![[ಹಾಥ್‌ರಸ್ ಅತ್ಯಾಚಾರ ಪ್ರಕರಣ] ವಿಶೇಷ ನ್ಯಾಯಾಲಯದಲ್ಲಿರುವ ಪ್ರಕರಣ ವರ್ಗಾಯಿಸಲು ನಿರಾಕರಿಸಿದ ಅಲಾಹಾಬಾದ್ ಹೈಕೋರ್ಟ್](http://media.assettype.com/barandbench-kannada%2F2021-08%2F65c6d65d-3666-4f86-877e-18c121335ab6%2Fbarandbench_2020_10_7232962b_9f51_424f_b895_76675f3a9031_1234.jpg?w=480&auto=format%2Ccompress&fit=max)
ಹಾಥ್‌ರಸ್‌ನ ವಿಶೇಷ ನ್ಯಾಯಾಲಯದಲ್ಲಿ ಬಾಕಿ ಇರುವ ಹಾಥ್‌ರಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆ ತಡೆ ಹಿಡಿಯಲು ಅಥವಾ ವರ್ಗಾಯಿಸಲು ಅಲಾಹಾಬಾದ್ ಹೈಕೋರ್ಟ್ ನಿರಾಕರಿಸಿದೆ. ವಿಚಾರಣೆಯ ಸಮಯದಲ್ಲಿ ವಕೀಲರನ್ನು ಒಳಗೊಂಡ ಅನಿಯಂತ್ರಿತ ಗುಂಪೊಂದು ವಿಚಾರಣಾ ನ್ಯಾಯಾಲಯಕ್ಕೆ ನುಗ್ಗಿ ಸಾಕ್ಷಿಗಳು ಮತ್ತು ದೂರುದಾರರ ಪರ ವಕೀಲರನ್ನು ಬೆದರಿಸಿತ್ತು. ಅಲ್ಲದೆ ವಿಚಾರಣೆ ನಡೆಸದಂತೆ ನ್ಯಾಯಾಧೀಶರನ್ನು ಒತ್ತಾಯಿಸಿತ್ತು ಎಂದು ಆರೋಪಿಸಿ ಸಂತ್ರಸ್ತೆಯ ಸಹೋದರ ಸಲ್ಲಿಸಿದ್ದ ಮನವಿಯ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ.
ಈ ಕುರಿತು ಜಿಲ್ಲಾ ನ್ಯಾಯಾಧೀಶರು ಮತ್ತು ಭದ್ರತಾ ಅಧಿಕಾರಿಗಳು ಸಲ್ಲಿಸಿದ ವರದಿಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳಾದ ರಾಜನ್ ರಾಯ್ ಮತ್ತು ಜಸ್‌ಪ್ರೀತ್ ಸಿಂಗ್ ಅವರನ್ನೊಳಗೊಂಡ ವಿಭಾಗೀಯ ಪೀಠ ವಿಶೇಷ ನ್ಯಾಯಾಲಯದ ಮುಂದಿರುವ ವಿಚಾರಣೆ ತಡೆಹಿಡಿಯಲು ನಿರಾಕರಿಸಿತು. ಹಾಥ್‌ರಸ್ ಪ್ರಕರಣದ ವಿಚಾರಣೆಯಲ್ಲಿ ಭಾಗಿಯಾಗಿರುವ ಸಾಕ್ಷಿಗಳು ಮತ್ತು ವಕೀಲರ ಸುರಕ್ಷತೆಗಾಗಿ ಮಾರ್ಚ್ 20ರಂದು ಹೈಕೋರ್ಟ್ ಹಲವು ನಿರ್ದೇಶನಗಳನ್ನು ನೀಡಿತ್ತು. ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾದ 19 ವರ್ಷದ ಯುವತಿಯ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸದೆ ಪೊಲೀಸರೇ ಅಂತ್ಯ ಸಂಸ್ಕಾರ ಮಾಡಿದ ಘಟನೆಯ ಕುರಿತು ಡಿಸೆಂಬರ್ 2020 ರಲ್ಲಿ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆದೇಶ ನೀಡಲಾಗಿತ್ತು.
ಗಲಭೆಕೋರ ಗುಂಪೊಂದು ವಿಚಾರಣೆಗೆ ಅಡ್ಡಿಪಡಿಸಿದೆ ಎಂದು ಆರೋಪಿಸಿ ಸಂತ್ರಸ್ತೆಯ ಸಹೋದರ ನ್ಯಾಯಾಲಯದ ಮೊರೆ ಹೋದ ಬಳಿಕ ಮಾರ್ಚ್ 20 ರ ನಿರ್ದೇಶನಗಳನ್ನು ನ್ಯಾಯಾಲಯ ಜಾರಿಗೊಳಿಸಿತು. ಸದ್ಯಕ್ಕೆ ಗೌಪ್ಯ ವಿಚಾರಣೆ ನಡೆಸುವಂತೆ ಆದೇಶಿಸಿದ ಪೀಠ ಆಪಾದನೆಗಳ ಸತ್ಯಾಸತ್ಯತೆಯ ಬಗ್ಗೆ ಹಾಥ್‌ರಸ್ ಜಿಲ್ಲಾ ನ್ಯಾಯಾಧೀಶರು, ಐಜಿ ಹಾಗೂ ಸಿಆರ್‌ಪಿಎಫ್ ಕೇಂದ್ರ ವಲಯದಿಂದ ವರದಿ ಕೇಳಿತ್ತು. ಅದರಂತೆ ಜಿಲ್ಲಾ ನ್ಯಾಯಾಧೀಶರು ವಿವರವಾದ ವಿಚಾರಣೆ ನಡೆಸಿ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಿದ್ದರು.
ಸಾಕ್ಷಿದಾರರು ಮತ್ತು ಸಂತ್ರಸ್ತೆಯ ಕುಟುಂಬಕ್ಕೆ ಅಗತ್ಯವಾದ ಭದ್ರತೆ ಒದಗಿಸುವುದಕ್ಕಾಗಿ ಹಾಗೂ ಯಾವುದೇ ವ್ಯಕ್ತಿಯಿಂದ ವಿಚಾರಣೆಗೆ ಅಡ್ಡಿಪಡಿಸದಿರುವುದಕ್ಕೆ ಸಂಬಂಧಿಸಿದಂತೆ ತನ್ನ ಹಿಂದಿನ ಆದೇಶದಲ್ಲಿರುವ ನಿರ್ದೇಶನಗಳು ಮುಂದುವರೆಯುತ್ತವೆ ಎಂದು ನ್ಯಾಯಾಲಯ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ. ಅಂತೆಯೇ ಪ್ರಕರಣದ ವರ್ಗಾವಣೆ ಅಥವಾ ವಿಚಾರಣೆ ತಡೆಗೆ ನಿರಾಕರಿಸಿ ಅರ್ಜಿ ವಿಲೇವಾರಿ ಮಾಡಿತು. ಸೆಪ್ಟೆಂಬರ್ 16 ರಂದು ಮುಖ್ಯ ಪ್ರಕರಣದ ವಿಚಾರಣೆ ನಡೆಯಲಿದೆ.