ಬೆಂಗಳೂರು ಕಂಬಳ ಸ್ಪರ್ಧೆಗೆ ಆಕ್ಷೇಪ: ಸರ್ಕಾರದ ಕೋರಿಕೆಯಂತೆ ನಾಳೆಗೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

ರಾಜ್ಯ ಸರ್ಕಾರದ ಪರ ವಕೀಲೆ ನಿಲೋಫರ್‌ ಅಕ್ಬರ್‌ ಅವರು ಅಡ್ವೊಕೇಟ್‌ ಜನರಲ್‌ ಇಂದು ದೆಹಲಿಯಲ್ಲಿದ್ದಾರೆ. ಪ್ರಕರಣದಲ್ಲಿ ಸಾಕಷ್ಟು ಕಾನೂನಿನ ಅಂಶಗಳಿದ್ದು, ಈ ಕುರಿತು ಸರ್ಕಾರದಿಂದ ಸೂಚನೆ ಪಡೆದು ಅವರು ವಾದ ಮಂಡಿಸಲಿದ್ದಾರೆ ಎಂದರು.
Kambala & Karnataka HC
Kambala & Karnataka HC
Published on

ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಕ್ಟೋಬರ್ 26ರಂದು ಕಂಬಳ (ಕೋಣಗಳ ಓಟ) ಸ್ಪರ್ಧೆ ನಡೆಸಲು ಬೆಂಗಳೂರು ಕಂಬಳ ಸಮಿತಿಗೆ ಅನುಮತಿಸದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಪ್ರಾಣಿ ದಯಾ ಸಂಘ ಪೆಟಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಬುಧವಾರಕ್ಕೆ ಮುಂದೂಡಿದೆ.

ರಾಜ್ಯ ಸರ್ಕಾರದ ಪರವಾಗಿ ಹಾಜರಿದ್ದ ವಕೀಲೆ ನಿಲೋಫರ್‌ ಅಕ್ಬರ್‌ ಅವರು ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ಇಂದು ದೆಹಲಿಯಲ್ಲಿದ್ದಾರೆ. ಪ್ರಕರಣದಲ್ಲಿ ಸಾಕಷ್ಟು ಕಾನೂನಿನ ಅಂಶಗಳಿದ್ದು, ಈ ಕುರಿತು ಸರ್ಕಾರದಿಂದ ಸೂಚನೆ ಪಡೆದು ಅವರು ವಾದ ಮಂಡಿಸಲಿದ್ದಾರೆ. ಹೀಗಾಗಿ, ಅರ್ಜಿಯ ವಿಚಾರಣೆಯನ್ನು ನಾಳೆ ಅಥವಾ ನಾಡಿದ್ದಿಗೆ ಮುಂದೂಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ವಿಭಾಗೀಯ ಪೀಠಕ್ಕೆ ಕೋರಿದರು.

ಇದನ್ನು ಪುರಸ್ಕರಿಸಿದ ಪೀಠವು ಬುಧವಾರ ಮಧ್ಯಾಹ್ನ 2.30ಕ್ಕೆ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ಆದೇಶಿಸಿ, ವಿಚಾರಣೆ ಮುಂದೂಡಿದರು.

ಇದಕ್ಕೂ ಮುನ್ನ, ಪೆಟಾ ಪ್ರತಿನಿಧಿಸಿದ್ದ ಹಿರಿಯ ವಕೀಲ ಧ್ಯಾನ್‌ ಚಿನ್ನಪ್ಪ ಅವರು “ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಕಂಬಳ ಸ್ಪರ್ಧೆಗೆ ಅವಕಾಶವಿದೆ. ಆದರೆ, ಕಳೆದ ವರ್ಷದಿಂದ ಅದನ್ನು ಬೆಂಗಳೂರಿನಲ್ಲಿ ಆನಂತರ ಶಿವಮೊಗ್ಗದಲ್ಲೂ ನಡೆಸುವ ಚಿಂತನೆಯನ್ನು ಕಂಬಳ ಆಯೋಜನಾ ಸಮಿತಿ ಹೊಂದಿದೆ. ಇದಕ್ಕಾಗಿ 200 ಕೋಣಗಳನ್ನು 300 ಕಿ ಮೀ ದೂರವಿರುವ ದಕ್ಷಿಣ ಕನ್ನಡದಿಂದ ಟ್ರಕ್‌ನಲ್ಲಿ ತರಲಾಗಿದೆ. ಇದಕ್ಕೆ ನಿರ್ಬಂಧ ವಿಧಿಸಬೇಕು” ಎಂದು ಕೋರಿದರು.

Also Read
ಬೆಂಗಳೂರು ಕಂಬಳ ಸ್ಪರ್ಧೆಗೆ ಪೆಟಾ ವಿರೋಧ: ನಾಳೆ ಅರ್ಜಿ ವಿಚಾರಣೆ ನಡೆಸಲಿರುವ ಹೈಕೋರ್ಟ್‌

“ಪ್ರಾಣಿ ಹಿಂಸೆ ನಿಷೇಧ ಕಾಯಿದೆಗೆ ತಿದ್ದುಪಡಿ ತಂದು ಕರ್ನಾಟಕದಲ್ಲಿ ಕಂಬಳ, ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆಯಂಥ ಸಾಂಪ್ರದಾಯಿಕ ಸ್ಪರ್ಧೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಈಗ ಅದನ್ನು ವಾಣಿಜ್ಯೀಕರಣಗೊಳಿಸಲಾಗುತ್ತಿದೆ. ನ್ಯಾಯಾಲಯ ನಿರ್ಧರಿಸುವವರೆಗೆ ಕೋಣಗಳನ್ನು ಬೆಂಗಳೂರಿಗೆ ಟ್ರಕ್‌ನಲ್ಲಿ ತರದಂತೆ ಕಂಬಳ ಆಯೋಜನಾ ಸಮಿತಿಗೆ ಆದೇಶಿಸಬೇಕು” ಎಂದು ಕೋರಿದರು. ಅಂತಿಮವಾಗಿ ಪೀಠವು ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. 

Kannada Bar & Bench
kannada.barandbench.com