡಿ ಮಾಡಲು ಬಯಸಿದ್ದೇವೆ. ಸಂಬಂಧಪಟ್ಟ ಭಾಗೀದಾರರೆಲ್ಲರಿಂದಲೂ ಸಲಹೆ ಬಯಸುತ್ತಿದ್ದೇವೆ. ಇದು ಸಂಸತ್‌ನಲ್ಲಿ ಮಂಡನೆಯಾಗಬೇಕು ಮತ್ತು ಶಾಸನಸಭೆಯ ನಡೆಯ ಕುರಿತು ನಾನು ಊಹಿಸಲಾಗದು” ಎಂದು ಪ್ರತಿಕ್ರಿಯಿಸಿದರು.

ಇದನ್ನು ಪೀಠವು ಆದೇಶದಲ್ಲಿ ದಾಖಲಿಸಿತು. ಅಲ್ಲದೇ, ಮುಂದಿನ ವಿಚಾರಣೆಯ ವೇಳೆಗೆ ಅಮಿಸ್‌ ಕ್ಯೂರಿ ಅವರು ಮಾರ್ಗಸೂಚಿಗಳ ಕರಡನ್ನು ಸಲ್ಲಿಸಬೇಕು ಎಂದು ಆದೇಶಿಸಿತು.

Related Stories

No stories found.
Kannada Bar & Bench
kannada.barandbench.com