ವಿವಿಧ ಹಗರಣಗಳ ಸಿಬಿಐ ತನಿಖೆಗೆ ಕೋರಿಕೆ: ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಸೂಚಿಸಿದ ಹೈಕೋರ್ಟ್‌

ಸೂಕ್ತ ದಾಖಲೆಗಳು ಹಾಗೂ ವಾದಾಂಶಗಳೊಂದಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ಎರಡು ವಾರ ಕಾಲಾವಕಾಶ ನೀಡಿ ವಿಚಾರಣೆಯನ್ನು ನವೆಂಬರ್ 29ಕ್ಕೆ ಮುಂದೂಡಿದ ನ್ಯಾಯಾಲಯ.
Chief Justice N V Anjaria and K V Aravind, Karnataka HC
Chief Justice N V Anjaria and K V Aravind, Karnataka HC
Published on

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ, ಮಹರ್ಷಿ ವಾಲ್ಮೀಕಿ ನಿಗಮ, ಪಿಎಸ್ಐ ನೇಮಕಾತಿ ಮತ್ತು ಶೇ 40ರ ಕಮಿಷನ್ ಹಗರಣಗಳೂ ಸೇರಿದಂತೆ ಈಗಿನ ಹಾಗೂ ಹಿಂದಿನ ಸರ್ಕಾರದಲ್ಲಿ ನಡೆದಿರುವ ಎಲ್ಲ ಹಗರಣಗಳ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ ವಹಿಸಬೇಕು ಎಂದು ಕೋರಲಾಗಿದ್ದ ಅರ್ಜಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ಮುಂದೂಡಿದೆ.

ಮೈಸೂರಿನ ವಕೀಲ ಸಿ ಸಂತೋಷ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ನೇತೃತ್ವದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿತು.

ಕೇವಲ ಪತ್ರಿಕಾ ವರದಿಗಳನ್ನು ಆಧರಿಸಿ ಈ ಅರ್ಜಿ ಸಲ್ಲಿಸಲಾಗಿದೆ. ನಿಮ್ಮ ಮನವಿಯನ್ನು ಪುರಸ್ಕರಿಸುವಂತಹ ಯಾವುದೇ ದೃಢೀಕೃತ ದಾಖಲೆಗಳಿಲ್ಲ. ಹೀಗಾಗಿ, ಈ ಅರ್ಜಿ ವಜಾಗೊಳಿಸಲಾಗುತ್ತದೆ ಎಂದು ಪೀಠ ಮೌಖಿಕವಾಗಿ ಹೇಳಿತು.

ಆನಂತರ ಸೂಕ್ತ ದಾಖಲೆಗಳು ಹಾಗೂ ವಾದಾಂಶಗಳೊಂದಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ಎರಡು ವಾರ ಕಾಲಾವಕಾಶ ನೀಡಿ ವಿಚಾರಣೆಯನ್ನು ನವೆಂಬರ್ 29ಕ್ಕೆ ಮುಂದೂಡಿತು.

ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಸರ್ಕಾರದ ಹಲವು ಭ್ರಷ್ಟಾಚಾರದ ವಿಚಾರಗಳು ವರದಿಯಾಗುತ್ತಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟವಾಗಿದೆ. ತಪ್ಪಿತಸ್ಥರನ್ನು ಶಿಕ್ಷಿಸುವಂತಹ ಯಾವುದೇ ತನಿಖೆಗೆ ಸರ್ಕಾರ ಆದೇಶ ನೀಡಿಲ್ಲ. ತಪ್ಪಿತಸ್ಥ ಅಧಿಕಾರಿಗಳಿಗೆ ಉನ್ನತ ಹುದ್ದೆಗಳನ್ನು ನೀಡಲಾಗುತ್ತಿದೆ. ಸ್ವತಃ ಸಿಎಂ ಕೂಡ ಸದನದಲ್ಲೇ ಸರ್ಕಾರದ ಹಲವು ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಎಲ್ಲಾ ಪ್ರಕರಣಗಳಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕಿದೆ ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಹಿಂದಿನ ಸರ್ಕಾರದ ಅವಧಿಯಲ್ಲಿ ಮತ್ತು ಈಗಿನ ಸರ್ಕಾರದ ಅವಧಿಯಲ್ಲಿ ನಡೆದಿರುವ ಹಗರಣಗಳ ಬಗ್ಗೆ ತನಿಖೆ ನಡೆಯಬೇಕು. ಇದಕ್ಕೆ ನ್ಯಾಯಾಲವೇ ಆದೇಶ ನೀಡಬೇಕು. ಏಕೆಂದರೆ, ರಾಜಕಾರಣಿಗಳು ಪರಸ್ಪರ ಗೂಬೆ ಕೂರಿಸುವ ಕೆಲಸ ಮಾಡುತ್ತಾರೆ ಹೊರತು. ಕ್ರಮಕ್ಕೆ ಮುಂದಾಗುವುದಿಲ್ಲ ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ರಾಜ್ಯದಲ್ಲಿ ನಡೆದಿರುವ ಸಾರ್ವಜನಿಕ ಹಣ ದುರ್ಬಳಕೆಯನ್ನು ತಡೆಯದಿದ್ದರೆ ಅಮಾಯಕ ಜನರಿಗೆ ನಷ್ಟವಾಗುತ್ತದೆ. ರಾಜ್ಯದ ಸಂಪತ್ತು ರಕ್ಷಣೆ ದೃಷ್ಟಿಯಿಂದ ನ್ಯಾಯಾಲಯ ಎಲ್ಲಾ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಿಕೊಡಬೇಕು ಎಂದು ಮನವಿ ಮಾಡಲಾಗಿದೆ.

ಅರ್ಜಿಯಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮ, ಎಪಿಎಂಸಿ, ಬೋವಿ ಅಭಿವೃದ್ಧಿ ನಿಗಮ, ದೇವರಾಜ ಅರಸ್ ಟ್ರಕ್ ಟರ್ಮಿನಲ್, ಪ್ರವಾಸೋದ್ಯಮ ಇಲಾಖೆ, ಪಿಎಸ್‌ಐ ಹಗರಣ, ಬಿಟ್ ಕಾಯಿನ್ ಹಣ, ಕೋವಿಡ್ ಹಗರಣ ಸೇರಿದಂತೆ ಹಾಲಿ ಸರ್ಕಾರ ಮತ್ತು ಹಿಂದಿನ ಸರ್ಕಾರದ  ಅವಧಿಯಲಿ ನಡೆದಿರುವ ಹಲವು ಭ್ರಷ್ಟಾಚಾರ ಹಗರಣಗಳನ್ನು ಪ್ರಸ್ತಾಪಿಸಲಾಗಿದೆ.

Kannada Bar & Bench
kannada.barandbench.com