ಆಮ್ಲಜನಕ ಪೂರೈಕೆಗೆ ಸಂಬಂಧಿಸಿದ ಆದೇಶಗಳನ್ನು ಪಾಲಿಸದೇ ಇರುವುದಕ್ಕಾಗಿ ನ್ಯಾಯಾಂಗ ನಿಂದನೆ ಕ್ರಮ ಜರುಗಿಸುವ ಸಂಬಂಧ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನೀಡಿದ್ದ ಶೋ ಕಾಸ್ ನೋಟಿಸ್‌ಗೆ ಸುಪ್ರೀಂಕೋರ್ಟ್ ಬುಧವಾರ ತಡೆ ನೀಡಿದೆ. ನ್ಯಾಯಾಂಗ ನಿಂದನೆ ಕ್ರಮ ಜರುಗಿಸುವುದರಿಂದ ಆಮ್ಲಜನಕ ಬಿಕ್ಕಟ್ಟು ಪರಿಹಾರವಾಗುವುದಿಲ್ಲ ಎಂದು ಅದು ಅಭಿಪ್ರಾಯಪಟ್ಟಿದೆ.
ನ್ಯಾಯಾಂಗ ನಿಂದನೆ ಕ್ರಮ ಜರುಗಿಸುವುದರಿಂದ ದೆಹಲಿಯ ಸಮಸ್ಯೆಗೆ ಪರಿಹಾರ ದೊರೆಯುವುದಿಲ್ಲ. ದೇಶ ಮಾನವ ಹಿತಕ್ಕೆ ಸಂಬಂಧಿಸಿದ ಬಿಕ್ಕಟ್ಟು ಎದುರಿಸುತ್ತಿರುವಾಗ ನ್ಯಾಯಾಲಯ ಸಮಸ್ಯೆ ಬಗೆಹರಿಸುವ ಗುರಿ ಇರಿಸಿಕೊಳ್ಳಬೇಕು ಎಂದು ಪೀಠ ಹೇಳಿದೆ.
ಸರ್ಕಾರಿ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಲು ಸದ್ಯಕ್ಕೆ ಯಾವುದೇ ಕಾರಣಗಳು ಇಲ್ಲ ಎಂದಿರುವ ಸುಪ್ರಿಂಕೋರ್ಟ್ ಗುರುವಾರ ಬೆಳಿಗ್ಗೆ 10.30ರ ವೇಳೆಗೆ 700 ಮೆಟ್ರಿಕ್ ಟನ್ ಆಮ್ಲಜನಕ ಗುರಿ ಸಾಧಿಸುವ ಸಂಬಂಧ ಯೋಜನೆ ಸಿದ್ಧಪಡಿಸುವಂತೆ ಕೇಂದ್ರಕ್ಕೆ ಸೂಚಿಸಿತು.
ನ್ಯಾಯಾಂಗ ನಿಂದನೆ ಕ್ರಮಕ್ಕೆ ಸಂಬಂಧಿಸಿದ ಆದೇಶವನ್ನು ತಡೆಹಿಡಿದಿದ್ದರೂ ಕೋವಿಡ್ ಸಂಬಂಧಿತ ಬೇರೆ ವಿಚಾರಗಳಲ್ಲಿ ದೆಹಲಿ ಹೈಕೋರ್ಟ್ ನಡೆಸುತ್ತಿರುವ ಮೇಲ್ವಿಚಾರಣೆಗೆ ನಿರ್ಬಂಧ ವಿಧಿಸುವುದಿಲ್ಲ ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿತು.
ಬುಧವಾರ ಬೆಳಿಗ್ಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರ ಬಳಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರಕರಣವನ್ನು ಪ್ರಸ್ತಾಪಿಸಿದ ಬಳಿಕ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎಂ ಆರ್ ಶಾ ಅವರಿದ್ದ ಪೀಠ ಪ್ರಕರಣವನ್ನು ಆಲಿಸಿತು.
ಇದೇ ವೇಳೆ ನ್ಯಾಯಾಲಯ ದೆಹಲಿಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಮುಂಬೈಯಲ್ಲಿ ಸಾಂಕ್ರಾಮಿಕ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿರುವ ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಆಯುಕ್ತ ಇಕ್ಬಾಲ್ ಸಿಂಗ್ ಚಾಹಲ್ ಅವರೊಂದಿಗೆ ಸಭೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.
“ಈ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ದೆಹಲಿಯಲ್ಲಿ 700 ಮೆ. ಟನ್ ಆಮ್ಲಜನಕ ಸಂಗ್ರಹ ಇರಬೇಕು. ಮಧ್ಯರಾತ್ರಿಯವರೆಗೆ ನೀವು ಎಷ್ಟು ಸಂಗ್ರಹಿಸಬಲ್ಲಿರಿ ಎಂಬುದನ್ನು ಬುಧವಾರ ಮಧ್ಯಾಹ್ನ ಮೂರು ಗಂಟೆಯ ಒಳಗೆ ತಿಳಿಸಬೇಕು. ಸಾಧ್ಯವಾದಷ್ಟು 700 ಮೆ. ಟನ್ ಆಮ್ಲಜನಕ ಪೂರೈಸಬೇಕು. 550 ಮೆ. ಟನ್ ಇದೆ ಎನ್ನಬಾರದು” ಎಂದು ಸ್ಪಷ್ಟವಾಗಿ ತಿಳಿಸಿತು. ಅಲ್ಲದೆ, 700 ಮೆಟ್ರಿಕ್ ಟನ್ ಆಮ್ಲಜನಕದ ಗುರಿಯನ್ನು ಹೇಗೆ ಸಾಧಿಸಲಾಗುತ್ತದೆ ಎನ್ನುವ ಯೋಜನೆಯನ್ನು ಗುರುವಾರ 10:30ಕ್ಕೆ ತಮ್ಮ ಮುಂದೆ ಇರಿಸಬೇಕೆಂದು ಪೀಠ ಹೇಳಿತು.
ಕೇಂದ್ರ ಅಥವಾ ರಾಜ್ಯ ಸರ್ಕಾರಗಳನ್ನು ದೂಷಿಸಲು ನ್ಯಾಯಾಲಯ ನಿಂತಿಲ್ಲವಾದರೂ ಕೇಂದ್ರ ಸರ್ಕಾರ ಆಮ್ಲಜನಕ ಪೂರೈಕೆ ಕುರಿತಂತೆ ಮರುಪರಿಶೀಲನೆ ಸೂತ್ರದ ಬಗ್ಗೆ ಗಮನಹರಿಸುವುದು ಅವಶ್ಯಕ. ಆಮ್ಲಜನಕ ಎಲ್ಲಿಂದ ಪೂರೈಕೆಯಾಗುತ್ತಿದೆ ಎಂಬ ಬಗ್ಗೆ ಮುಂಚಿತವಾಗಿ ತೋರಿಸಬೇಕು ಎಂದು ಅದು ಕೇಳಿತು.
ಒಂದೊಂದು ರಾಜ್ಯದಲ್ಲಿ ಒಂದೊಂದು ಬಾರಿ ರೋಗ ಪರಾಕಾಷ್ಠೆಗೆ ತಲುಪುತ್ತಿದ್ದು ಸಾಮಾನ್ಯವಾದ ಲೆಕ್ಕಾಚಾರ ನಡೆಯುವುದಿಲ್ಲ. ಜನ ಆಮ್ಲಜನಕಕ್ಕಾಗಿ ಅಲೆದಾಡುತ್ತಿದ್ದಾರೆ. ದೆಹಲಿಯಲ್ಲಿ ಟ್ಯಾಂಕರ್‌ನಲ್ಲಿ ಆಮ್ಲಜನಕ ಸರಬರಾಜಾಗುತ್ತಿದೆ ಎಂದು ಸ್ಪಷ್ಟವಾಗಬೇಕು ಎಂದಿತು.
ವಿಚಾರಣೆ ವೇಳೆ ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೇಂದ್ರ ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪಿಯೂಷ್ ಗೋಯಲ್ ಅವರ ವಿಚಾರಗಳನ್ನು ಆಲಿಸಿದ ನ್ಯಾಯಾಲಯ ಅಂತಿಮವಾಗಿ, ವಕೀಲರು ವಾದ ಮಂಡನೆ ವೇಳೆ ತಿಳಿಸಿದಂತೆ ದೆಹಲಿಗೆ ಆಮ್ಲಜನಕದ ಪೂರೈಕೆಯ ವಿವರಗಳನ್ನು ದಾಖಲಿಸುವ ಆದೇಶವನ್ನು ಜಾರಿಗೊಳಿಸಿತು. ದೇಶದಲ್ಲಿ ದ್ರವೀಕೃತ ವೈದ್ಯಕೀಯ ಆಮ್ಲಜನಕ ದಾಸ್ತಾನು ಹೆಚ್ಚಿಸಲು ಹಂತಹಂತವಾಗಿ ಕೇಂದ್ರ ಸರ್ಕಾರ ಪ್ರಯತ್ನಿಸಿದೆ ಮತ್ತು ವಿತರಣೆಗಾಗಿ 9000 ಮೆ.ಟನ್ ಆಮ್ಲಜನಕ ಲಭ್ಯವಿದೆ ಎಂಬ ಅಂಶವನ್ನು ಅದು ಗಣನೆಗೆ ತೆಗೆದುಕೊಂಡಿತು.
ವಿಚಾರಣೆಯ ವೇಳೆ ಮುಂಬೈನಲ್ಲಿ 92 ಸಾವಿರಕ್ಕೂ ಹೆಚ್ಚು ಸಕ್ರಿಯ ಕೇಸ್‌ಗಳು ಇದ್ದ ಸಮಯದಲ್ಲಿಯೂ ಬೃಹನ್ಮುಂಬೈ ಕಾರ್ಪೊರೇಷನ್ ಕೇವಲ 275 ಮೆ.ಟನ್ ಆಮ್ಲಜನಕ ಪೂರೈಕೆಯಲ್ಲಿಯೇ ಪರಿಸ್ಥಿತಿಯನ್ನು ವ್ಯವಸ್ಥಿತವಾಗಿ ಸಂಭಾಳಿಸಿದ ಬಗ್ಗೆಯೂ ನ್ಯಾಯಾಲಯ ಗಮನಹರಿಸಿತು. ಅದನ್ನು ಸಹ ತನ್ನ ಆದೇಶದಲ್ಲಿ ದಾಖಲಿಸಿತು. ಒಂದು ಹಂತದಲ್ಲಿ, ಈ ಸಂಬಂಧ ಅಲ್ಲಿನ ಮುನಿಸಿಪಲ್ ಕಮಿಷನರ್ ಇಕ್ಬಾಲ್ ಸಿಂಗ್ ಚಹಾಲ್ ಅವರೊಂದಿಗೆ ಮಾತುಕತೆಯನ್ನು ನಡೆಸುವಂತೆ ಕೇಂದ್ರಕ್ಕೆ ಸಲಹೆ ನೀಡಿತು.