

ಮುಡಾ ಪ್ರಕರಣದಲ್ಲಿ ತನಿಖೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿಸಿರುವುದನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಾಲಯವು ಜನವರಿ 8ಕ್ಕೆ ಮುಂದೂಡಿದೆ. ಇದರೊಂದಿಗೆ ಸತತ 8ನೇ ಬಾರಿಗೆ ಪ್ರಕರಣದ ವಿಚಾರಣೆ ಮುಂದೂಡಿದಂತಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆಕ್ಷೇಪಾರ್ಹ ಭೂಮಿಯ ಮಾಲೀಕ ಜೆ ದೇವರಾಜು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ವಿಜಯಕುಮಾರ್ ಎ.ಪಾಟೀಲ್ ಅವರ ವಿಭಾಗೀಯ ಪೀಠ ನಡೆಸಿತು.
ಸಿದ್ದರಾಮಯ್ಯ ಪರವಾಗಿ ಹಾಜರಾಗಿದ್ದ ವಕೀಲ ಶತಭಿಷ್ ಶಿವಣ್ಣ ಅವರು “ಮೇಲ್ಮನವಿಗಳ ವಿಚಾರಣೆ ಮುಂದೂಡುವುದಕ್ಕೆ ಸಂಬಂಧಿಸಿದಂತೆ ಉಭಯ ಪಕ್ಷಕಾರರ ನಡುವೆ ಒಪ್ಪಿಗೆ ಇದೆ. ಹೀಗಾಗಿ, ಅರ್ಜಿಯ ವಿಚಾರಣೆಯನ್ನು ಜನವರಿಗೆ ಮುಂದೂಡಬೇಕು” ಎಂದರು.
ಆಗ ಪೀಠವು “ನ್ಯಾಯಾಲಯದ ಹಿಂದಿನ ಆದೇಶದ ಅನುಪಾಲನೆ ಮಾಡಬೇಕಿದೆ” ಎಂದರು. ಅದನ್ನು ಮಾಡಲಾಗುವುದು ಎಂದು ಶತಭಿಷ್ ಹೇಳಿದರು. ಇದನ್ನು ಆಲಿಸಿದ ಪೀಠವು ವಿಚಾರಣೆಯನ್ನು ಎಂಟನೇ ಬಾರಿಗೆ ಜನವರಿ 8ಕ್ಕೆ ಮುಂದೂಡಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ತನಿಖೆಗೆ ಅನುಮತಿಸಿದ್ದ ಆದೇಶವನ್ನು ಏಕಸದಸ್ಯ ಪೀಠವು 2024ರ ಸೆಪ್ಟೆಂಬರ್ 24ರಂದು ಎತ್ತಿ ಹಿಡಿದಿತ್ತು. ಆನಂತರ ಒಂದು ತಿಂಗಳ ಬಳಿಕ ಸಿದ್ದರಾಮಯ್ಯ ಅವರು ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ದೇವರಾಜು ಸಹ ಮೇಲ್ಮನವಿ ಸಲ್ಲಿಸಿದ್ದರು. ನವೆಂಬರ್ ಮೂರನೇ ವಾರಕ್ಕೆ ಈ ಮೇಲ್ಮನವಿಗಳಿಗೆ ಒಂದು ವರ್ಷ ಪೂರ್ಣಗೊಳ್ಳಲಿದೆ.