
ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದ ಆರೋಪದಲ್ಲಿ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ರಾಜ್ಯಪಾಲರ ಆದೇಶವನ್ನು ಎತ್ತಿಹಿಡಿದಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಭೂಮಾಲೀಕ ಜೆ ದೇವರಾಜು ಸಲ್ಲಿಸಿರುವ ಮೂರು ಮೇಲ್ಮನವಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಏಪ್ರಿಲ್ 28ಕ್ಕೆ ಮುಂದೂಡಿದೆ.
ಸಿಎಂ ಸಿದ್ದರಾಮಯ್ಯ ಅವರು ಸೆಪ್ಟೆಂಬರ್ 24ರಂದು ಏಕಸದಸ್ಯ ಪೀಠ ನೀಡಿರುವ ಆದೇಶ ಪ್ರಶ್ನಿಸಿದ್ದು, ಸಂಬಂಧವಿಲ್ಲದಿದ್ದರೂ ತನ್ನನ್ನು ಪ್ರಕರಣದಲ್ಲಿ ಎಳೆದು ತರಲಾಗಿದೆ ಎಂದು ವಿವಾದಿತ ಜಮೀನನ್ನು ಸಿಎಂ ಭಾವಮೈದ ಮಲ್ಲಿಕಾರ್ಜುನಸ್ವಾಮಿಗೆ ಮಾರಾಟ ಮಾಡಿದ್ದ ಭೂಮಾಲೀಕ ಜೆ ದೇವರಾಜು ಪ್ರತ್ಯೇಕವಾಗಿ ಸಲ್ಲಿಸಿರುವ ಎರಡು ಮೇಲ್ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್ ಅವರ ವಿಭಾಗೀಯ ಪೀಠವು ಪಕ್ಷಕಾರರ ಕೋರಿಕೆಯಂತೆ ಏಪ್ರಿಲ್ 28ಕ್ಕೆ ಮುಂದೂಡಿತು.
ಸಿಎಂ ಸಿದ್ದರಾಮಯ್ಯ ಪರವಾಗಿ ವಕಾಲತ್ತು ಹಾಕಿರುವ ವಕೀಲ ಶತಭಿಷ್ ಶಿವಣ್ಣ ಅವರು “ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿರುವ ಮೇಲ್ಮನವಿಗಳು ಮಾರ್ಚ್ 22ಕ್ಕೆ ನಿಗದಿಯಾಗಿವೆ. ಶನಿವಾರ ನ್ಯಾಯಾಲಯದ ಕಲಾಪ ಇರುವುದಿಲ್ಲ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಕಾರರು ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 28ಕ್ಕೆ ಮುಂದೂಡಲು ಒಪ್ಪಿದ್ದಾರೆ. ಹೀಗಾಗಿ, ಮೇಲ್ಮನವಿಗಳ ವಿಚಾರಣೆ ಮುಂದೂಡಬೇಕು” ಎಂದು ಕೋರಿದರು.
ಆಗ ಪೀಠವು “ಮುಖ್ಯಮಂತ್ರಿ, ರಾಜ್ಯಪಾಲರು ಭಾಗಿಯಾಗಿರುವ ಯಾವುದೇ ವಿಚಾರ ನಮಗೆ ಗೊತ್ತಿಲ್ಲ. ಇದು ಗುಜರಾತ್ ಹೈಕೋರ್ಟ್ ಮುಂದಿದೆಯೋ ಅಥವಾ ಕರ್ನಾಟಕ ಹೈಕೋರ್ಟ್ ಮುಂದಿದೆಯೋ.. ಸರಿಯಾಗಿ ಮೆನ್ಷನ್ ಮಾಡುವುದನ್ನು ಕಲಿಯಿರಿ. ನಮಗೆ ಯಾವುದೇ ಮುಖ್ಯಮಂತ್ರಿ ಅಥವಾ ರಾಜ್ಯಪಾಲರು ಗೊತ್ತಿಲ್ಲ. ನಿಮ್ಮ ಮಿತಿಗಳನ್ನು ತಿಳಿದುಕೊಂಡು ಮೆನ್ಷನ್ ಮಾಡಬೇಕು” ಎಂದು ಏರಿದ ಧ್ವನಿಯಲ್ಲಿ ಹೇಳಿತು.
ಆಗ ಶತಭಿಷ್ ಅವರು “ಇವು ಮುಡಾ ಪ್ರಕರಣಕ್ಕೆ ಸಂಬಂಧಿಸಿದ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿರುವ ಮೇಲ್ಮನವಿಗಳಾಗಿವೆ. ಹೈಕೋರ್ಟ್ ಶನಿವಾರ ಕಲಾಪ ನಡೆಸುವುದಿಲ್ಲ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಎಲ್ಲರೂ ಒಟ್ಟಾಗಿ ವಿಚಾರಣೆ ಮುಂದೂಡುವಂತೆ ಕೋರಿದ್ದೇವೆ. ಹೀಗಾಗಿ, ಅವುಗಳನ್ನು ಏಪ್ರಿಲ್ 28ಕ್ಕೆ ವಿಚಾರಣೆ ನಡೆಸಬೇಕು” ಎಂದರು.
ಇದಕ್ಕೆ ಒಪ್ಪಿದ ಪೀಠವು ಕೊನೆಯಲ್ಲಿ “ಈ ನ್ಯಾಯಾಲಯದಲ್ಲಿ ಮುಖ್ಯಮಂತ್ರಿ, ರಾಜ್ಯಪಾಲರು, ನ್ಯಾಯಾಧೀಶರು ಎಂಬುದಿಲ್ಲ. ದಾವೆದಾರರು ಮಾತ್ರ” ಎಂದು ಬುದ್ಧಿವಾದ ಹೇಳಿತು.
ಹೈಕೋರ್ಟ್‌ನ ಏಕಸದಸ್ಯ ಪೀಠವು 2024ರ ಸೆಪ್ಟೆಂಬರ್ 24ರಂದು ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಅವರು ಅಕ್ಟೋಬರ್ 24ರಂದು ಮೇಲ್ಮನವಿ ಸಲ್ಲಿಸಿದ್ದಾರೆ. ಆನಂತರ ಭೂ ಮಾಲೀಕ ದೇವರಾಜು ಅವರು ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಎರಡು ಮೇಲ್ಮನವಿ ಸಲ್ಲಿಸಿದ್ದಾರೆ. ಐದು ತಿಂಗಳಿಂದ ಇಂದಿನವರೆಗೂ ಅರ್ಜಿಗಳು ವಿಚಾರಣೆಯನ್ನೇ ಕಂಡಿಲ್ಲ.
ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿದ್ದ ಅರ್ಜಿಯನ್ನು ಹೈಕೋರ್ಟ್‌ನ ಏಕಸದಸ್ಯ ಪೀಠವು ಈಚೆಗೆ ವಜಾ ಮಾಡಿತ್ತು. ಜಾರಿ ನಿರ್ದೇಶನಾಲಯವು ಸಿಎಂ ಪತ್ನಿ ಪಾರ್ವತಿ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹಾಗೂ ಪಾರ್ವತಿ ಅವರಿಗೆ ಆಕ್ಷೇಪಾರ್ಹವಾದ 14 ನಿವೇಶನಗಳ ಹಂಚಿಕೆ ಮಾಡಿದ ಸಂದರ್ಭದಲ್ಲಿ ಮುಡಾ ಆಯುಕ್ತರಾಗಿದ್ದ ಡಾ. ಡಿ ಬಿ ನಟೇಶ್ ವಿರುದ್ಧ ದಾಖಲಿಸಿದ್ದ ಇಸಿಐಆರ್ ಮತ್ತು ಸಮನ್ಸ್‌ಗಳನ್ನು ಹೈಕೋರ್ಟ್‌ನ ಮತ್ತೊಂದು ಏಕಸದಸ್ಯ ಪೀಠವು ವಜಾ ಮಾಡಿದೆ. ಈ ಆದೇಶವನ್ನು ಜಾರಿ ನಿರ್ದೇಶನಾಲಯವು ಪ್ರಶ್ನಿಸಿದ್ದು, ಆ ಮೇಲ್ಮನವಿಯೂ ಹೈಕೋರ್ಟ್‌ನಲ್ಲಿ ಬಾಕಿ ಇದೆ.
ಇದೆಲ್ಲದರ ಮಧ್ಯೆ, ಲೋಕಾಯುಕ್ತ ಪೊಲೀಸರು ಸಿಎಂ, ಅವರ ಪತ್ನಿ, ಭಾವ ಮೈದುನ ಸೇರಿ ಐವರ ವಿರುದ್ಧ ಯಾವುದೇ ದಾಖಲೆ ಇಲ್ಲ ಎಂದು ವಿಶೇಷ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಈಗ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ವರದಿಯಲ್ಲಿ ವ್ಯತ್ಯಾಸಗಳಿವೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೆಚ್ಚುವರಿ ಪ್ರತಿಭಟನಾ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿಯೂ ವಿಚಾರಣಾ ಹಂತದಲ್ಲಿದೆ.