ಟಿವಿ ಚಾನೆಲ್‌ಗಳು ದ್ವೇಷ ಭಾಷಣವನ್ನು ಗಂಭೀರವಾಗಿ ನಿಭಾಯಿಸಿಲ್ಲ: ಸುಪ್ರೀಂ ಕೋರ್ಟ್ ಅತೃಪ್ತಿ

ವಾಕ್ ಸ್ವಾತಂತ್ರ್ಯ ಮುಖ್ಯವಾದರೂ, ಟಿವಿಯಲ್ಲಿ ದ್ವೇಷದ ಭಾಷಣಕ್ಕೆ ಅನುಮತಿಸಲಾಗದು ಎಂದು ನ್ಯಾಯಾಲಯ ಹೇಳಿದ್ದು ಇಂಥದ್ದೇ ಪ್ರಕರಣವೊಂದರಲ್ಲಿ ಇಂಗ್ಲೆಂಡ್‌ನಲ್ಲಿ ಟಿವಿ ವಾಹಿನಿಯೊಂದಕ್ಕೆ ಹೇಗೆ ಭಾರಿ ದಂಡ ವಿಧಿಸಲಾಯಿತು ಎಂಬುದನ್ನು ಹೇಳಿತು.
Supreme Court and TV
Supreme Court and TV

ದೇಶದ ಮುಖ್ಯವಾಹಿನಿಯ ಟಿವಿ ಸುದ್ದಿ ವಾಹಿನಿಗಳ ಕಾರ್ಯವೈಖರಿ ಬಗ್ಗೆ ಸುಪ್ರೀಂ ಕೋರ್ಟ್ ಬುಧವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಆಗಾಗ್ಗೆ ಅವು ದ್ವೇಷ ಭಾಷಣಕ್ಕೆ ಅವಕಾಶ ಕಲ್ಪಿಸಿ ಬಳಿಕ ಯಾವುದೇ ಶಿಕ್ಷೆ, ನಿರ್ಬಂಧಗಳಿಲ್ಲದೆ ತಪ್ಪಿಸಿಕೊಳ್ಳುತ್ತವೆ ಎಂದಿತು [ಅಶ್ವಿನಿ ಉಪಾಧ್ಯಾಯ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ನ್ಯಾಯಾಲಯ ಅವಲೋಕನದ ಪ್ರಮುಖಾಂಶಗಳು

  • ಟಿವಿಗಳಲ್ಲಿ ನಿರೂಪಕರ ಪಾತ್ರ ಬಹಳ ಮುಖ್ಯ. ಮುಖ್ಯವಾಹಿನಿಯ ಮಾಧ್ಯಮ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ದ್ವೇಷ ಭಾಷಣಗಳು ಅನಿಯಂತ್ರಿತವಾಗಿವೆ. ನಿರೂಪಕರ ಪಾತ್ರ ನಿರ್ಣಾಯಕ. ದ್ವೇಷ ಭಾಷಣ ಪ್ರಸಾರವಾಗದಂತೆ ನೋಡಿಕೊಳ್ಳುವುದು ಅವರ ಕರ್ತವ್ಯ.

  • ವಾಕ್ ಸ್ವಾತಂತ್ರ್ಯ ಮುಖ್ಯವಾದರೂ, ಟಿವಿಯಲ್ಲಿ ದ್ವೇಷದ ಭಾಷಣಕ್ಕೆ ಅನುಮತಿಸಲಾಗದು. ಇಂಥದ್ದೇ ಪ್ರಕರಣವೊಂದರಲ್ಲಿ ಇಂಗ್ಲೆಂಡ್‌ನಲ್ಲಿ ಟಿವಿ ವಾಹಿನಿಯೊಂದಕ್ಕೆ ಹೇಗೆ ಭಾರಿ ದಂಡ ವಿಧಿಸಲಾಗಿದೆ. ನಮ್ಮಲ್ಲಿ ಅದು ಇಲ್ಲ. ಅಂತಹದರೊಂದಿಗೆ ಗಂಭೀರವಾಗಿ ವ್ಯವಹರಿಸಿಲ್ಲ. ದ್ವೇಷಭಾಷಣಗಳು ಪ್ರಸಾರವಾಗದಂತೆ ತಡೆಯಬೇಕು. ದಂಡ ವಿಧಿಸಬೇಕು.

  • ದ್ವೇಷ ಭಾಷಣ ಪ್ರಸಾರಕ್ಕೆ ಅನುಮತಿಸಲಾಗದು.

  • (ಮೌಖಿಕವಾಗಿ ಸೂಚಿಸುತ್ತಾ) ಸರ್ಕಾರ ಯಾಕೆ ಮೂಕಪ್ರೇಕ್ಷಕನಾಗಿ ಉಳಿದಿದೆ ಎಂಬುದನ್ನು ತಿಳಿಸಬೇಕು.

  • ದ್ವೇಷ ಭಾಷಣ ಮಾಡುವವರಿಗೆ ಶಿಕ್ಷೆಯ ಪರಿಣಾಮ ತಟ್ಟದ ಹೊರತು ಅವರು ಅದನ್ನು ಮುಂದುವರೆಸಬಹುದು.

Also Read
ಕಾನೂನು ಸದಾ ನ್ಯಾಯಯುತ ಎಂದೇನೂ ಅಲ್ಲ; ಅಧಿಕಾರರೂಢರಿಗೆ ಸತ್ಯ ಹೇಳಿ; ದ್ವೇಷ ಭಾಷಣ ಖಂಡಿಸಿ: ನ್ಯಾ. ಚಂದ್ರಚೂಡ್

ಶಕ್ತಿ ವಾಹಿನಿ ಮತ್ತು ತೆಹಸೀನ್ ಪೂನವಾಲಾ ಪ್ರಕರಣಗಳಲ್ಲಿ ತೀರ್ಪು ನೀಡಿದ್ದಾಗ ತಾನು  ದ್ವೇಷದ ಭಾಷಣ ತಡೆಗಟ್ಟುವ ನಿಟ್ಟಿನಲ್ಲಿ ತಾನು ಹೊರಡಿಸಿದ್ದ ಸಾಮಾನ್ಯ ನಿರ್ದೇಶನಗಳನ್ನು ಸರ್ಕಾರವು ಪಾಲಿಸಿದೆಯೇ ಎಂಬ ಕುರಿತು ವಿವರವಾದ ಪಟ್ಟಿ ಸಿದ್ಧಪಡಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಗೃಹ ಸಚಿವಾಲಯಕ್ಕೆ ಸೂಚಿಸಿತ್ತು.

ಇಂದಿನ ವಿಚಾರಣೆಯ ಸಂದರ್ಭದಲ್ಲಿ, ದ್ವೇಷದ ಭಾಷಣದಿಂದ ರಾಜಕಾರಣಿಗಳು ಹೆಚ್ಚು ಲಾಭ ಪಡೆಯುತ್ತಿದ್ದು ಟಿವಿ ಚಾನೆಲ್‌ಗಳು ಅವರಿಗೆ ವೇದಿಕೆ ಕಲ್ಪಿಸುತ್ತಿವೆ ಎಂದು ನ್ಯಾಯಾಲಯ ಹೇಳಿದೆ.

ಹಿರಿಯ ವಕೀಲ ಸಂಜಯ್ ಹೆಗ್ಡೆ, ಅರ್ಜಿದಾರರಲ್ಲಿ ಒಬ್ಬರಾದ ಹಿರಿಯ ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ ವಿಚಾರಣೆ ವೇಳೆ ವಾದ ಮಂಡಿಸಿದರು. ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ಅವರು 14 ರಾಜ್ಯಗಳು ತಮ್ಮ ಪ್ರತಿಕ್ರಿಯೆ ಸಲ್ಲಿಸಿರುವುದಾಗಿ ತಿಳಿಸಿದರು. ಉಳಿದ ರಾಜ್ಯಗಳ ಮಾಹಿತಿ ಸಂಗಹ್ರಹಿಸಿ ಪ್ರತಿ-ಅಫಿಡವಿಟ್‌ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದ ಪೀಠ ನವೆಂಬರ್ 23 ಕ್ಕೆ ಪ್ರಕರಣವನ್ನು ಮುಂದೂಡಿತು.

Related Stories

No stories found.
Kannada Bar & Bench
kannada.barandbench.com