ಹಾಥ್‌ರಸ್ ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಅವರ ಸ್ವಂತ ಮನೆಯಲ್ಲಿ ಕಾನೂನು ಬಾಹಿರವಾಗಿ ಉತ್ತರ ಪ್ರದೇಶ ಆಡಳಿತಶಾಹಿ ಹಿಡಿದಿಟ್ಟಿದೆ ಎಂದು ಯುವತಿಯ ಪೋಷಕರು ಆರೋಪಿಸಿರುವುದರಿಂದ ಅವರನ್ನು ಬಿಡುಗಡೆ ಮಾಡಲು ನಿರ್ದೇಶಿಸುವಂತೆ ಕೋರಿ ಅಲಾಹಾಬಾದ್ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಮನವಿ ಸಲ್ಲಿಸಲಾಗಿದೆ.
ಪೈಶಾಚಿಕ ಕೃತ್ಯಕ್ಕೆ ಬಲಿಯಾದ 19 ವರ್ಷದ ದಲಿತ ಯುವತಿಯು ತನ್ನ ಮೇಲೆ ಮೇಲ್ಜಾತಿಯ ಪುರುಷರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಳು. ಸಂತ್ರಸ್ತೆಯ ಶವವನ್ನು ಆಕೆಯ ಕುಟುಂಬಸ್ಥರಿಗೆ ನೀಡಲಾಗಿಲ್ಲ ಮತ್ತು ತಮ್ಮ ಹೊಲದ ಮನೆಯಲ್ಲಿ ಬಲವಂತವಾಗಿ ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಕೂಡಿಹಾಕಲಾಗಿದ್ದು, ಇದುವರೆಗೂ ಅವರು ಅಲ್ಲಿಯೇ ಇದ್ದಾರೆ.
ವಕೀಲರಾದ ಮೆಹಮೂದ್ ಪ್ರಾಚ, ಎಸ್ ಕೆ ಎ ರಿಜ್ವಿ ಮತ್ತು ಜೌನ್ ಅಬ್ಬಾಸ್ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದ್ದು, ಹೈಕೋರ್ಟ್ ಮುಂದೆ ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಹಾಜರುಪಡಿಸುವವರೆಗೆ ಅವರಿಗೆ ರಕ್ಷಣೆ ಮತ್ತು ಭದ್ರತೆ ನೀಡಲು ನಿರ್ದೇಶಿಸಬೇಕು ಎಂದು ಮನವಿ ಮಾಡಲಾಗಿದೆ. ಅಕ್ಟೋಬರ್ 12ರಂದು ಯುವತಿಯ ಕುಟುಂಬ ಸದಸ್ಯರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಅಲಾಹಾಬಾದ್ ಹೈಕೋರ್ಟ್ ಸೂಚಿಸಿದೆ.
ಅಖಿಲ ಭಾರತೀಯ ವಾಲ್ಮೀಕಿ ಮಹಾಪಂಚಾಯತ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕುಮಾರ್ ಅವರು ದೂರವಾಣಿ ಮೂಲಕ ಕುಟುಂಬ ಸದಸ್ಯರ ಜೊತೆ ಸಮಾಲೋಚನೆ ನಡೆಸಿದ್ದು, ಅವರ ಪರವಾಗಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ಸಂತ್ರಸ್ತೆಯ ಕುಟುಂಬಸ್ಥರನ್ನು ತಮ್ಮದೇ ಮನೆಯಲ್ಲಿ ಒತ್ತೆ ಇಡಲಾಗಿದೆ. ತಮ್ಮ ರಕ್ಷಣೆ ಹಾಗೂ ಸಂತ್ರಸ್ತೆಯ ಮೇಲಿನ ಪೈಶಾಚಿಕ ದಾಳಿಯ ತನಿಖೆಯ ಸಮಗ್ರತೆ ದೃಷ್ಟಿಯಿಂದ ತಮಗೆ ಇಷ್ಟಬಂದ ಜಾಗಕ್ಕೆ ತೆರಳಿ ನೆಲೆಸುವ ಅವಕಾಶವನ್ನು ಅವರಿಗೆ ನೀಡಲಾಗಿಲ್ಲ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ವಿವರಿಸಿದ್ದಾರೆ.
ಯುವತಿಯ ಮೇಲಿನ ಪೈಶಾಚಿಕ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ನಡೆದ ಹಾಥ್‌ರಸ್ ಜಿಲ್ಲೆಯಲ್ಲಿ ಸಾಂವಿಧಾನಿಕ ವ್ಯವಸ್ಥೆ ಕುಸಿದು ಬಿದ್ದಿದೆ. ಸಂತ್ರಸ್ತೆಯ ಮರಣದ ಬಳಿಕ ಆಕೆ ಮತ್ತು ಅವರ ಕುಟುಂಬ ಸದಸ್ಯರನ್ನು ಕಾನೂನು ಬಾಹಿರವಾಗಿ ಮತ್ತು ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳಲಾಗಿದೆ. ಯುವತಿಯ ಸಾವಿನ ಬಳಿಕ ಅವರ ಕುಟುಂಬಸ್ಥರು ನೆಲೆಸಿರುವ ಸ್ಥಳಕ್ಕೆ ಘೇರಾವ್ ಹಾಕಲಾಗಿದ್ದು, ಆರಂಭದಲ್ಲಿ ಅವರ ಮೊಬೈಲ್‌ಗಳನ್ನು ಕಸಿದುಕೊಳ್ಳಲಾಗಿತ್ತು ಎಂದು ವಿವರಿಸಲಾಗಿದೆ.
“ತನ್ನ ದುಷ್ಕೃತ್ಯದ ಭಾಗವಾಗಿ ಜಿಲ್ಲಾಡಳಿತವು ಹಾಥ್‌ರಸ್ ಜಿಲ್ಲಾದ್ಯಂತ ದಿಗ್ಭಂದನ ಹಾಕಿದ್ದು, ಅಲ್ಲಿಗೆ ತೆರಳಲು ಬಯಸುವವರನ್ನು ಕಾನೂನು ಬಾಹಿರವಾಗಿ ನಿರ್ಬಂಧಿಸಲಾಗುತ್ತಿದೆ. ಕಾನೂನು ಬಾಹಿರ ಶಕ್ತಿಗಳು ಮತ್ತು ಕ್ರಮಗಳ ಮೂಲಕ ಅಲ್ಲಿಗೆ ತೆರಳುವವರನ್ನು ತಡೆಯಲಾಗುತ್ತಿದೆ” ಎಂದು ಹೇಳಲಾಗಿದೆ.
ಸಂತ್ರಸ್ತೆಯ ಕುಟುಂಬ ಸದಸ್ಯರು ಮುಕ್ತವಾಗಿ ಸಂದಿಸಲು ಮತ್ತು ಸಂವಹನ ನಡೆಸಲು ನಿರ್ಬಂಧಿಸಲಾಗುತ್ತಿದೆ. ಈ ಮೂಲಕ ಅವರ ಮೂಲಭೂತ ಹಕ್ಕಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುವುದರ ಜೊತೆಗೆ ಮಾಹಿತಿ ಸ್ವೀಕರಿಸುವ ಹಕ್ಕಿಗೂ ತಡೆಯೊಡ್ಡಲಾಗುತ್ತಿದೆ ಎಂದು ಹೇಳಲಾಗಿದೆ.
ಕಾನೂನುಬಾಹಿರ ಒತ್ತೆಯಿಂದ ತಮ್ಮನ್ನು ಮುಕ್ತಗೊಳಿಸಲು ನಿರ್ದೇಶಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಿರುವ ಸಂತ್ರಸ್ತೆಯ ಕುಟುಂಬ ಸದಸ್ಯರು, ರಾಜ್ಯ ಸರ್ಕಾರದ ಕ್ರಮವು ಸಂವಿಧಾನಾತ್ಮಕವಾಗಿ ದೊರೆತಿರುವ ಮೂಲಭೂತ ಹಕ್ಕುಗಳು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆಗಟ್ಟುವಿಕೆ) ಕಾಯಿದೆ-1989ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದೂ ಹೇಳಿದ್ದಾರೆ.
ಸಂತ್ರಸ್ತೆಯ ಕುಟುಂಬ ಸದಸ್ಯರು ತಮ್ಮ ಪುತ್ರಿಯ ಮೇಲಿನ ಪೈಶಾಚಿಕ ಕೃತ್ಯಕ್ಕೆ ಕಾನೂನಾತ್ಮಕ ಪರಿಹಾರ ಕಂಡುಕೊಳ್ಳಲು ದೆಹಲಿಗೆ ತೆರಳ ಬಯಸಿದ್ದಾರೆ. ವಾಲ್ಮೀಕಿ ಸಮಿತಿಗೆ ನೆರವು ನೀಡುವ ಅಖಿಲ ಭಾರತೀಯ ವಾಲ್ಮೀಕಿ ಮಹಾಪಂಚಾಯತ್ ಸಂತ್ರಸ್ತೆಯ ಕುಟುಂಬಸ್ಥರಿಗೆ ದೆಹಲಿಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡುವುದಾಗಿ ಹೇಳಿದೆ. ರಾಜ್ಯ ಸರ್ಕಾರದ ಸಂಸ್ಥೆಗಳು, ಹಿತಾಸಕ್ತಿ ಗುಂಪುಗಳು ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಬಲವಂತ, ಬೆದರಿಕೆ ಮತ್ತು ಪ್ರಚೋದನೆಗೆ ಗುರಿಯಾಗಿಸಿಕೊಂಡಿವೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.