[ದ್ವೇಷ ಭಾಷಣ] ಹಾಸ್ಯ ಕಲಾವಿದರಿಗೆ ಸಿಗುವ ರಕ್ಷಣೆ ಕ್ಯಾಥೊಲಿಕ್‌ ಪಾದ್ರಿಗೂ ವಿಸ್ತರಿಸಲಾಗದು: ಮದ್ರಾಸ್‌ ಹೈಕೋರ್ಟ್‌

ಹಾಸ್ಯ ಕಲಾವಿದರಾದ ಮುನಾವರ್‌ ಫಾರೂಖಿ ಅಥವಾ ಅಲೆಕ್ಸಾಂಡರ್‌ ಬಾಬು ಇತರರನ್ನು ಹಾಸ್ಯ ಮಾಡಿದರೆ ಅವರ ಧಾರ್ಮಿಕ ಗುರುತು ನಗಣ್ಯವಾಗುತ್ತದೆ. ಏಕೆಂದರೆ ಅದರಲ್ಲಿ ದುರುದ್ದೇಶ ಇರುವುದಿಲ್ಲ. ಇದನ್ನೇ ಪಾದ್ರಿಯೊಬ್ಬರ ಭಾಷಣಕ್ಕೆ ವಿಸ್ತರಿಸಲಾಗದು.
Madurai Bench of Madras HC , Christian cross

Madurai Bench of Madras HC , Christian cross

Published on

ಧಾರ್ಮಿಕ ಸಮುದಾಯವೊಂದರ ವಿರುದ್ಧ ದ್ವೇಷ ಭಾಷಣ ಮಾಡಿದಾಗ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 153ಎ ಮತ್ತು 295ಎ ಅಡಿ ಪ್ರಕರಣ ಅನ್ವಯಿಸುತ್ತದೆಯೇ ಎಂದು ನಿರ್ಧರಿಸಲು 'ಯಾರು ಭಾಷಣ ಮಾಡಿದರು' ಎಂಬ ಅಂಶ ಪ್ರಸ್ತುತವಾಗುತ್ತದೆ ಎಂದು ಮದ್ರಾಸ್‌ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ [ಫಾದರ್‌ ಪಿ ಜಾರ್ಜ್‌ ಪೊನ್ನಯ್ಯ ವರ್ಸಸ್‌ ಪೊಲೀಸ್‌ ಇನ್ಸ್‌ಪೆಕ್ಟರ್‌].

ತಮ್ಮ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ದಾಖಲಿಸಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಕ್ಯಾಥೊಲಿಕ್‌ ಪಂಥದ ಪಾದ್ರಿಯೊಬ್ಬರು ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಜಿ ಆರ್‌ ಸ್ವಾಮಿನಾಥನ್‌ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

“ಹಾಸ್ಯ ಕಲಾವಿದರಾದ ಮುನಾವರ್‌ ಫಾರೂಖಿ ಅಥವಾ ಅಲೆಕ್ಸಾಂಡರ್‌ ಬಾಬು ಅವರು ವೇದಿಕೆಯಲ್ಲಿ ಹಾಸ್ಯ ಮಾಡುವಾಗ ಇತರರನ್ನು ಕೇಂದ್ರೀಕರಿಸಿ ಹಾಸ್ಯ ಮಾಡುವ ತಮ್ಮ ಮೂಲಭೂತ ಹಕ್ಕನ್ನು ಅವರು ಬಳಸುತ್ತಿರುತ್ತಾರೆ. ಅಲ್ಲಿ ಅವರ ಧಾರ್ಮಿಕ ಗುರುತು ಅಪ್ರಸ್ತುತವಾಗುತ್ತದೆ. ಇಂತಹ ಸಂದರ್ಭಗಳಲ್ಲಿಯೇ "ಯಾರು?" ಮತ್ತು "ಎಲ್ಲಿ?" ಎನ್ನುವ ಪರೀಕ್ಷೆಗಳು ಮುಖ್ಯವಾಗುವುದು. ಇಂತಹ ಪ್ರಕರಣಗಳಲ್ಲಿ (ಹಾಸ್ಯ ಕಲಾವಿದರ ವಿಷಯದಲ್ಲಿ) ಐಪಿಸಿ ಸೆಕ್ಷನ್‌ 295ಎ ಸಂಪೂರ್ಣವಾಗಿ ಗೌಣವಾಗುತ್ತದೆ. ಏಕೆಂದರೆ ಅಲ್ಲಿ ದ್ವೇಷಭಾವ ಇರುವುದಿಲ್ಲ,"ಎಂದು ಪೀಠ ಹೇಳಿತು. ಮುಂದುವರೆದು, ಆದರೆ ಇಂತಹದೇ ಸವಲತ್ತನ್ನು ಹಿಂದೂ ಧಾರ್ಮಿಕ ನಂಬಿಕೆಗಳನ್ನು ಅವಹೇಳನ ಮಾಡಿದ ಕ್ಯಾಥೊಲಿಕ್‌ ಪಾದ್ರಿಯವರಿಗೆ ನೀಡಲಾಗದು ಎಂದಿತು

Also Read
ಅಭಯಾ ಹತ್ಯೆ: ಪಾದ್ರಿ ಥಾಮಸ್ ಕೊಟ್ಟೂರ್ ಮತ್ತು ಸಿಸ್ಟರ್ ಸೆಫಿಗೆ ಜೀವಾವಧಿ ಶಿಕ್ಷೆ

“ಮೇಲ್ನೋಟಕ್ಕೆ ಪಾದ್ರಿಯವರು ಹಿಂದೂ ಸಮುದಾಯದ ಭಾವನೆಗಳನ್ನು ಕೆರಳಿಸಿ, ದ್ವೇಷ ಭಾವನೆಗೆ ಪ್ರೇರಣೆ ನೀಡುವಂತಹ ಭಾಷಣ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 295ಎ, 153ಎ, 505(2) ಅಡಿ ದಾಖಲಾಗಿರುವ ಅಪರಾಧಗಳನ್ನು ವಜಾ ಮಾಡಲಾಗದು" ಎಂದು ಪೀಠ ಹೇಳಿತು.

ಪಶ್ಚಿಮ ಕನ್ಯಾಕುಮಾರಿ ಜಿಲ್ಲೆಯ ಅರುಮನೈ ಗ್ರಾಮದಲ್ಲಿ ಪಾದ್ರಿಯವರು ಮಾಡಿದ್ದ ಭಾಷಣವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿತ್ತು.

Kannada Bar & Bench
kannada.barandbench.com