ಕಲಬುರ್ಗಿ ಜಿಲ್ಲೆಯ ದರ್ಗಾದಲ್ಲಿ ಶಿವರಾತ್ರಿ ಪ್ರಯುಕ್ತ ಪೂಜೆ ನೆರವೇರಿಸಲು ಅನುಮತಿಸಿದ ಹೈಕೋರ್ಟ್‌

ಜೇವರ್ಗಿ ತಾಲ್ಲೂಕಿನ ಆಂದೋಲದ ಕರುಣೇಶ್ವರ ಮಠದ ಪೀಠಾಧಿಪತಿ ಸಿದ್ದಲಿಂಗ ಸ್ವಾಮಿ ಹೊರತುಪಡಿಸಿ 15 ಮಂದಿಯು ಫೆ.26ರಂದು ಮಧ್ಯಾಹ್ನ 2ರಿಂದ ಸಂಜೆ 6ರವರಗೆ ಪೂಜೆ ಸಲ್ಲಿಸಲು ಕಡ್ಡಾಯವಾಗಿ ತಮ್ಮ ಗುರುತಿನ ಚೀಟಿ ಕೊಂಡೊಯ್ಯಬೇಕು ಎಂದಿರುವ ಹೈಕೋರ್ಟ್‌.
Karnataka HC-Kalaburgi bench, Justice R Nataraj
Karnataka HC-Kalaburgi bench, Justice R Nataraj
Published on

“ಹಲವು ವರ್ಷಗಳ ಬಳಿಕ ಎರಡು ಸಮುದಾಯಗಳು ಸಮಾಧಿಗೆ ಪೂಜೆ ಸಲ್ಲಿಸಲು ಸಂಘರ್ಷಕ್ಕೆ ಇಳಿದಿದ್ದು, ಇದನ್ನು ನೋಡಿ ಮೇಲಿರುವ ವ್ಯಕ್ತಿ ದುಃಖಿಸುತ್ತಿರಬಹುದು” ಎಂದು ಬೇಸರಿಸಿರುವ ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿರುವ ಶೇಖ್‌ ಲಾಡ್ಲೆ ಮಶಾಕ್‌ ದರ್ಗಾದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಬುಧವಾರ ಮಧ್ಯಾಹ್ನ 2ರಿಂದ 6 ಗಂಟೆಯ ಒಳಗೆ ಪೂಜೆ ಸಲ್ಲಿಸಲು 15 ಮಂದಿ ಹಿಂದೂಗಳಿಗೆ ಷರತ್ತು ಬದ್ಧ ಅನುಮತಿ ನೀಡಿದೆ.

ಶಿವನ ವಿಶೇಷ ಹಬ್ಬವಾದ ಶಿವರಾತ್ರಿಯಂದು ಶೇಖ್‌ ಲಾಡ್ಲೆ ಮಶಾಕ್‌ ದರ್ಗಾದಲ್ಲಿ ಪೂಜೆ ಸಲ್ಲಿಸಲು ಅರ್ಜಿದಾರ ಕಲಬುರ್ಗಿಯ ಸಿದ್ರಾಮಯ್ಯ ಹಿರೇಮಠ ಮತ್ತು ಇತರರಿಗೆ ಷರತ್ತು ವಿಧಿಸಿ ಅಗತ್ಯ ರಕ್ಷಣೆ ಒದಗಿಸಲು ನಿರ್ದೇಶಿಸಬೇಕು ಎಂಬ ಮಧ್ಯಂತರ ಪರಿಹಾರದ ಕೋರಿಕೆಯನ್ನು ನ್ಯಾಯಮೂರ್ತಿ ಆರ್‌ ನಟರಾಜ್‌ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಶ್ರೀರಾಮ ಸೇನೆಯ ಗೌರವಾಧ್ಯಕ್ಷರಾದ ಜೇವರ್ಗಿ ತಾಲ್ಲೂಕಿನ ಆಂದೋಲದ ಕರುಣೇಶ್ವರ ಮಠದ ಪೀಠಾಧಿಪತಿ ಸಿದ್ದಲಿಂಗ ಸ್ವಾಮಿ ಹೊರತುಪಡಿಸಿ 15 ಮಂದಿಯು ಫೆಬ್ರವರಿ 26ರಂದು ಮಧ್ಯಾಹ್ನ 2ರಿಂದ ಸಂಜೆ 6ರವರಗೆ ಪೂಜೆ ಸಲ್ಲಿಸಲು ಕಡ್ಡಾಯವಾಗಿ ತಮ್ಮ ಗುರುತಿನ ಚೀಟಿ ಕೊಂಡೊಯ್ಯಬೇಕು.

ಹಿಂದೂ ಅಥವಾ ಮುಸ್ಲಿಂ ಸಮುದಾಯದವರು ದರ್ಗಾದಲ್ಲಿ ಹಾನಿ ಉಂಟು ಮಾಡಬಾರದು. ವಿವಾದದ ಸಂಬಂಧ ಹೈಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣ ಇತ್ಯರ್ಥವಾಗುವವರೆಗೆ ಸಿಲಿಂಡರಿನಾಕಾರದ ವಸ್ತುವನ್ನು ಹಾಗೆಯೇ ಕಾಪಾಡಬೇಕು. ಹಿಂದೂ ಅಥವಾ ಮುಸ್ಲಿಂ ಸಮುದಾಯದವರು ಶಾಶ್ವತ ಅಥವಾ ತಾತ್ಕಾಲಿಕವಾಗಿ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ, ಯಥಾಸ್ಥಿತಿ ಕಾಪಾಡಬೇಕು.

ದರ್ಗಾದಲ್ಲಿರುವ ಸಿಲಿಂಡರಿನಾಕಾರದ ವಸ್ತುವಿಗೆ ಹಿಂದೂ ಸಮುದಾಯದವರು ಹೂವು ಹಾಕಿ, ದೀಪ ಬೆಳಗಿ, ಅಭಿಷೇಕ ಇತ್ಯಾದಿ ಮಾಡಿ ಪೂಜೆ ಸಲ್ಲಿಸಬಹುದು. ಪೂಜಾ ಉದ್ದೇಶಕ್ಕಾಗಿ ಹಿಂದೂಗಳು ತಾತ್ಕಾಲಿಕವಾಗಿಯೂ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ. ಸಮಾಧಿಯಲ್ಲಿನ ಸಿಲಿಂಡರಿನಾಕಾರದ ವಸ್ತುವನ್ನು ಶಿವಲಿಂಗ ಎಂದು ವ್ಯಾಖ್ಯಾನಿಸಬಾರದು.

ಈಗ ನೀಡಿರುವ ಅನುಮತಿಯು ಹಾಲಿ ಹೈಕೋರ್ಟ್‌ನಲ್ಲಿ ಬಾಕಿ ಇರುವ ಸಿವಿಲ್‌ ಮರುಪರಿಶೀಲನಾ ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ. ಕಲಬುರ್ಗಿ ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗಳು ಅಗತ್ಯ ರಕ್ಷಣೆ ಒದಗಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ದರ್ಗಾದಲ್ಲಿ ಶಿವರಾತ್ರಿಯ ಪ್ರಯುಕ್ತ ಪೂಜೆ ಸಲ್ಲಿಸಲು ಅನುಮತಿಸಬೇಕು ಎಂದು ಕೋರಿ ಸಲ್ಲಿಕೆಯಾದ ಅರ್ಜಿಯ ಹಿನ್ನೆಲೆಯಲ್ಲಿ ನ್ಯಾಯಾಲಯವು ವಕೀಲ ಜೆ ಅಗಸ್ಟೀನ್‌ ಅವರನ್ನು ನ್ಯಾಯಾಲಯದ ಆಯುಕ್ತರನ್ನಾಗಿ ನೇಮಿಸಿ ವರದಿ ನೀಡಲು ಸೂಚಿಸಿತ್ತು.

ಪೊಲೀಸರು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ದರ್ಗಾಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಗಸ್ಟೀನ್‌ ಅವರು ದರ್ಗಾದಲ್ಲಿನ ಸಿಲಿಂಡರಿನಾಕಾರದ ವಸ್ತುವನ್ನು ಒಳಗೊಂಡು ತಮಗೆ ಕಂಡ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ವಿಸ್ತೃತವಾದ ವರದಿ ನೀಡಿದ್ದರು. ಇದರಲ್ಲಿ 2023 ಮತ್ತು 2024ರಲ್ಲಿ ಹಿಂದೂಗಳು ಪೂಜೆ ಸಲ್ಲಿಸಿರುವುದಕ್ಕೆ ಸಂಬಂಧಿಸಿದ ಕೆಲವು ಫೋಟೊಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಮುಸ್ಲಿಮರು ದರ್ಗಾದಲ್ಲಿ ಸಂತ ಹಜರತ್‌ ಮರ್ದಾನ್‌-ಇ-ಗೈಬ್‌ ಅವರ ಸಮಾಧಿ ಇದೆ ಎಂದು ವಾದಿಸಿದ್ದು, 400 ವರ್ಷಗಳ ಹಿಂದೆ ರಾಘವ ಚೈತನ್ಯ ಅವರು ಶಿವಲಿಂಗ ಸ್ಥಾಪಿಸಿ ಆಳಂದಲ್ಲಿಯೇ ಕೊನೆಯ ಉಸಿರು ಚೆಲ್ಲಿದರು ಎಂಬುದು ಹಿಂದೂಗಳ ವಾದವಾಗಿದೆ.

2024ರ ಫೆಬ್ರವರಿ 6ರಂದು ಕರ್ನಾಟಕ ವಕ್ಫ್‌ ನ್ಯಾಯಾಧಿಕರಣವು ಆಂದೋಲದ ಕರುಣೇಶ್ವರದ ಸಿದ್ದಲಿಂಗಸ್ವಾಮಿ ಅವರನ್ನು ದರ್ಗಾ ನಿರ್ವಹಣೆ ಸಮಿತಿಯ ಆಡಳಿತದಲ್ಲಿ ಹಸ್ತಕೇಪ ಮಾಡದಂತೆ ನಿರ್ಬಂಧಿಸಿದ್ದು, ಅರ್ಜಿದಾರರು ಅಥವಾ ಸಿದ್ದಲಿಂಗಸ್ವಾಮಿ ಅಥವಾ ಹಿಂದೂ ಸಮದಾಯದ ಯಾವುದೇ ವ್ಯಕ್ತಿಗಳು ದರ್ಗಾ ಪ್ರವೇಶಿಸುವ ಅಧಿಕಾರ ಹೊಂದಿಲ್ಲ ಎಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿರುವ ಅರ್ಜಿಯು ಹೈಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ.

ಸುಪ್ರೀಂ ಕೋರ್ಟ್‌ ಅಶ್ವಿನಿ ಉಪಾಧ್ಯಾಯ ಪ್ರಕರಣದಲ್ಲಿ ಯಾವುದೇ ಆದೇಶ ಮಾಡದಂತೆ ಕೆಳ ನ್ಯಾಯಾಲಯಗಳಿಗೆ ಆದೇಶಿಸಿದೆ ಎಂದು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಹೇಳಿದ್ದಾರೆ. ದರ್ಗಾದಲ್ಲಿರುವ ಸಿಲಿಂಡರಿನಾಕಾರದ ವಸ್ತುವನ್ನು ಶಿವಲಿಂಗ ಎಂದು ಊಹಿಸಿಕೊಂಡರೆ ಪೂಜಾ ಸ್ಥಳಗಳ ಕಾಯಿದೆ 1991ರ ನಿಬಂಧನೆಗಳು ಅನೂರ್ಜಿತವಾಗಲಿದ್ದು, ಅದು ಹಿಂದೂ ನಂಬಿಕೆಗಳ ಪರವಾಗಿ ಹೋಗಲಿದೆ. ಇದನ್ನು ಹೊರತುಪಡಿಸಿ, ಕಾಯಿದೆಯ ಸೆಕ್ಷನ್‌ 2(ಸಿ) ಅನ್ವಯ ದರ್ಗಾವು ಪೂಜಾ ಸ್ಥಳವೇ ಎಂಬ ಪ್ರಶ್ನೆಯ ಬಗ್ಗೆ ಆಳವಾಗಿ ಚರ್ಚಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ. ಅರ್ಜಿದಾರರ ಪರವಾಗಿ ವಕೀಲ ಮಂಜುನಾಥ್‌ ಎಸ್‌. ಹಲವಾರ್‌ ವಾದಿಸಿದ್ದರು.

Attachment
PDF
Sidramayya Hiremath Vs State of Karnataka
Preview
Kannada Bar & Bench
kannada.barandbench.com