ಬೀದಿ ವ್ಯಾಪಾರಿಗಳು ತಮ್ಮ ಸರಕು-ಸರಂಜಾಮುಗಳನ್ನು ರಾತ್ರಿಯಿಡೀ ಬೀದಿಯಲ್ಲಿ ಬಿಡುವ ಹಕ್ಕು ಹೊಂದಿಲ್ಲ: ಸುಪ್ರೀಂ ಕೋರ್ಟ್‌

ಬೀದಿಬದಿ ನೀತಿಯ ಪ್ರಕಾರ ಮಾತ್ರ ಬೀದಿ ವ್ಯಾಪಾರಿಗಳು ಮಾರುಕಟ್ಟೆಯಲ್ಲಿ ತಮ್ಮ ಸರಕುಗಳನ್ನು ಇಡಲು ಅವಕಾಶವಿದೆ ವಿನಾ ಇಷ್ಟ ಬಂದ ಹಾಗೆ ಇಡಲಾಗದು ಎಂದು ನ್ಯಾಯಾಲಯ ಹೇಳಿದೆ.
Supreme Court
Supreme Court
Published on

ತಾವು ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಸ್ಥಳದಲ್ಲಿ ತಮ್ಮ ಸರಕು-ಸರಂಜಾಮುಗಳನ್ನು ರಾತ್ರಿಯಿಡೀ ಇರಿಸುವ ಕುರಿತು ಬೀದಿ ಬದಿ ವ್ಯಾಪಾರಿಗಳು ಹಕ್ಕು ಸಾಧಿಸಲಾಗದು ಎಂದು ಸುಪ್ರೀಂ ಕೋರ್ಟ್‌ ಈಚೆಗೆ ಹೇಳಿದೆ (ಮದನ್‌ ಲಾಲ್‌ ವರ್ಸಸ್‌ ದೆಹಲಿ ನಗರಸಭೆ ಮತ್ತು ಇತರರು).

ದೆಹಲಿ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಂ ಆರ್‌ ಶಾ ಮತ್ತು ಬಿ ವಿ ನಾಗರತ್ನ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಬೀದಿಬದಿ ವ್ಯಾಪಾರ ನೀತಿಯ ಭಾಗವಾಗಿ ಮಾರುಕಟ್ಟೆಯಲ್ಲಿ ತಮ್ಮ ಸರಕು-ಸರಂಜಾಮುಗಳನ್ನು ಇಡಲು ಬೀದಿಬದಿ ವ್ಯಾಪಾರಿಗಳಿಗೆ ಅನುಮತಿಸಬಹುದಾಗಿದೆ. ಇದನ್ನು ಮೀರಿ ಅನುಮತಿಸಲಾಗದು. ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಸ್ಥಳದಲ್ಲಿ ತಮ್ಮ ಸರಕು-ಸರಂಜಾಮುಗಳನ್ನು ರಾತ್ರಿಯಿಡೀ ಇರಿಸುವ ಕುರಿತು ಅರ್ಜಿದಾರರಾದ ಬೀದಿ ಬದಿ ವ್ಯಾಪಾರಿಯು ಹಕ್ಕು ಸಾಧಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.

ಬೆಳಗ್ಗೆಯಿಂದ ವ್ಯಾಪಾರ ನಡೆಸುತ್ತಿದ್ದ ಸ್ಥಳದಲ್ಲೇ ತಮ್ಮ ಸರಕು-ಸರಂಜಾಮುಗಳನ್ನು ರಾತ್ರಿಯಿಡೀ ಬಿಡಲು ದೆಹಲಿ ನಗರಸಭೆಗೆ ನಿರ್ದೇಶಿಸಬೇಕು ಎಂದು ದೆಹಲಿ ಹೈಕೋರ್ಟ್‌ಗೆ ಮೇಲ್ಮನವಿದಾರರು ಕೋರಿದ್ದರು. ಇದಕ್ಕೆ ನ್ಯಾಯಮೂರ್ತಿಗಳಾದ ವಿಪಿನ್‌ ಸಾಂಘಿ ಮತ್ತು ಜಸ್ಮೀತ್‌ ಸಿಂಗ್‌ ಅವರಿದ್ದ ವಿಭಾಗೀಯ ಪೀಠವು ಮೇಲ್ಮನವಿದಾರರ ಕೋರಿಕೆಯು ಬೀದಿಬದಿ ವ್ಯಾಪಾರದ ಮೂಲ ತತ್ವಕ್ಕೆ ವಿರುದ್ದವಾಗಿದೆ ಎಂದು ಹೇಳಿತ್ತು. ಹಾಗೆ ಮಾಡುವುದು ರಾತ್ರಿ ಮತ್ತು ಹಗಲು ಎರಡರಲ್ಲೂ ಶಾಶ್ವತವಾಗಿ ಬೀದಿಬದಿ ವ್ಯಾಪಾರಿಗಳು ಸ್ಥಳವನ್ನು ಆಕ್ರಮಿಸಲು ಅನುಮತಿಸಿದಂತಾಗುತ್ತದೆ ಎಂದು ಮನವಿಯನ್ನು ವಜಾ ಮಾಡಿತ್ತು. ಹೈಕೋರ್ಟ್‌ ತೀರ್ಪನ್ನು ಇದೀಗ ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ.

Kannada Bar & Bench
kannada.barandbench.com