ಹಾಥ್‌ರಸ್‌ ಪ್ರಕರಣ: ಉತ್ತರ ಪ್ರದೇಶದಿಂದ ಹೊರಗೆ ನೆಲೆಸಲು ಸಂತ್ರಸ್ತೆ ಕುಟುಂಬಸ್ಥರ ಮನವಿ; ರಾಜ್ಯ ಸರ್ಕಾರಕ್ಕೆ ನೋಟಿಸ್‌

ತಮ್ಮ ಕುಟುಂಬ ‍‍& ಸಾಕ್ಷಿಗಳನ್ನು ಉತ್ತರ ಪ್ರದೇಶದಲ್ಲಿ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದ್ದು, ಸಾಮಾಜಿಕ-ಆರ್ಥಿಕವಾಗಿ ತಾತ್ಸಾರದಿಂದ ಕಾಣುತ್ತಿರುವುದರಿಂದ ತಮ್ಮನ್ನು ವಿಶೇಷವಾಗಿ ದೆಹಲಿಯಲ್ಲಿ ನೆಲೆಸಲು ಅವಕಾಶ ಮಾಡಿಕೊಡುವಂತೆ ಕೋರಿದ್ದಾರೆ.
Hathras Gang-rape case
Hathras Gang-rape case

ಉತ್ತರ ಪ್ರದೇಶದಿಂದ ಹೊರಗೆ ನೆಲೆಸಲು ಅನುಕೂಲ ಕಲ್ಪಿಸಲು ಆದೇಶಿಸುವಂತೆ ಕೋರಿ ಹಾಥ್‌ರಸ್‌ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಕುಟುಂಬಸ್ಥರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಈಚೆಗೆ ಉತ್ತರ ಪ್ರದೇಶ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಆದೇಶಿಸಿದೆ.

ಸಂತ್ರಸ್ತೆಯ ಕುಟುಂಬ ಮತ್ತು ಸಾಕ್ಷಿಗಳನ್ನು ಉತ್ತರ ಪ್ರದೇಶದಲ್ಲಿ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದ್ದು, ಸಾಮಾಜಿಕ-ಆರ್ಥಿಕವಾಗಿ ತಾತ್ಸಾರದಿಂದ ಕಾಣುತ್ತಿರುವುದರಿಂದ ತಮ್ಮನ್ನು ವಿಶೇಷವಾಗಿ ದೆಹಲಿಯಲ್ಲಿ ನೆಲೆಸಲು ಅವಕಾಶ ಮಾಡಿಕೊಡುವಂತೆ ಸಂತ್ರಸ್ತೆ ಕುಟುಂಬಸ್ಥರು ಕೋರಿದ್ದಾರೆ. ಇದರ ವಿಚಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್‌ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠವು ವಿಚಾರಣೆ ನಡೆಸಿತು.

ಯುವತಿಯ ಮೇಲೆ ಅತ್ಯಾಚಾರ ನಡೆಸಿದ ದುಷ್ಕರ್ಮಿಗಳು ಪ್ರಬಲ ಜಾತಿಗೆ ಸೇರಿದವರಾಗಿದ್ದಾರೆ. ತಾವು ಆರ್ಥಿಕ ಮತ್ತು ಸಾಮಾಜಿಕವಾಗಿ ಪ್ರಬಲ ಹಿನ್ನೆಲೆ ಹೊಂದಿಲ್ಲವಾದ್ದರಿಂದ ಸಾಮಾಜಿಕವಾಗಿ ಮತ್ತಷ್ಟು ಸಂಕೀರ್ಣ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಂತ್ರಸ್ತೆ ಕುಟುಂಬಸ್ಥರು ಅರ್ಜಿಯಲ್ಲಿ ವಿವರಿಸಿದ್ದಾರೆ.

2020ರ ಸೆಪ್ಟೆಂಬರ್‌ 14ರಂದು ಹಾಥ್‌ರಸ್‌ನಲ್ಲಿ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಚಾರ ನಡೆಸಿದ್ದ‌ ದುಷ್ಕರ್ಮಿಗಳು ಆಕೆಯ ಕೊಲೆಗೆ ಯತ್ನಿಸಿದ್ದರು. ಪೈಶಾಚಿಕ ಕೃತ್ಯದಿಂದ ತೀವ್ರ ಯಾತನೆ ಅನುಭವಿಸಿದ್ದ ಸಂತ್ರಸ್ತ ಯುವತಿಯು ದೆಹಲಿಯ ಸಫ್ದರ್‌ಜಂಗ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ದಳು.

ಶವವನ್ನು ಮಧ್ಯರಾತ್ರಿ ಆಕೆಯ ಊರಿಗೆ ಕೊಂಡೊಯ್ದಿದ್ದ ಉತ್ತರ ಪ್ರದೇಶ ಪೊಲೀಸರು ಮತ್ತು ಸ್ಥಳೀಯ ಆಡಳಿತವು ಆಕೆಯ ಕುಟುಂಬಸ್ಥರ ಗಮನಕ್ಕೆ ತರದೇ ಮತ್ತು ಅವರ ಒಪ್ಪಿಗೆ ಪಡೆಯದೇ ಶವ ಸಂಸ್ಕಾರ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯವು ಕಳೆದ ಮಾರ್ಚ್‌ನಲ್ಲಿ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿ, ಒಬ್ಬನನ್ನು ದೋಷಿ ಎಂದು ತೀರ್ಮಾನಿಸಿತ್ತು.

Kannada Bar & Bench
kannada.barandbench.com