ಪ್ರಜ್ವಲ್‌ ಜಾಮೀನು ಅರ್ಜಿಗಳ ವಿಚಾರಣೆ ಮುಂದೂಡಿಕೆ; ಗೌಪ್ಯ ವಿಚಾರಣೆ ನಿರ್ಧರಿಸಲಾಗುವುದು ಎಂದ ಹೈಕೋರ್ಟ್‌

"ಆರೋಪ ಪಟ್ಟಿ ಪ್ರತಿ ಕೊಡಬೇಕು, ಇಲ್ಲವೇ ಸಂತ್ರಸ್ತೆಯ ಸಿಆರ್‌ಪಿಸಿ ಸೆಕ್ಷನ್‌ 161 ಹೇಳಿಕೆಯನ್ನು ವಕಾಲತ್ತು ಹಾಕಿರುವ ವಕೀಲರಿಗೆ ನೀಡಬೇಕು" ಎಂದು ಕೋರಿದ ಪ್ರಜ್ವಲ್‌ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ.
Karnataka HC and Prajwal Revanna
Karnataka HC and Prajwal Revanna
Published on

ಅತ್ಯಾಚಾರ ಪ್ರಕರಣಗಳಲ್ಲಿ ಜಾಮೀನು ಕೋರಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ಸೆಪ್ಟೆಂಬರ್‌ 12ಕ್ಕೆ ಮುಂದೂಡಿದೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಮತ್ತು ಬೆಂಗಳೂರಿನ ಸಿಐಡಿ ಠಾಣೆಯಲ್ಲಿ ದಾಖಲಾಗಿರುವ ಮತ್ತೆರಡು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿರುವ ಪ್ರಜ್ವಲ್‌ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಇಂದು ವಿಚಾರಣೆ ನಡೆಸಿತು.

ಅರ್ಜಿದಾರರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಹೊಳೆನರಸೀಪುರದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಆದರೆ, ಅದರ ಪ್ರತಿಯನ್ನು ನಮಗೆ ನೀಡಿಲ್ಲ. ಆರೋಪ ಪಟ್ಟಿ ಬದಿಗಿಟ್ಟು ನೋಡಿದರೆ ಪ್ರಜ್ವಲ್‌ ವಿರುದ್ದದ ಎಲ್ಲಾ ಆರೋಪಗಳು ಜಾಮೀನು ನೀಡಬಹುದಾದ ಆರೋಪಗಳು. ಸಂತ್ರಸ್ತೆಯ ಸಿಆರ್‌ಪಿಸಿ ಸೆಕ್ಷನ್‌ 161 ಹೇಳಿಕೆ ಆಧರಿಸಿ, ಈ ಪ್ರಕರಣದಲ್ಲಿ ಅತ್ಯಾಚಾರ ಆರೋಪ ಸೇರ್ಪಡೆ ಮಾಡಲಾಗಿದೆ. ಹೀಗಾಗಿ, ಆರೋಪ ಪಟ್ಟಿಯನ್ನು ನಮಗೆ ಒದಗಿಸಬೇಕು. ಆರೋಪ ಪಟ್ಟಿ ಪ್ರತಿ ಕೊಡಬೇಕು, ಇಲ್ಲವೇ ಸಂತ್ರಸ್ತೆಯ ಸಿಆರ್‌ಪಿಸಿ ಸೆಕ್ಷನ್‌ 161 ಹೇಳಿಕೆಯನ್ನು ವಕಾಲತ್ತು ಹಾಕಿರುವ ವಕೀಲರಿಗೆ ನೀಡಬೇಕು. ಇಲ್ಲವಾದಲ್ಲಿ ಪೂರ್ವಾಗ್ರಹ ಉಂಟಾಗಲಿದೆ” ಎಂದರು.

ವಿಶೇಷ ತನಿಖಾ ದಳವನ್ನು ಪ್ರತಿನಿಧಿಸಿರುವ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್‌ ಅವರು "ಅರ್ಜಿದಾರರು ಬೇಕಾದರ ವಿಚಾರಣಾಧೀನ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಪಡೆದುಕೊಳ್ಳಬಹುದು. ಜೆಡಿಎಸ್‌ ಶಾಸಕ ಎಚ್‌ ಡಿ ರೇವಣ್ಣ ಮತ್ತು ಪ್ರಜ್ವಲ್‌ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಮೊದಲ ಮತ್ತು ಎರಡನೇ ಆರೋಪಿಯಾಗಿದ್ದಾರೆ. ರೇವಣ್ಣ ಅರ್ಜಿ ವಿಚಾರಣೆ ನಡೆಸಿದ ಈ ನ್ಯಾಯಾಲಯವು ಸಂಜ್ಞೇ ಪರಿಗಣಿಸದಂತೆ ಅಧೀನ ನ್ಯಾಯಾಲಯಕ್ಕೆ ನಿರ್ಬಂಧ ವಿಧಿಸಿದೆ. ಇದೇ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಪ್ರಜ್ವಲ್‌ ವಿರುದ್ಧದ ಆರೋಪಗಳು ಪ್ರತ್ಯೇಕ ಮತ್ತು ವಿಭಿನ್ನವಾಗಿವೆ. ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಆರೋಪ ಪಟ್ಟಿಯನ್ನು ಪರಿಶೀಲಿಸಬೇಕು, ಅಲ್ಲಿನ ಅಂಶಗಳು ಆಘಾತಕಾರಿಯಾಗಿವೆ” ಎಂದರು.

ಮುಂದುವರಿದು, “ಸಂತ್ರಸ್ತರ ಗೌರವದ ದೃಷ್ಟಿಯಿಂದ ಪ್ರಕರಣವನ್ನು ಗೌಪ್ಯ ವಿಚಾರಣೆ ನಡೆಸುವ ಸಂಬಂಧ ನ್ಯಾಯಾಲಯ ಪರಿಗಣಿಸಬೇಕು” ಎಂದರು.

Also Read
ಪ್ರಜ್ವಲ್‌ ರೇವಣ್ಣ ಜಾಮೀನು ಅರ್ಜಿಗಳ ಗೌಪ್ಯ ವಿಚಾರಣೆ ಕೋರಿದ ರಾಜ್ಯ ಸರ್ಕಾರ; ಸಿಜೆ ನಿರ್ಧರಿಸಬೇಕು ಎಂದ ಹೈಕೋರ್ಟ್‌

ಆಗ ಪೀಠವು “ಪ್ರಕರಣದಲ್ಲಿ ರೇವಣ್ಣ ಮೊದಲನೇ ಆರೋಪಿಯಾಗಿದ್ದು, ಅವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಸಂಜ್ಞೇ ಪರಿಗಣಿಸಬಾರದು ಎಂದು ಆದೇಶಿಸಲಾಗಿದೆ. ಎರಡನೇ ಆರೋಪಿಯಾಗಿರುವ ಪ್ರಜ್ವಲ್‌ಗೆ ಸಂಬಂಧಿಸಿದಂತೆ ಆದೇಶದಲ್ಲಿ ಸ್ಪಷ್ಟನೆ ನೀಡಲಾಗುವುದು. ಪ್ರಕರಣದಲ್ಲಿ ವಿಚಾರಾಣಧೀನ ನ್ಯಾಯಾಲಯ ಸಂಜ್ಞೇ ಪರಿಗಣಿಸಿದ ಬಳಿಕ ಆರೋಪ ಪಟ್ಟಿ ನಿಮಗೆ (ಪ್ರಜ್ವಲ್‌) ಲಭ್ಯವಾಗಲಿದೆ. ವಿಚಾರಣಾಧೀನ ನ್ಯಾಯಾಲಯ ಅನುಮತಿ ಪಡದೇ ತನಿಖಾಧಿಕಾರಿ ಸೆಕ್ಷನ್‌ 376 ಅನ್ವಯಿಸಿದ್ದಾರೆ” ಎಂದು ನಾವದಗಿ ಅವರನ್ನು ಕುರಿತು ಹೇಳಿತು.

“ಪ್ರಜ್ವಲ್‌ ವಿರುದ್ಧ ಪ್ರಕ್ರಿಯೆ ಆರಂಭಿಸುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ಆದೇಶಿಸಲಾಗುವುದು. ಅಲ್ಲಿಯವರೆಗೆ ಅಧೀನ ನ್ಯಾಯಾಲಯ ಸಂಜ್ಞೇ ಪರಿಗಣಿಸಿದರೆ ಇಲ್ಲಿ ನಾವು ಜಾಮೀನು ಅರ್ಜಿ ವಿಚಾರಣೆ ನಡೆಸಬಹುದು” ಎಂದಿತು.

ಇನ್ನು, ಗೌಪ್ಯ ವಿಚಾರಣೆಗೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ ನೀಡಿರುವ ಆರೋಪ ಪಟ್ಟಿಯನ್ನು ಪರಿಶೀಲಿಸಿ, ಸೂಕ್ತ ಆದೇಶವನ್ನು ಮುಖ್ಯ ನ್ಯಾಯಮೂರ್ತಿಗಳಿಂದ ಪಡೆದುಕೊಳ್ಳಲಾಗುವುದು ಎಂದು ಮೌಖಿಕವಾಗಿ ಹೇಳಿದ ನ್ಯಾಯಾಲಯವು ವಿಚಾರಣೆಯನ್ನು ಸೆಪ್ಟೆಂಬರ್‌ 12ಕ್ಕೆ ಮುಂದೂಡಿತು.

Kannada Bar & Bench
kannada.barandbench.com