ಹಾಥ್‌ರಸ್: ಸರಾಗ ತನಿಖೆಯ ಖಾತರಿ ನೀಡಿದ ಸುಪ್ರೀಂ; ಸಾಕ್ಷಿ, ಸಂತ್ರಸ್ತೆ ಕುಟುಂಬಸ್ಥರ ವಕೀಲರ ಮಾಹಿತಿ ಕೇಳಿದ ಪೀಠ

ಹಾಥ್‌ರಸ್ ಪ್ರಕರಣವನ್ನು ತಾವು ಪ್ರತಿಕೂಲ ದಾವೆ ಎಂದು ಪರಿಗಣಿಸಲು ಸಿದ್ಧವಿಲ್ಲ ಎಂದು ರಾಜ್ಯ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದ್ದಾರೆ. ಪ್ರಕರಣವನ್ನು ಭಾವೋದ್ರೇಕಗೊಳಿಸದಂತೆ ಮನವಿ ಮಾಡಿದ್ದಾರೆ.
Hathras
Hathras
Published on

ಹಾಥ್‌ರಸ್ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆ ನಡೆಸುವಂತೆ ಕೋರಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದಿನ ವಾರಕ್ಕೆ ಮುಂದೂಡಿದ್ದು, ಸರಾಗವಾಗಿ ತನಿಖೆ ನಡೆಯುವುದಕ್ಕೆ ಅಗತ್ಯವಾದ ಎಲ್ಲಾ ಕ್ರಮಕೈಗೊಳ್ಳುವುದಾಗಿ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ತ್ರಿಸದಸ್ಯ ಪೀಠವು ಸಾಕ್ಷಿಗಳಿಗೆ ಒದಗಿಸಿರುವ ಭದ್ರತೆಯ ವಿವರ, ತಮ್ಮನ್ನು ಪ್ರತಿನಿಧಿಸಲು ಸಂತ್ರಸ್ತೆಯ ಕುಟುಂಬಸ್ಥರು ವಕೀಲರನ್ನು ನೇಮಿಸಿಕೊಂಡಿದ್ದಾರೆಯೇ, ಇಲ್ಲವೇ ಎನ್ನುವುದರ ಕುರಿತು ಅಫಿಡವಿಟ್ ಸಲ್ಲಿಸುವಂತೆ ಉತ್ತರ ಪ್ರದೇಶಕ್ಕೆ ಸೂಚಿಸಿದೆ.

ಅಲಹಾಬಾದ್ ಹೈಕೋರ್ಟ್‌ನ ಮುಂದಿರುವ ವಿಚಾರಣೆಯ ವ್ಯಾಪ್ತಿಯನ್ನು ವಿಸ್ತರಿಸುವುದಕ್ಕೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡುವಂತೆ ನ್ಯಾಯಾಲಯ ತಿಳಿಸಿದೆ. ಉತ್ತರ ಪ್ರದೇಶ ಸರ್ಕಾರ ಪ್ರತಿನಿಧಿಸುತ್ತಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಅರ್ಜಿಗೆ ತಮ್ಮ ವಿರೋಧವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

“ಹಲವು ವಿಧದ ಸಂಕಥನ ಮತ್ತು ಸಂಕಥನಗಳಿವೆ. ಯುವತಿ ಪ್ರಾಣ ಕಳೆದುಕೊಂಡಿರುವುದು ಕಹಿ ಸತ್ಯ” ಎಂದು ಮೆಹ್ತಾ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ನಿಗಾವಣೆಯಲ್ಲಿ ಸ್ವತಂತ್ರ ಮತ್ತು ನ್ಯಾಯಯುತ ವಿಚಾರಣೆ ನಡೆಯಬೇಕು ಎಂದು ಮೆಹ್ತಾ ಮನವಿ ಮಾಡಿದ್ದಾರೆ.

ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು ಸಂತ್ರಸ್ತೆಯ ಕುಟುಂಬದ ಸಾಕ್ಷಿಗಳಿಗೆ ಭದ್ರತೆ ಒದಗಿಸುವಂತೆ ಮತ್ತು ವಿಚಾರಣೆಯನ್ನು ವರ್ಗಾವಣೆ ಮಾಡುವಂತೆ ಕೋರಿದ್ದಾರೆ. ಸದರಿ ಪ್ರಕರಣದಲ್ಲಿ ಬೇರಾವುದೇ ವಕೀಲರ ವಿಜ್ಞಾಪನೆಗೆ ಅವಕಾಶ ಮಾಡಿಕೊಡಬಾರದು ಎಂದು ಅವರು ಕೋರಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರು “ನೀವು ವಿಚಾರಣೆ ವರ್ಗಾವಣೆ ಕೋರುತ್ತಿದ್ದೀರೋ ಅಥವಾ ತನಿಖೆಯ ವರ್ಗಾವಣೆ ಕೋರುತ್ತಿದ್ದೀರೋ? ಪ್ರಕರಣವು ಅಸಾಧಾರಣ ಮತ್ತು ಆಘಾತಕಾರಿಯಾಗಿರುವುದರಿಂದ ನಾವು ನಿಮ್ಮ ವಾದವನ್ನು ಆಲಿಸುತ್ತಿದ್ದೇವೆ, ಇಲ್ಲವಾದಲ್ಲಿ ಈ ಕ್ರಿಮಿನಲ್ ಪ್ರಕರಣದಲ್ಲಿ ನಿಮಗೆ ಸ್ಥಾನ ಇರುತ್ತಿದ್ದರ ಬಗ್ಗೆ ನಮಗೆ ಅನುಮಾನವಿದೆ” ಎಂದು ಹೇಳಿದರು.

ಜೈಸಿಂಗ್ ಅವರ ಸಲಹೆಗೆ ಮೆಚ್ಚುಗೆ ವ್ಯಕ್ತಪಡಿಸಿದ ನ್ಯಾಯಾಲಯವು ಅಂಗೀಕೃತ ಸ್ಥಾನದ ಬಗೆಗಿನ ಪ್ರಶ್ನೆಯ ಕುರಿತು ಅರ್ಜಿದಾರರ ವಾದ ಆಲಿಸಲು ಬಯಸಿರುವುದಾಗಿ ಹೇಳಿತು. ನಿವೃತ್ತ ನ್ಯಾಯಮೂರ್ತಿಯೂ ಆದ ಅರ್ಜಿದಾರರನ್ನು ವಕೀಲ ಪ್ರದೀಪ್ ಕುಮಾರ್ ಯಾದವ್ ಅವರು ಪ್ರತಿನಿಧಿಸಿದ್ದಾರೆ.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕೀರ್ತಿ ಸಿಂಗ್, ಸಂತ್ರಸ್ತೆಯ ಕುಟುಂಬಸ್ಥರಿಗೆ ಭದ್ರತೆ ಒದಗಿಸುವ ಕುರಿತು ಹಲವು ಮಹಿಳೆಯರ ಪರವಾಗಿ ಪತ್ರ ಬರೆಯಲಾಗಿದೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು.

ಎಲ್ಲರೂ ಆತಂಕಗಳನ್ನು ನಕಲು ಮಾಡದಂತೆ ಮನವಿ ಮಾಡಿದ ಸಿಜೆ ಬೊಬ್ಡೆ ಅವರು “ನಾವು ಯಾವುದೇ ಕಾರಣಕ್ಕೂ ಪ್ರಕರಣವನ್ನು ಮಾಫಿ ಮಾಡುತ್ತೇವೆ ಎಂದು ಅರ್ಥವಲ್ಲ. ಇದೊಂದು ಭಯಾನಕ ಘಟನೆಯಾಗಿದ್ದು, ಎಲ್ಲರೂ ಒಂದೇ ವಾದ ಮಂಡಿಸುವುದನ್ನು ಕೇಳಲು ನ್ಯಾಯಾಲಯ ಬಯಸುವುದಿಲ್ಲ. ಇದು ಪ್ರಕರಣದ ಮೇಲಿನ ಪ್ರತಿಕ್ರಿಯೆಯಲ್ಲ. ನಮ್ಮ ದೃಷ್ಟಿಕೋನವನ್ನು ದಯವಿಟ್ಟು ಅರ್ಥಮಾಡಿಕೊಳ್ಳಬೇಕು” ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಂಗ್ ಅವರು ನ್ಯಾಯಾಲಯದ ಮುಂದೆ ಪತ್ರವನ್ನು ವಿಚಾರಣೆಗೆ ಮಂಡಿಸಬೇಕು ಎಂದು ಮನವಿ ಮಾಡಿದರು. ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿರುವ ಅಲಹಾಬಾದ್ ಹೈಕೋರ್ಟ್ ಅನ್ನು ತಾವು ಏಕೆ ಸಂಪರ್ಕಿಸಿಲ್ಲ ಎಂದು ಸಿಂಗ್ ಅವರನ್ನು ಸಿಜೆಐ ಬೊಬ್ಡೆ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಂಗ್ ಅವರು ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ವರ್ಗಾಯಿಸಲಾಗಿದೆ ಎಂದರು. ಇದಕ್ಕೆ ಸಿಜೆ ಬೊಬ್ಡೆ ಅವರು “ಹೌದು, ನಮಗೆ ಅರ್ಥವಾಗುತ್ತದೆ. ಆದರೆ, ಸಾಂವಿಧಾನಿಕ ನ್ಯಾಯಾಲಯವಾದ ಅಲಹಾಬಾದ್ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿಚಾರದ ವಿಚಾರಣೆ ನಡೆಸುತ್ತಿದೆ” ಎಂದರು.

ಸಾಕ್ಷಿಗಳ ಸಂರಕ್ಷಣೆಗೆ ಜೈಸಿಂಗ್ ಅವರು ಒತ್ತಾಯಿಸಿದಾಗ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಾಕ್ಷಿಗಳಿಗೆ ಈಗಾಗಲೇ ಭದ್ರತೆ ಒದಗಿಸಲಾಗಿದೆ ಎಂದರು. ಆ ಬಳಿಕ ಸಾಕ್ಷಿಗಳಿಗೆ ನೀಡಲಾಗಿರುವ ಭದ್ರತೆಯ ಬಗ್ಗೆ, ಸಂತ್ರಸ್ತೆಯ ಕುಟುಂಬ ಸದಸ್ಯರು ವಕೀಲರನ್ನು ಆಯ್ಕೆ ಮಾಡಿಕೊಂಡಿದ್ದಾರೆಯೇ ಎನ್ನುವ ಬಗ್ಗೆ ಸಿಜೆಐ ಬೊಬ್ಡೆ ಪ್ರಶ್ನಿಸಿದರು. “ಅಲಹಾಬಾದ್ ಹೈಕೋರ್ಟ್‌ನ ಸದ್ಯದ‌ ವಿಚಾರಣಾ ವ್ಯಾಪ್ತಿಯ ಬಗ್ಗೆ ನಿಮ್ಮಿಂದ ಆಲಿಸಲು ನ್ಯಾಯಪೀಠ ಬಯಸುತ್ತದೆ. ಹೈಕೋರ್ಟ್ ಮುಂದಿರುವ ವಿಚಾರಣಾ ವ್ಯಾಪ್ತಿಯನ್ನು ವಿಸ್ತರಿಸುವ ಕುರಿತು ನೀವು ಸಲಹೆಗಳನ್ನು ನೀಡಬೇಕು” ಎಂದಿತು.

ಎಸ್ ಜಿ ಮೆಹ್ತಾ ಅವರು ಈ ಪ್ರಕರಣವನ್ನು ವಿರೋಧಿ ದಾವೆ ಎಂದು ಪರಿಗಣಿಸುವುದಿಲ್ಲ ಎಂದು ಹೇಳಿರುವುದರಿಂದ ಪಕ್ಷಕಾರರು ಕಾನೂನು ಅಧಿಕಾರಿಗೆ ಸಲಹೆಗಳನ್ನು ನೀಡಬಹುದು ಎಂದು ನ್ಯಾಯಪೀಠ ಹೇಳಿತು. ಇದಕ್ಕೆ ಮೆಹ್ತಾ ಅವರು, "ಸಂಬಂಧಿಸಿದ ಎಲ್ಲರೂ ಈ ದುರದೃಷ್ಟಕರ ಪ್ರಕರಣವನ್ನು ನ್ಯಾಯಾಲಯದ ಹೊರಗೆ ಭಾವೋದ್ವೇಗಕ್ಕೆ ಒಳಪಡಿಸುವುದಿಲ್ಲ ಎಂದು ಭರವಸೆ ಹೊಂದಿದ್ದೇನೆ” ಎಂದರು.

ಹಾಥ್‌ರಸ್ ಭಯಾನಕ ಘಟನೆಯ ಬಳಿಕ ಪೊಲೀಸರು ಮತ್ತು ಜಿಲ್ಲಾಧಿಕಾರ ವಿರುದ್ಧ ತನಿಖೆ ನಡೆಸುವಂತೆ ಕೋರಿ ನಿವೃತ್ತ ನ್ಯಾಯಾಂಗ ಅಧಿಕಾರಿಯೊಬ್ಬರು ಸುಪ್ರೀಂ ಕೋರ್ಟ್ ಕದತಟ್ಟಿದ್ದು, ಬಲವಂತವಾಗಿ ದಲಿತ ಯುವತಿಯ ಕಳೇಬರವನ್ನು ನಡುರಾತ್ರಿಯಲ್ಲಿ ದಹಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.

ಅರ್ಜಿದಾರರಾದ ಚಂದ್ರ ಭಾನ್ ಸಿಂಗ್ ಅವರು ನಿವೃತ್ತ ನ್ಯಾಯಿಕ ಅಧಿಕಾರಿಯಾಗಿದ್ದು, 25 ವರ್ಷಗಳ ಕಾಲ ನ್ಯಾಯಾಂಗ ವ್ಯವಸ್ಥೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ರಾಜ್ಯ ಪೊಲೀಸರನ್ನು ಹೊರತುಪಡಿಸಿ ತನಿಖೆ ನಡೆಸುವಂತೆ ಮನವಿಯಲ್ಲಿ ಕೋರಲಾಗಿದ್ದು, ಘನತೆ ಕುಂದಿಸುವ ಮತ್ತು ಸಂತ್ರಸ್ತೆಯ ಕಳೇಬರವನ್ನು ಅಮಾನವೀಯವಾಗಿ ದಹಿಸಿದ ಆರೋಪ ಸತ್ಯವಾಗಿದ್ದರೆ ಸಂಬಂಧಿತ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಕೋರಿದ್ದಾರೆ.

Also Read
ಹಾಥ್‌ರಸ್‌ ಅತ್ಯಾಚಾರ: ಸುಳ್ಳು ಸಂಕಥನ ನಿವಾರಣೆಗೆ ಸಿಬಿಐಗೆ ಪ್ರಕರಣದ ವಿಚಾರಣೆ; ಸುಪ್ರೀಂಗೆ ಯುಪಿ ಸರ್ಕಾರದ ಅಫಿಡವಿಟ್

ಸಂವಿಧಾನದ ಪರಿಚ್ಛೇದ 25ರ ಪ್ರಕಾರ ಸಂಪ್ರದಾಯ ಬದ್ಧವಾಗಿ ಮೃತ ವ್ಯಕ್ತಿಯ ಅಂತ್ಯಸಂಸ್ಕಾರ ಮಾಡುವ ಕುಟುಂಬಸ್ಥರ ಹಕ್ಕನ್ನು ಉಲ್ಲಂಘಿಸಲಾಗಿದೆ. ಪರಿಚ್ಛೇದ 21ರ ಅಡಿ ವ್ಯಕ್ತಿಗೆ ಜೀವಿಸುವ ಹಕ್ಕು ಖಾತರಿಯಾಗಿರುವಂತೆ ಸಾವನ್ನಪ್ಪಿದಾಗ ಘನತೆಯಿಂದ ಸಾಯುವ ಹಕ್ಕೂ ಸೇರ್ಪಡೆಯಾಗಿರುತ್ತದೆ ಎಂದಿದ್ದಾರೆ.

ಹಾಥ್‌ರಸ್‌ನಲ್ಲಿ ಸೆಪ್ಟೆಂಬರ್ 14ರಂದು 19 ವರ್ಷದ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಆಕೆಯನ್ನು ಗಂಭೀರವಾಗಿ ಗಾಯಗೊಳಿಸಲಾಗಿತ್ತು. ಸೆಪ್ಟೆಂಬರ್ 29 ಸಂತ್ರಸ್ತೆ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಸಂತ್ರಸ್ತೆಯ ಶವ ಸಂಸ್ಕಾರವನ್ನು ಆಕೆಯ ಕುಟುಂಬದ ಅನುಮತಿ ಪಡೆಯದೇ ಮತ್ತು ಬಲವಂತವಾಗಿ ಕುಟುಂಬಸ್ಥರ ಅನುಪಸ್ಥಿತಿಯಲ್ಲಿ ಮಧ್ಯರಾತ್ರಿ ಪೊಲೀಸರು ಮತ್ತು ಜಿಲ್ಲಾಡಳಿತ ನಡೆಸಿತ್ತು. ಘಟನೆಗೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಅಕ್ಟೋಬರ್ 12ಕ್ಕೆ ವಿಚಾರಣೆ ನಡೆಸಲಿದೆ.

Kannada Bar & Bench
kannada.barandbench.com