ಕನ್ನಡಾಭಿಮಾನವನ್ನು ಪಹಲ್ಗಾಮ್‌ ಘಟನೆಗೆ ಹೋಲಿಸಿದ ಪ್ರಕರಣ: ಗಾಯಕ ಸೋನು ನಿಗಮ್‌ ಅರ್ಜಿ ಮೇ 15ಕ್ಕೆ ಮುಂದೂಡಿಕೆ

ಬೆಂಗಳೂರಿನ ಅವಲಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಸೋನು ನಿಗಮ್‌ ಸಲ್ಲಿಸಿರುವ ಅರ್ಜಿಯು ನಾಯಮೂರ್ತಿ ಶಿವಶಂಕರ್‌ ಅಮರಣ್ಣವರ್‌ ಅವರ ರಜಾಕಾಲೀನ ಏಕಸದಸ್ಯ ಪೀಠದ ಮುಂದೆ ಮಂಗಳವಾರ ನಡೆಯಿತು.
Sonu Nigam & Karnataka HC
Sonu Nigam & Karnataka HC
Published on

ಕನ್ನಡಾಭಿಮಾನವನ್ನು ಪಹಲ್ಗಾಮ್‌ ಘಟನೆಗೆ ತಳುಕು ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ನೀಡಲಾಗಿರುವ ದೂರು ಮತ್ತು ಆನಂತರ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಗಾಯಕ ಸೋನು ನಿಗಮ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಮೇ 15ಕ್ಕೆ ಮುಂದೂಡಿದೆ.

ಬೆಂಗಳೂರಿನ ಅವಲಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಸೋನು ನಿಗಮ್‌ ಸಲ್ಲಿಸಿರುವ ಅರ್ಜಿಯನ್ನು ನಾಯಮೂರ್ತಿ ಶಿವಶಂಕರ್‌ ಅಮರಣ್ಣವರ್‌ ಅವರ ರಜಾಕಾಲೀನ ಏಕಸದಸ್ಯ ಪೀಠ ಮಂಗಳವಾರ ನಡೆಸಿತು.

ಅರ್ಜಿದಾರ ಸೋನು ನಿಗಮ್‌ ಪರ ವಕೀಲೆ ಕವಿತಾ ದಾಮೋದರನ್‌ ಅವರು ವಾದ ಮಂಡಿಸಲು ಮುಂದಾದರು. ಆಗ ಪೀಠವು ಕಚೇರಿ ಆಕ್ಷೇಪಣೆಗೆ ಸಂಬಂಧಿಸಿದಂತೆ ವಕೀಲೆಯ ವಾದವನ್ನು ದಾಖಲಿಸಲಾಗಿದ್ದು, ವಿಚಾರಣೆಯನ್ನು ಮೇ 15ಕ್ಕೆ ಮುಂದೂಡಲಾಗಿದೆ ಎಂದು ಆದೇಶಿಸಿತು.

ಸೋನು ನಿಗಮ್‌ ಅರ್ಜಿಯಲ್ಲಿ ದೂರುದಾರ ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣಗೌಡ ಬಣ) ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಟಿ ಎ ಧರ್ಮರಾಜ ಮತ್ತು ರಾಜ್ಯ ಸರ್ಕಾರವನ್ನು ಪ್ರತಿವಾದಿಯನ್ನಾಗಿಸಲಾಗಿದೆ.

ಮೇ 5ರಂದು ಎಫ್‌ಐಆರ್‌ ಸಂಬಂಧ ತನಿಖೆಗೆ ಹಾಜರಾಗುವಂತೆ ಗಾಯಕ ಸೋನು ನಿಗಮ್‌ಗೆ ಅವಲಹಳ್ಳಿ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸೋನು ನಿಗಮ್‌ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಏಪ್ರಿಲ್‌ 25 ಮತ್ತು 26ರಂದು ಸೋನು ನಿಗಮ್‌ ಅವರು ಈಸ್ಟ್‌ ಪಾಯಿಂಟ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿಯಲ್ಲಿ ನಡೆದಿದ್ದ ಸಂಗೀತ ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಮತ್ತು ಕನ್ನಡಿಗರ ಭಾವನೆ ಕೆರಳಿಸುವ ಹೇಳಿಕೆ ನೀಡಿದ್ದಾರೆ ಎಂದು ಮೇ 2ರಂದು ದೂರು ನೀಡಲಾಗಿತ್ತು. ಇದನ್ನು ಆಧರಿಸಿ ಪೊಲೀಸರು ಮೇ 3ರಂದು ಎಫ್‌ಐಆರ್‌ ದಾಖಲಿಸಿದ್ದಾರೆ.

Also Read
ಕನ್ನಡಾಭಿಮಾನಕ್ಕೆ ಪಹಲ್ಗಾಮ್‌ ಘಟನೆ ಹೋಲಿಕೆ: ಪ್ರಕರಣ ರದ್ದತಿ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಗಾಯಕ ಸೋನು ನಿಗಮ್‌

ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳಾದ 351 (2) (ಕ್ರಿಮಿನಲ್‌ ಬೆದರಿಕೆ), 353 (ಸಾರ್ವಜನಿಕವಾಗಿ ಕಿರಿಕಿರಿ ಉಂಟು ಮಾಡುವ ಹೇಳಿಕೆ), 352(1) (ಉದ್ದೇಶಪೂರ್ವಕವಾಗಿ ಅವಮಾನ) ಅಡಿ ಧರ್ಮರಾಜ ನೀಡಿದ ದೂರಿನ ಅನ್ವಯ ಎಫ್‌ಐಆರ್‌ ದಾಖಲಿಸಲಾಗಿದೆ.

Kannada Bar & Bench
kannada.barandbench.com