ಸಂವಿಧಾನವನ್ನು ಹೊಂದಿರುವುದು ಹಾಗೂ ಅದನ್ನು ಪಾಲಿಸುವುದು ಎರಡು ಪ್ರತ್ಯೇಕ ವಿಷಯಗಳು: ದೆಹಲಿ ಹೈಕೋರ್ಟ್ ಸಿಜೆ

ಸಂಸ್ಥೆಗಳು ಅಧಿಕಾರ ಚಲಾಯಿಸುವುದಷ್ಟೇ ಅಲ್ಲದೆ ತಮ್ಮ ನಿರ್ಧಾರಗಳು ಮತ್ತು ಕಾರ್ಯಗಳಿಗೆ ಉತ್ತರದಾಯಿಗಳಾಗಿರಬೇಕು ಎಂದು ಸಿಜೆ ಡಿ ಕೆ ಉಪಾಧ್ಯಾಯ ಒತ್ತಿಹೇಳಿದರು.
Adolf Hitler
Adolf Hitler
Published on

ಸಂವಿಧಾನ ಅಸ್ತಿತ್ವದಲ್ಲಿರುವುದು ಮತ್ತು ಸಾಂವಿಧಾನಿಕತೆಯನ್ನು ಪಾಲಿಸುವುದು ಎರಡೂ ಭಿನ್ನ ಪರಿಕಲ್ಪನೆಗಳು ಎಂದ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ಕೆ ಉಪಾಧ್ಯಾಯ ಅವರು ಕಾನೂನಿನ ಆಳ್ವಿಕೆಯ ಮಹತ್ವವನ್ನು ವಿವರಿಸಿದರು.

ಸುನಂದಾ ಭಂಡಾರೆ ಸ್ಮಾರಕ 29ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರ್ವಾಧಿಕಾರಿ ಆಡಳಿತ ಇರುವ ದೇಶಗಳಲ್ಲೂ ಸಂವಿಧಾನ ಅಸ್ತಿತ್ವದಲ್ಲಿದ್ದರೂ ಅವುಗಳಿಗೆ ಸಾಂವಿಧಾನಿಕತೆಯ ಕೊರತೆ ಇರುತ್ತದೆ ಎಂದರು.

“… ನಿಮಗೆ ಗೊತ್ತಾ, ಸಾಂವಿಧಾನಿಕತೆ ಇಲ್ಲದ ಸಂವಿಧಾನ ಸರ್ವಾಧಿಕಾರಿ ಆಡಳಿತದಲ್ಲಿಯೂ ಇರಬಹುದು. ಜರ್ಮನಿಯಲ್ಲಿ ಮೊದಲ ಮಹಾಯುದ್ಧದ ನಂತರ ಹಿಟ್ಲರ್‌ನ ಉದಯ ಇದಕ್ಕೆ ಅತ್ಯುತ್ತಮ ಉದಾಹರಣೆ” ಎಂದು ಅವರು ತಿಳಿಸಿದರು.

ಉಪನ್ಯಾಸದ ಪ್ರಮುಖಾಂಶಗಳು

  • ಅಡಾಲ್ಫ್ ಹಿಟ್ಲರ್ ಪ್ರಜಾಪ್ರಭುತ್ವ ಚುನಾವಣೆಗಳ ಮೂಲಕ ಅಧಿಕಾರಕ್ಕೆ ಬಂದು ಕಾನೂನುಗಳಿಗೆ ತಿದ್ದುಪಡಿ ಮಾಡಿ ರಾಜಕೀಯ ಪಕ್ಷಗಳನ್ನು ಕಾನೂನುಬದ್ಧವಾಗಿ ನಿಷೇಧಿಸುವ ಮೂಲಕ ಜರ್ಮನಿಯ ಸರ್ವಾಧಿಕಾರಿಯಾದ.

  • ಹೀಗಾಗಿ ಸಂವಿಧಾನವನ್ನು ಹೊಂದಿರುವುದು ಮತ್ತು ಅದನ್ನು ಪಾಲಿಸುವುದು ಇವು ನಾವು ಯಾವಾಗಲೂ ನೆನಪಿನಲ್ಲಿರಿಸಿಕೊಳ್ಳಬೇಕಾದ ಎರಡು ಭಿನ್ನ ವಿಚಾರಗಳಾಗಿವೆ.

  • ಸಂವಿಧಾನದ ಅತ್ಯಂತ ಮಹತ್ವದ ಕೊಡುಗೆಗಳಲ್ಲಿ ಒಂದು ಎಂದರೆ ಸಮಾನತೆಗೆ ಅದು ತೋರಿದ ಬದ್ಧತೆಯಾಗಿದೆ.

  • ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳಿಗೆ ಸಂವಿಧಾನ ಒದಗಿಸಿರುವ ಅಧಿಕಾರ ಪ್ರತ್ಯೇಕತೆಯ ಧ್ಯೇಯ ಎಂದರೆ ಅಧಿಕಾರ ಪ್ರಕ್ರಿಯೆ ಎಂಬುದು ಉತ್ತರದಾಯಿಯಾಗಿರಬೇಕು ಎನ್ನುವುದಾಗಿದೆ.

  • ಕಾನೂನು ಆಳ್ವಿಕೆಯನ್ನು ಎತ್ತಿಹಿಡಿಯುವ, ಸಾಂಸ್ಥಿಕ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳುವ ಮತ್ತು ಜನರ ಹಕ್ಕುಗಳನ್ನು ರಕ್ಷಿಸುವ ಸಾಮರ್ಥ್ಯದಲ್ಲಿ ಭಾರತದ ಸಾಂವಿಧಾನಿಕ ಚೌಕಟ್ಟಿನ ಸ್ಥಿತಿಸ್ಥಾಪಕತ್ವ ಇದೆ.   

  • ಆಧುನಿಕ ಸಾಂವಿಧಾನಿಕತೆಯನ್ನು ವಿಸ್ತರಿಸುವಲ್ಲಿ ನ್ಯಾಯಾಂಗದ ಪಾತ್ರ ಮಹತ್ವದ್ದು. ಸಂವಿಧಾನದ 21ನೇ ವಿಧಿಯಡಿ ಘನತೆಯಿಂದ ಬದುಕುವ ಹಕ್ಕು, ಜೀವಿಸುವ ಹಕ್ಕು, ನ್ಯಾಯಯುತ ವಿಚಾರಣೆಯ ಹಕ್ಕು, ಆಹಾರ ಮತ್ತು ಆಶ್ರಯದ ಹಕ್ಕು, ಶಿಕ್ಷಣದ ಹಕ್ಕು, ಲೈಂಗಿಕ ಕಿರುಕುಳದ ವಿರುದ್ಧದ ಹಕ್ಕಿನಂತಹ ವಿವಿಧ ಹಕ್ಕುಗಳನ್ನು ಒದಗಿಸಲಾಗಿದೆ.

  • ಸಾಂವಿಧಾನಿಕ ತತ್ವಗಳನ್ನು ಬಲಪಡಿಸುವ ಹಲವು ಮಹತ್ವದ ತೀರ್ಪುಗಳನ್ನು ಇತ್ತೀಚಿನ ದಶಕಗಳಲ್ಲಿ ನ್ಯಾಯಾಂಗ ನೀಡಿದೆ.

  • ಸಂಸ್ಥೆಗಳು ಅಧಿಕಾರ ಚಲಾಯಿಸುವುದಷ್ಟೇ ಅಲ್ಲದೆ ತಮ್ಮ ನಿರ್ಧಾರಗಳು ಮತ್ತು ಕಾರ್ಯಗಳಿಗೆ ಉತ್ತರದಾಯಿಗಳಾಗಿರಬೇಕು.

ಹಿರಿಯ ವಕೀಲೆ ಇಂದಿರಾ ಜೈಸಿಂಗ್‌, ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ವಿಭು ಭಕ್ರು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

[ಉಪನ್ಯಾಸ ಕಾರ್ಯಕ್ರಮದ ವೀಡಿಯೊಗಾಗಿ ಇಲ್ಲಿ ಕ್ಲಿಕ್ಕಿಸಿ]

Kannada Bar & Bench
kannada.barandbench.com