ಹಾಥ್‌ರಸ್ ಘಟನೆ: ಪೊಲೀಸರ ವಿರುದ್ಧ ತನಿಖೆ ನಡೆಸಬೇಕೆಂದು ಕೋರಿ ನಿವೃತ್ತ ನ್ಯಾಯಾಂಗ ಅಧಿಕಾರಿ ‘ಸುಪ್ರೀಂ’ಗೆ

ಮೃತ ಸಂತ್ರಸ್ತೆಯ ದೇಹವನ್ನು ಕೀಳಾಗಿ ಮತ್ತು ಅಮಾನವೀಯವಾಗಿ ಅಂತ್ಯಕ್ರಿಯೆ ಮಾಡಿದ ಆರೋಪಗಳು ನಿಜವೆಂದು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ.
ಹಾಥ್‌ರಸ್
ಹಾಥ್‌ರಸ್
Published on

ಉತ್ತರಪ್ರದೇಶದ ಹಾಥ್‌ರಸ್ ಅತ್ಯಾಚಾರ ಪ್ರಕರಣದಲ್ಲಿ ದಲಿತ ಸಂತ್ರಸ್ತೆಯ ಬಲವಂತದ ಅಂತ್ಯಕ್ರಿಯೆಗೆ ಕಾರಣರಾದ ಜಿಲ್ಲಾಧಿಕಾರಿಗಳು ಮತ್ತು ಪೊಲೀಸರ ವಿರುದ್ಧ ತನಿಖೆ ನಡೆಸಬೇಕೆಂದು ಕೋರಿ ನಿವೃತ್ತ ನ್ಯಾಯಾಂಗ ಅಧಿಕಾರಿಯೊಬ್ಬರು ಸುಪ್ರೀಂಕೋರ್ಟಿನ ಮೊರೆ ಹೋಗಿದ್ದಾರೆ.

ರಾಜ್ಯ ಪೊಲೀಸರನ್ನು ಹೊರತುಪಡಿಸಿ ಬೇರೆಯವರು ಪ್ರಕರಣದ ವಿಚಾರಣೆ ನಡೆಸಬೇಕೆಂದು ಅವರು ಕೋರಿದ್ದಾರೆ. ಇದಲ್ಲದೆ, ಮೃತ ಸಂತ್ರಸ್ತೆಯ ಶವವನ್ನು ಕೀಳಾಗಿ ಮತ್ತು ಅಮಾನವೀಯವಾಗಿ ಅಂತ್ಯಕ್ರಿಯೆ ಮಾಡಿದ ಆರೋಪಗಳು ನಿಜವೆಂದು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

Also Read
ಹಾಥ್‌ರಸ್ ಪ್ರಕರಣ: ದಹನದ ದಿನ ಕರ್ತವ್ಯದಲ್ಲಿದ್ದ ಅಧಿಕಾರಿಗಳ ಖುದ್ದು ಹಾಜರಿಗೆ ಆಗ್ರಹಿಸಿ ಹೈಕೋರ್ಟ್‌ಗೆ ಪೂನಾವಾಲ ಪತ್ರ

ಅರ್ಜಿದಾರರಾದ ಚಂದ್ರ ಭಾನ್ ಸಿಂಗ್ ಅವರು ವಕೀಲ ಸ್ಮಾರ್ಹರ್ ಸಿಂಗ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರು ನಿವೃತ್ತ ನ್ಯಾಯಾಂಗ ಅಧಿಕಾರಿಯಾಗಿದ್ದು, ಅವರು 25 ವರ್ಷಗಳ ಕಾಲ ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಸೆಪ್ಟೆಂಬರ್ 14 ರಂದು ಹಾಥ್‌ರಸ್‌ನಲ್ಲಿ 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿತ್ತು. ತೀವ್ರವಾಗಿ ಗಾಯಗೊಂಡ ಆಕೆ ಸೆ. 29ರಂದು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆಕೆಯ ಮೃತದೇಹವನ್ನು ಅಂದು ರಾತ್ರಿ ಕುಟುಂಬದ ಒಪ್ಪಿಗೆಯಿಲ್ಲದಿದ್ದರೂ ಬಲವಂತವಾಗಿ ಅಂತ್ಯಕ್ರಿಯೆ ನಡೆಸಲಾಗಿತ್ತು.

Also Read
ಹಾಥ್‌ರಸ್ ಮಗಳಿಗೆ ನ್ಯಾಯ ಒದಗಿಸಲು ನನ್ನ ಹೋರಾಟ: ‘ನಿರ್ಭಯಾ’ ವಕೀಲೆ ಸೀಮಾ ಕುಶ್ವಾಹಾ

ಅರ್ಜಿಯಲ್ಲಿರುವ ಅಂಶಗಳು

  • ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು ಸಂತ್ರಸ್ತೆಯ ಕಳೇಬರದ ಮೇಲೆ ದರ್ಪದಿಂದ ದೌರ್ಜನ್ಯವೆಸಗಿದ್ದಾರೆ.

  • ಹಳ್ಳಿಯನ್ನು ‘ಆಡಳಿತದ ತಡೆಗೋಡೆ’ಯಿಂದ ಮುಚ್ಚಲಾಗಿತ್ತು.

  • ರೂಢಿ ಮತ್ತು ಸಂಪ್ರದಾಯದ ಮೂಲಕ ಮೃತ ಸಂತ್ರಸ್ತೆಯ ಕುಟುಂಬಕ್ಕೆ ಅಂತ್ಯಕ್ರಿಯೆ ನಡೆಸಲು ಅವಕಾಶ ಮಾಡಿಕೊಡದೆ ಸಂವಿಧಾನದ 25ನೇ ವಿಧಿಯನ್ನು ಉಲ್ಲಂಘಿಸಲಾಗಿದೆ.

  • ಸಂವಿಧಾನದ 21ನೇ ವಿಧಿ ಜೀವಿಸುವ ಹಕ್ಕಿನ ಕುರಿತು ಹೇಳುವಂತೆಯೇ ಘನತೆಯ ಸಾವಿನ ಬಗ್ಗೆಯೂ ಉಲ್ಲೇಖಿಸುತ್ತದೆ.

  • ಹಿಂದೂ ಧರ್ಮದ ವಿಧಿಗಳು ಸಾವನ್ನಪ್ಪಿದವರ ಕೊನೆಯ ವಿಧಿಗಳನ್ನು ತಡೆದವರು ‘ಪಾಪಿಗಳು' ಎಂದು ಹೇಳಿದರೆ, ಸುಪ್ರೀಂಕೋರ್ಟ್ 21ನೇ ವಿಧಿಯನ್ನು ಸತ್ತ ವ್ಯಕ್ತಿಯ ದೇಹಕ್ಕೂ ವಿಸ್ತರಿಸಿದೆ.

  • ಅಂತೆಯೇ ಮೃತ ಸಂತ್ರಸ್ತೆಗೆ ಕೊನೆಯ ವಿಧಿವಿಧಾನಗಳನ್ನು ಪೂರೈಸಲು ಅವಕಾಶ ಕೊಡದಂತೆ ತಡೆದ ಅಧಿಕಾರಿಗಳನ್ನು ತನಿಖೆಗೊಳಪಡಿಸಿ ಶಿಕ್ಷಿಸಬೇಕು.

ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ಪರಿಗಣನೆಗೆ ತೆಗೆದುಕೊಂಡಿದ್ದು ಸಾಮಾಜಿಕ ಕಾರ್ಯಕರ್ತರಾದ ಸಾಖೇತ್ ಗೋಖಲೆ, ತೆಹ್ಸೀನ್ ಪೂನಾವಾಲಾ ಅವರು ಕೂಡ ಇದೇ ಬಗೆಯ ಅರ್ಜಿಗಳನ್ನು ಸಲ್ಲಿಸಿದ್ದಾರೆ.

Kannada Bar & Bench
kannada.barandbench.com