ಡಿಜಿಪಿ ಹುದ್ದೆಗೆ ಪದೋನ್ನತಿ: ಹಿರಿಯ ಐಪಿಎಸ್‌ ಅಧಿಕಾರಿ ಅರುಣ್‌ ಚಕ್ರವರ್ತಿ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಸಿಎಟಿಯು ಸೆಪ್ಟೆಂಬರ್‌ 19ರಂದು ಹೊರಡಿಸಿದ ಮಧ್ಯಂತರ ಆದೇಶ ಪ್ರಶ್ನಿಸಿ ಅರುಣ್‌ ಚಕ್ರವರ್ತಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸೂರಜ್‌ ಗೋವಿಂದರಾಜ್‌, ಕೆ ರಾಜೇಶ್‌ ರೈ ಅವರ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಡಿಜಿಪಿ ಹುದ್ದೆಗೆ ಪದೋನ್ನತಿ: ಹಿರಿಯ ಐಪಿಎಸ್‌ ಅಧಿಕಾರಿ ಅರುಣ್‌ ಚಕ್ರವರ್ತಿ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್‌
Published on

ರಾಜ್ಯ ಪೊಲೀಸ್‌ ಮಹಾನಿರ್ದೇಶಕ (ಡಿಜಿಪಿ) ಹುದ್ದೆಗೆ ತಮಗೆ ಪದೋನ್ನತಿ ನೀಡಿದ್ದ ಸರ್ಕಾರದ ಆದೇಶವನ್ನು ತಡೆ ಹಿಡಿದಿರುವ ಕೇಂದ್ರ ಆಡಳಿತಾತ್ಮಕ ನ್ಯಾಯಾಧೀಕರಣದ (ಸಿಎಟಿ) ಮಧ್ಯಂತರ ಆದೇಶ ಪ್ರಶ್ನಿಸಿ ಹಿರಿಯ ಐಪಿಎಸ್‌ ಅಧಿಕಾರಿ ಅರುಣ್‌ ಚಕ್ರವರ್ತಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಮುಂದೂಡಿದೆ.

ಸಿಎಟಿಯು ಸೆಪ್ಟೆಂಬರ್‌ 19ರಂದು ಹೊರಡಿಸಿದ ಮಧ್ಯಂತರ ಆದೇಶ ಪ್ರಶ್ನಿಸಿ ಅರುಣ್‌ ಚಕ್ರವರ್ತಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸೂರಜ್‌ ಗೋವಿಂದರಾಜ್‌ ಮತ್ತು ಕೆ ರಾಜೇಶ್‌ ರೈ ಅವರ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠವು ಮಂಗಳವಾರ ವಿಚಾರಣೆ ನಡೆಸಿತು.

ಅರ್ಜಿ ಸಂಬಂಧ ಕೆಲ ಕಾಲ ರಾಜ್ಯ ಸರ್ಕಾರ, ಅರುಣ್‌ ಚಕ್ರವರ್ತಿ ಮತ್ತು ಪ್ರತಿವಾದಿ ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ಅವರ ಪರ ವಕೀಲರ ವಾದ- ಪ್ರತಿವಾದವನ್ನು ಪೀಠವು ಆಲಿಸಿತು. ಬಳಿಕ  ಪೊಲೀಸ್ ಗೃಹ ಮಂಡಳಿ  ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಲ್ಲಿ ಅರ್ಜಿದಾರರಾದ ಅರುಣ್ ಚಕ್ರವರ್ತಿ ಅವರು ಮುಂದುವರಿಕೆಗೆ ಅಡ್ಡಿಯಿಲ್ಲ. ಆದರೆ, ಅವರಿಗೆ ಡಿಜಿಪಿಗೆ ಹುದ್ದೆಗೆ ಮುಂಬಡ್ತಿ ನೀಡಿರುವ ಸರ್ಕಾರದ ಆದೇಶದ ಬಗ್ಗೆ ಸಿಎಟಿ ನಿರ್ಧರಿಸಬೇಕಿದೆ ಎಂದು ಹಿರಿಯ ಐಪಿಎಸ್‌ ಅಧಿಕಾರಿ ಅಲೋಕ್ ಕುಮಾರ್ (ಚಕ್ರವರ್ತಿ ಅವರ ಮುಂಬಡ್ತಿ ಆದೇಶವನ್ನು ಸಿಎಟಿ ಮುಂದೆ ಪ್ರಶ್ನಿಸಿರುವ) ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಈ ಹೇಳಿಕೆ ಪರಿಗಣಿಸಿದ ಪೀಠವು ಅರ್ಜಿ ವಿಚಾರಣೆಯನ್ನು ಮುಂದೂಡಿತು. ಇದರಿಂದ ಪೊಲೀಸ್ ಗೃಹ ಮಂಡಳಿ ವ್ಯವಸ್ಥಾಪಕ ಹುದ್ದೆಯಲ್ಲಿ ಅರುಣ್‌ ಚಕ್ರವರ್ತಿ ಮುಂದುವರಿಯಲಿದ್ದಾರೆ.

ಇದಕ್ಕೂ ಮುನ್ನ, ಎಡಿಜಿಪಿ ಅಲೋಕ್ ಕುಮಾರ್ ಪರ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅವರು ತಮ್ಮ ಕಕ್ಷಿದಾರರ ವಿರುದ್ಧ ಸರ್ಕಾರ ಶಿಸ್ತು ಕ್ರಮಕ್ಕೆ ಮುಂದಾಗಿತ್ತು. ಅದನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಿಎಟಿ ಮುಂದೆ ಬಾಕಿಯಿತ್ತು. ದೋಷಾರೋಪಣಾ ಮೆಮೊಗೆ ಸಿಎಟಿ ತಡೆ ನೀಡಿದ್ದಾಗಲೇ ಅಲೋಕ್‌ ಅವರ ಸೇವಾ ಹಿರಿತನ ಉಪೇಕ್ಷಿಸಿ, ಅರುಣ್‌ ಚಕ್ರವರ್ತಿ ಹಾಗೂ ಇತರೆ ಅಧಿಕಾರಿಗಳಿಗೆ ಡಿಜಿಪಿಯಾಗಿ ಮುಂಬಡ್ತಿ ನೀಡಿ ಸರ್ಕಾರ ಆದೇಶಿಸಿದೆ. ಇದರಿಂದ ಸರ್ಕಾರದ ಆದೇಶವನ್ನು ಅಲೋಕ್‌ ಕುಮಾರ್‌ ಅವರು ಸಿಎಟಿ ಮುಂದೆ ಪ್ರಶ್ನಿಸಿದ್ದಾರೆ ಎಂದು ವಿವರಿಸಿದರು.

Also Read
ಎಡಿಜಿಪಿ ಹುದ್ದೆಗೆ ಉಮೇಶ್‌ ಕುಮಾರ್, ಅರುಣ್‌ ಚಕ್ರವರ್ತಿಗೆ ಬಡ್ತಿ: ರಾಜ್ಯ ಸರ್ಕಾರದ ಆದೇಶಕ್ಕೆ ಸಿಎಟಿ ತಡೆ

ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ರೊಬೆನ್ ಜೇಕಬ್‌ ಅವರು ಸಿಬಿಐ ಅಭಿಪ್ರಾಯದಂತೆ ಅಲೋಕ್‌ ಕುಮಾರ್‌ ವಿರುದ್ಧ ಇಲಾಖಾ ವಿಚಾರಣೆ ನಡೆಸಲಾಗುತ್ತಿದೆ. ಆರೋಪಗಳ ಮೆಮೊ ಸಹ ನೀಡಲಾಗಿತ್ತು. ಅದಕ್ಕೆ ಸಿಎಟಿ ತಡೆ ನೀಡಿದೆ. ಆರೋಪ ಪಟ್ಟಿ ಇರುವುದರಿಂದ ಅಲೋಕ್ ಕುಮಾರ್ ಅವರಿಗೆ ಮುಂಬಡ್ತಿ ಸಾಧ್ಯವಿರಲಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ವಾದ-ಪ್ರತಿವಾದ ಆಲಿಸಿದ ಪೀಠವು ಅರ್ಜಿ ವಿಚಾರಣೆಯನ್ನು ಮುಂದೂಡಿತು.

ಪ್ರಕರಣದ ಹಿನ್ನೆಲೆ: ಅರುಣ್‌ ಚಕ್ರವರ್ತಿಗೆ ಅವರಿಗೆ ಡಿಜಿಪಿ ಹುದ್ದೆಗೆ ಪದೋನ್ನತಿ ನೀಡಿ ರಾಜ್ಯ ಸರ್ಕಾರ 2025ರ ಸೆಪ್ಟೆಂಬರ್‌ 12ರಂದು ಅಧಿಸೂಚನೆ ಹೊರಡಿಸಿತ್ತು. ಅದನ್ನು ರದ್ದುಪಡಿಸುವಂತೆ ಕೋರಿ ರಾಜ್ಯ ಪೊಲೀಸ್‌ ತರಬೇತಿ ಕೇಂದ್ರದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಾದ (ಎಡಿಜಿಪಿ) ಹಿರಿಯ ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ಸಿಎಟಿಗೆ ಅರ್ಜಿ ಸಲ್ಲಿಸಿದ್ದರು. ಸಿಎಟಿಯು ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿ ಸೆಪ್ಟೆಂಬರ್‌ 19ರಂದು ಆದೇಶಿಸಿತ್ತು.

Kannada Bar & Bench
kannada.barandbench.com